ಬೆಂಗಳೂರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿರುವ ಅಬಕಾರಿ ವಿಚಕ್ಷಣ ದಳ ನಾಲ್ವರನ್ನು ಬಂಧಿಸಿ 9 ಪ್ರಕರಣಗಳನ್ನು ದಾಖಲಿಸಿ 13.13 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಅಬಕಾರಿ ಇಲಾಖೆ ರಾಜ್ಯ ವಿಚಕ್ಷಣ ದಳದ ಸಿಬ್ಬಂದಿ ಫೆಬ್ರುವರಿಯಿಂದೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಂಡು 9 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ವೇಳೆ ಹುಂಡೈ ಅಸೆಂಟ್ ಕಾರು ಸೇರಿದಂತೆ 5 ವಾಹನಗಳನ್ನು ವಶಪಡಿಸಿಕೊಂಡಿರುವ ಸಿಬ್ಬಂದಿ, 2576 ಲೀಟರ್ ಗೋವಾ ರಾಜ್ಯದ ಮದ್ಯ, 65 ಲೀಟರ್ ಸೇಂದಿ, 94 ಲೀಟರ್ ಮದ್ಯ, 3,300 ಲೀಟರ್ ಬೀರ್ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದ್ದು, ಎಲ್ಲಾ ಪ್ರಕರಣಗಳ ತನಿಖೆ ಕೈಗೊಳ್ಳಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಗೋವಾ ರಾಜ್ಯದ 2576 ಲೀ. ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಸಂಗ್ರಹಿಸಿದ್ದ ಬಗ್ಗೆ ಅಬಕಾರಿ ವಿಚಕ್ಷಣ ದಳದ ಸಿಬ್ಬಂದಿ ಪತ್ತೆ ಹಚ್ಚಿ ಮಾಲನ್ನು ವಶಪಡಿಸಿಕೊಂಡಿದೆ. ಚುನಾವಣೆಯಲ್ಲಿ ಅಕ್ರಮ ಮದ್ಯ ಹಂಚಿಕೆಯಾಗುವುದನ್ನು ತಡೆಗಟ್ಟಲು ಇಲಾಖೆಯು ಈಗಾಗಲೇ ಕಾರ್ಯೋನ್ಮುಖವಾಗಿದೆ.