ಹಾವೇರಿ:
ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಉಚಿತ ಕಡ್ಡಾಯ ಶಿಕ್ಷಣ ಕಾಯ್ದೆಗಳ ಕುರಿತು ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಬುಡಕಟ್ಟು ಹಾಗೂ ಅಲೆಮಾರಿ ಜನಾಂಗಗಳಿಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ವಾಯ್. ಮರಿಸ್ವಾಮಿ ಅವರು ಹೇಳಿದರು.
ಗುರುವಾರ ನಗರದ ಎಸ್.ಜೆ.ಎಂ. ಪದವಿ ಪೂರ್ವ ಕಾಲೇಜನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ(1098) ಕೇಂದ್ರ, ಚೈಲ್ಡ್‍ಲೈನ್ ಇಂಡಿಯಾ ಫೌಂಡೇಶನ್ ಮುಂಬೈ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾವೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಚೈಲ್ಡ್‍ಲೈನ್ ಸೇ ದೋಸ್ತಿ ವೀಕ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ಬಹಳ ಜನರಿಗೆ ಈ ಕಾನೂನುಗಳ ಬಗ್ಗೆ ಅರಿವಿಲ್ಲ. ಹಾಗಾಗಿ ಜನರ ಬಳಿಗೆ ತೆರಳಿ ಈ ಕಾನೂನುಗಳ ಬಗ್ಗೆ ಅರಿವು ಮೂಡಬೇಕು. 1970ರಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಭಿಕ್ಷಾಟನೆ ಪ್ರವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಭಿಕ್ಷಾಟನೆ ಸಮಾಜದಲ್ಲಿ ಅತ್ಯಂತ ಕೀಳು ಪ್ರವೃತ್ತಿಯಾಗಿದೆ. ಇಂದಿನ ದಿನಮಾನದಲ್ಲಿ ಈ ಪ್ರವೃತ್ತಿ ಸಮಾಜಕ್ಕೆ ಹಾಗೂ ದೇಶಕ್ಕೆ ಶೋಭೆತರುವಂತದ್ದಲ್ಲ. ಬುಡಕಟ್ಟು ಹಾಗೂ ಅಲೆಮಾರಿ ಜನಾಂಗದವರು ಖಾಯಂ ವಿಳಾಸವಿಲ್ಲದೆ ಊರಿಂದ ಊರಿಗೆ ವಲಸೆಹೋಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಅವರ ಮಕ್ಕಳು ಭಿಕ್ಷಾಟನೆ ಸಾಮಾನ್ಯವಾಗಿದೆ. ಈ ಸಮಾಜದವರಿಗೆ ಅರಿವು ಮೂಡಿಸಿ ಹೊಸ ಬದುಕು ಕಟ್ಟಿಕೊಡಬೇಕು ಹಾಗೂ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ಹೇಳಿದರು.
ಬಾಲ್ಯ ವಿವಾಹದಿಂದ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಕುರಿತು ಜಾಗೃತಿ ಮೂಡಿಸಬೇಕು. ಮದುವೆಗೆ ಹೆಣ್ಣಿಗೆ 18 ವರ್ಷ ಹಾಗೂ 21 ವರ್ಷ ನಿಗಧಿಪಡಿಸಿದೆ. ಈ ವಯಸ್ಸಿನೊಳಗೆ ಮದುವೆ ಮಾಡಿಸಿದರೆ ಬಾಲ್ಯವಿವಾಹವಾಗುತ್ತದೆ. ಬಾಲ್ಯ ವಿವಾಹ ತಡೆಯುವುದು ಕೇವಲ ಒಂದು ಇಲಾಖೆಯ ಕೆಲಸವಲ್ಲ, ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ ಹಾಗೂ ಸಾರ್ವಜನಿಕ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಬಾಲ್ಯ ವಿವಾಹ ನಡೆಯುತ್ತಿರುವ ಕುರಿತು ಮಕ್ಕಳ ಸಹಾಯವಾಣಿ 1098ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳು ಬರುತ್ತಿವೆ. ನಿಮ್ಮ ಅಕ್ಕಪಕ್ಕದಲ್ಲಿ ಬಾಲ್ಯವಿವಾಹಗಳು ಕಂಡುಬದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಮೂಲಕ ಸುಭದ್ರ ಸಮಾಜ ನಿರ್ಮಾಣಕ್ಕೆ ಎಲ್ಲರೂ ನೆರವಾಗಬೇಕು ಎಂದು ಹೇಳಿದರು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಯಲು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ. ಇಂತಹ ಪ್ರಕರಣಗಳಲ್ಲಿ ಅಪರಾಧಿಗೆ 3 ರಿಂದ 10 ವರ್ಷಗಳ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕಾಯ್ದೆ ಕುರಿತು ಜನರಿಗೆ ಅರಿವು ಮೂಡಿಸಬೇಕು. ಅಂಗವಿಕಲತೆ ಒಂದು ಶಾಪವಲ್ಲ. ತಾಯಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪೌಷ್ಠಿಕಾಂಶಗಳ ಕೊರತೆ ಹಾಗೂ ರಕ್ತಹೀನತೆಯಂತಹ ತೊಂದರೆಯಿಂದ ಬಳಲುತ್ತಿದ್ದ ಪರಿಣಾಮ ವಿಕಲಚೇತನ ಮಕ್ಕಳ ಜನನವಾಗುತ್ತದೆ. ಇತರರಂತೆ ಈ ಮಕ್ಕಳಿಗೆ ಸಮಾಜದಲ್ಲಿ ಸಮಾನವಾದ ಹಕ್ಕುಗಳಿವೆ. ಅವರನ್ನು ಕುರುಡ, ಕುಂಟ, ಕಿವುಡ ಎಂದು ಕರೆಯಬಾರದು. ವಿಕಲಚೇತರನ್ನು ಸಹ ಗೌರವದಿಂದ ಕಾಣಬೇಕು ಎಂದು ಹೇಳಿದರು.
ಇಂದು ಶಿಕ್ಷಣ ವ್ಯಾಪಾರೀಕಣ ಹಾಗೂ ಖಾಸಗೀಕರಣವಾಗಿದೆ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ವ್ಯಕ್ತಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿತವರು ಎಂಬುದನ್ನು ನೆನಪಿಸಿಕೊಳ್ಳಬೇಕು. ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ, ಆರ್ಥಿಕ ಮುಗ್ಗಟ್ಟಿನಿಂದ ಕೆಲವು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಉಚಿತ ಕಡ್ಡಾಯ ಶಿಕ್ಷಣ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಆಯೋಗ ಸದಾ ಕಾಲ ನಿಮ್ಮ ಧ್ವನಿಯಾಗಿ ಕೆಲಸಮಾಡುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಪರ ಜಿಲ್ಲಾಧಿಕಾರಿಗಳಾದ ವಿನೋದ ಕುಮಾರ ಹೆಗ್ಗಳಿಗಿ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಮಕ್ಕಳು ಸಹ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ದುಶ್ಚಟಗಳಿಗೆ ಬಲಿಯಾಗದೆ ಶ್ರದ್ಧೆಯಿಂದ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಹೆಚ್.ಮಜೀದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ನವಂಬರ್ 15 ರಿಂದ 22ರವರೆಗೆ ಚೈಲ್ಡ್‍ಲೈನ್ ಸೇ ದೋಸ್ತಿ ವೀಕ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. “ಆನ್‍ಲೈನ್ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳು” ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಬಾಲ ಬಿಕ್ಷುಕ/ಬಿಕ್ಷಾಟನೆಯಲ್ಲಿ ಗುರುತಿಸಿಕೊಳ್ಳುವ ಮಕ್ಕಳನ್ನು ತಪ್ಪಿಸಲು ಮತ್ತು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ವಿಶೇಷ ಜಾಗೃತಿ ಕಾರ್ಯಕ್ರಮ, “ಬಾಲ್ಯವಿವಾಹ ಮತ್ತು ದೈಹಿಕ ನಿಂದನೆ (ಶಿಕ್ಷೆ) ಕುರಿತು ವಿಶೇಷ ಅರಿವು ಕಾರ್ಯಕ್ರಮ ಹಾಗೂ “ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾಯ್ದೆ-2012”ರ ಕುರಿತಾದ ಮಾಹಿತಿ ತಿಳಿಸುವುದರೊಂದಿಗೆ “ಬಿಳಿ ಪಟ್ಟಿ”(ಬಿಳಿ ರಿಬ್ಬನ್) ಕಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪೋಸ್ಟ್‍ರ್ ಬಿಡುಗಡೆ: ಇದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿಯ ಪೋಷ್ಟರ್ ಬಿಡುಗಡೆ ಮಾಡಲಾಯಿತು ಹಾಗೂ ಅಧಿಕಾರಿಗಳಿಗೆ ಮಕ್ಕಳು ಸುರಕ್ಷಾ ಬಂಧನ ಕಟ್ಟಿಸಿದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ, ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕಿ ಶ್ರೀಮತಿ ಗೀತಾ ಪಾಟೀಲ್, ಎಚ್.ಡಿ.ಬಳಿಗಾರ, ಶ್ರೀಮತಿ ಅಂಬಿಕಾ ಜಾಲಗಾರ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ