“ ಸಹಕಾರಿ ರತ್ನ “ ಪ್ರಶಸ್ತಿಗಾಗಿ ಸಚಿವರು ಮತ್ತು ರಾಜಕಾರಣಿಗಳ ಪೈಪೋಟಿ

ಬೆಂಗಳೂರು

         ರಾಜ್ಯದಲ್ಲಿ ನಡೆಯುತ್ತಿರುವ 65ನೇ ಸಹಕಾರಿ ಸಪ್ತಾಹ ಸಂದರ್ಭದಲ್ಲಿ ನೀಡುವ “ ಸಹಕಾರಿ ರತ್ನ “ ಪ್ರಶಸ್ತಿಯಲ್ಲಿ ಈ ಬಾರಿ ಸಚಿವರು ಮತ್ತು ರಾಜಕಾರಣಿಗಳ ನಡುವೆ ಪೈಪೋಟಿ ಆರಂಭವಾಗಿದೆ.

          ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಬಂದರು, ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಕೋಲಾರದ ಹಿರಿಯ ರಾಜಕಾರಣಿ, ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರ ಹೆಸರುಗಳು ಪ್ರಶಸ್ತಿಗಾಗಿ ಮಂಚೂಣಿಗೆ ಬಂದಿವೆ.

         ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದರೆ, ಇದೀಗ ಜಿ.ಟಿ. ದೇವೇಗೌಡರು ಸಹಕಾರಿ ರತ್ನ ಪ್ರಶಸ್ತಿಯ ಹೊಸ್ತಿಲಲ್ಲಿದ್ದಾರೆ.

         ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಸಚಿವರು ಮತ್ತು ಶಾಸಕರನ್ನೇ ಹೆಚ್ಚಿನ ಪ್ರಮಾಣದಲ್ಲಿ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತಿದ್ದು, ಇದು ಕಾಂಗ್ರೆಸ್ ಪಾಳಯದಲ್ಲೂ ತೀವ್ರ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ.

        ಇದೀಗ ಕಾಂಗ್ರೆಸ್ ಹಿನ್ನೆಲೆಯಿರುವ ರಾಜಕಾರಣಿಗಳನ್ನೂ ಸಹ ಪ್ರಶಸ್ತಿಗಾಗಿ ಪರಿಗಣಿಸುವ ಅನಿವಾರ್ಯತೆ ಹೆಚ್ಚಾಗಿದೆ. ಹೀಗಾಗಿ ಪ್ರಶಸ್ತಿಗಾಗಿ ಮೈತ್ರಿ ಕೂಟದಲ್ಲೇ ಪೈಪೋಟಿ ತೀವ್ರಗೊಳ್ಳುವ ಸಂಭವವಿದೆ.

        ಪ್ರತಿವರ್ಷ ನವೆಂಬರ್ 14 ರಿಂದ ನಡೆಯುವ ಸಹಕಾರಿ ಸಪ್ತಾಹ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದ ಆರು ಮಂದಿ ಸಹಕಾರಿಗಳಿಗೆ “ಸಹಕಾರಿ ರತ್ನ“ ಪ್ರಶಸ್ತಿ ನೀಡಿ ಗೌರವಿಸುವುದು ವಾಡಿಕೆ.

       ಬೀದರ್‍ನಲ್ಲಿ ಇದೇ 14 ರಂದು ನಡೆಯಲಿರುವ ಸಹಕಾರಿ ಸಪ್ತಾಹ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಆರು ಮಂದಿ ಸಹಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. 2003 ರಿಂದ ಸಹಕಾರಿ ರತ್ನ ಪ್ರಶಸ್ತಿ ನೀಡುತ್ತಿದ್ದು, ಈವರೆಗೆ 98 ಮಂದಿಗೆ ಈ ಪುರಸ್ಕಾರ ದೊರೆತಿದೆ.

      ಜಿ.ಟಿ. ದೇವೇಗೌಡರು ಸುಮಾರು 20 ವರ್ಷಗಳ ಕಾಲ ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ಸಹಕಾರಿ ಕ್ಷೇತ್ರದ ವಿವಿಧ ಆಯಾಮಗಳಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ಸಹಕಾರಿ ರತ್ನ ಪ್ರಶಸಿಗಾಗಿ ಅವರ ಹೆಸರು ಮಂಚೂಣಿಗೆ ಬಂದಿದೆ.

       ಇನ್ನು ವೆಂಟರಾವ್ ನಾಡಗೌಡ ಮತ್ತು ಶ್ರೀನಿವಾಸ ಗೌಡ ಅವರು ಸಹ ಸಹಕಾರಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಮೂರು ಮಂದಿ ಜೆಡಿಎಸ್ ನಾಯಕರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರಿದೆ.

        ಇದೀಗ ಆಯ್ಕೆ ಸಮಿತಿ ಸಿದ್ಧಪಡಿಸಿರುವ ಅರ್ಹರ ಪಟ್ಟಿಯಲ್ಲಿ ಆರು ಮಂದಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಇದೀಗ ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಹೆಗಲಿಗೆ ಬಿದ್ದಿದೆ.

       ಜೆಡಿಎಸ್ ಜತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಹಿನ್ನೆಲೆಯಿರುವವರನ್ನೂ ಸಹ ಪ್ರಶಸ್ತಿಗೆ ಆಯ್ಕೆ ಮಾಡಿ ಸರಿದೂಗಿಸಬೇಕಾದ ಸಂದಿಗ್ದತೆಯಲ್ಲಿ ಮುಖ್ಯಮಂತ್ರಿ ಸಿಲುಕಿದ್ದಾರೆ.

         ಇತ್ತೀಚೆಗೆ ಸರ್ಕಾರ ನೀಡುವ ಯಾವುದೇ ಪ್ರಶಸ್ತಿಗಳಿಗೆ ರಾಜಕೀಯ ನಾಯಕರನ್ನೇ ಹೆಚ್ಚಾಗಿ ಆಯ್ಕೆ ಮಾಡುತ್ತಿರುವುದು ಸಹ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾಜ ಕಲ್ಯಾಣ ಇಲಾಖೆ ನೀಡುವ ದೇವರಾಜ ಅರಸು, ವಾಲ್ಮೀಕಿ ಪ್ರಶಸ್ತಿಗಳನ್ನು ಹೆಚ್ಚಾಗಿ ರಾಜಕಾರಣಿಗಳಿಗೆ ನೀಡುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

        ಅರಸು ಪ್ರಶಸ್ತಿಗೆ ಕಾಂಗ್ರೆಸ್ಸಿಗರಾದ ಆರ್.ಎಲ್. ಜಾಲಪ್ಪ, ದಿವಂಗತ ಬಿ.ಎ. ಮೊಯಿದ್ದೀನ್, ಮಲ್ಲಿ ಕಾರ್ಜುನ ಖರ್ಗೆ, ಈ ಬಾರಿಯ ವಾಲ್ಮೀಕಿ ಪ್ರಶಸ್ತಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ನೀಡಲಾಗಿದೆ.

       ಇತ್ತೀಚೆಗೆ ಪ್ರಶಸ್ತಿಗೆ ರಾಜಕಾರಣಿಗಳನ್ನೇ ಆಯ್ಕೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಶಸ್ತಿಗಳು ಸಹ ರಾಜಕೀಕರಣಗೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಪ್ರಶಸ್ತಿ ಆಯ್ಕೆ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಬಹುದೊಡ್ಡ ಸವಾಲಾಗಿ ಪರಿಣಿಮಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap