ತುಮಕೂರು
ಸಾಧಕರ ಜೀವನ ಚರಿತ್ರೆಗಳು ಮುಂದಿನ ತಲೆಮಾರಿನವರು ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ. ಡಾ. ಶಿವಕುಮಾರ ಸ್ವಾಮೀಜಿಗಳ ಬಗ್ಗೆ ನಮಗೆ ನಿಮಗೆಲ್ಲಾ ತಿಳಿದಿದೆ, ಆದರೆ ಮುಂದಿನ ಜನಾಂಗಕ್ಕೆ ಪೂಜ್ಯರ ವ್ಯಕ್ತಿತ್ವ ದರ್ಶನ ಮಾಡಿಸಲು ಅವರ ಜೀವ ಚರಿತ್ರೆ ನೆರವಾಗುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗಸ್ವಾಮೀಜಿ ಹೇಳಿದರು.
ನಗರದಲ್ಲಿ ನಡೆದ, ವಿದ್ವಾನ್ ಹರಳೂರು ಶಿವಕುಮಾರ್ ಅವರು ಡಾ. ಶಿವಕುಮಾರಸ್ವಾಮೀಜಿಗಳ ಸಾರ್ಥಕ ಬದುಕು ಕುರಿತು ರಚಿಸಿರುವ, ಶಂಭು ಪ್ರಕಾಶನ ಪ್ರಕಟಿಸಿರುವ ದಾಸೋಹ ಭಾಸ್ಕರ ಗ್ರಂಥ ಬಿಡುಗಡೆ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಡಾ. ಶಿವಕುಮಾರಸ್ವಾಮೀಜಿಗಳು ಗಡಿಯಾರವೇ ನಾಚಬೇಕು ಎನ್ನುವಷ್ಟು ಸಮಯ ಪಾಲಕರಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತು, ಸಮಯ ಪಾಲನೆ ಮಹತ್ವ ಹಾಗೂ ಅವರ ಕಾಯಕನಿಷ್ಠೆ, ಸೇವೆ ನಮಗೆಲ್ಲಾ ತಿಳಿದಿದೆ. ಮುಂದಿನ ತಲೆಮಾರಿನವರಿಗೆ ಶ್ರೀಗಳ ಬದುಕು ಅಚ್ಚರಿ ಎನಿಸಬಹುದು. ಅದು ಅವರ ಬದುಕಿಗೆ ಪ್ರೇರಣೆಯಾಗಬಹುದು. ಹೀಗಾಗಿ, ಜೀವನ ಚರಿತ್ರೆಗಳು ಬದುಕು ಕಟ್ಟಿಕೊಳ್ಳಲು ದಾರಿ ದೀಪ ಆಗಬಹುದು ಎಂದು ಹೇಳಿದರು.
ಡಾ. ಶಿವಕುಮಾರಸ್ವಾಮೀಜಿಗಳ ಜೀವನ ಚರಿತ್ರೆಯನ್ನು ಇಂಗ್ಲೀಷ್ ಭಾಷೆಯ;ಲ್ಲಿ ಬರೆಯಲು ಲೇಖಕಿ ಡಾ. ಎಂ ಎಸ್ ಆಶಾದೇವಿ ಒಪ್ಪಿಕೊಂಡಿದ್ದಾರೆ ಎಂದರು.ದಾಸೋಹ ಭಾಸ್ಕರ ಗ್ರಂಥ ಕುರಿತು ಮಾತನಾಡಿದ ವಿಮರ್ಶಕಿ ಡಾ. ಎಂ ಎಸ್ ಆಶಾದೇವಿ, ಸ್ವಾಮೀಜಿಯವರ ಜೀವನ ಚರಿತ್ರೆ ಓದಿದಾಗ, ಶ್ರೀಗಳು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದ ಇವ ನಮ್ಮವ ಇವ ನಮ್ಮವ ಎಂಬ ಪ್ರೇಮ ತತ್ವ ಅನುಭವಕ್ಕೆ ಬರುತ್ತದೆ. ನಡೆದಾಡುವ ದೇವರ ಸಾಧನೆ ಬೆರಗು ಹುಟ್ಟಿಸುತ್ತದೆ. ಜೀವನದುದ್ದಕ್ಕೂ ಉಳಿಸಿಕೊಂಡು ಬಂದಿದ್ದ ಮನುಷ್ಯ ಪ್ರೀತಿ, ಜೀವನ ಪ್ರೀತಿ ಕಂಡುಬರುತ್ತದೆ ಎಂದರು.
ಅನ್ನ ದೇವರು, ಶಿಕ್ಷಣ ದೇವರು ಎಂಬ ಮಾತನ್ನು ಅನುಸರಿಸಿಕೊಂಡು ಬಂದವರು ಎಂದು ಹೇಳಿದ ಡಾ. ಆಶಾದೇವಿ, ಶರಣನಾಗುವುದು ಸುಲಭವಲ್ಲ, ತನ್ನ ಸ್ವಾರ್ಥ, ಅಹಂಕಾರವನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಾ ತನ್ನ ವ್ಯಕ್ತಿತ್ವವನ್ನು ಸಮುದಾಯಕ್ಕೆ ಅಳವಡಿಸಿಕೊಳ್ಳುತ್ತಾರೋ ಅವರೇ ನಿಜವಾದ ಶರಣರು ಎಂದರು.
ಮಠ ಪರಂಪರೆ ಇಲ್ಲದಿದ್ದರೆ ಕರ್ನಾಟಕದ ಶೈಕ್ಷಣಿಕ, ಸಾಂಸ್ಕೃತಿಕ ಸ್ಥಿತಿ ಈಗಿನಂತಿರುತ್ತಿರಲಿಲ್ಲ. ನಾಡಿಗೆ ಮಠಗಳು ನೀಡಿದ ಕೊಡುಗೆ ಅಪಾರ. ಮಠಗಳನ್ನು ವಚನ ಪರಂಪರೆಯ ಮುಂದುವರೆದ ಭಾಗದಂತೆ ನೋಡಬೇಕು ಎಂದು ಹೇಳಿದರು.ತುಮಕೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಪರಶಿವಮೂರ್ತಿ ಅವರು ದಾಸೋಹ ಭಾಸ್ಕರ ಕೃತಿ ಬಿಡುಗಡೆ ಮಾಡಿ, ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ದೊಡ್ಡ ಸ್ಥಾನ ಹೊಂದಿದೆ. ಜೀವನ ಚರಿತ್ರೆಗಳು ಮಾದರಿ ವ್ಯಕ್ತಿತ್ವವನ್ನು ಪರಿಚಯಿಸುತ್ತವೆ. ಗುರಿ ಸಾಧಿಸಲು ಮಾದರಿ ವ್ಯಕ್ತಿಗಳನ್ನು ಇಟ್ಟುಕೊಂಡು ಮುನ್ನಡೆದಾಗ ಸುಲಭವಾಗುತ್ತದೆ ಎಂದರು.
ಯಾರನ್ನು ಮಾದರಿಯನ್ನಾಗಿ ಸ್ವೀಕರಿಸಬೇಕು ಎಂಬುದೇ ಇಂದಿನ ಯುವ ಜನಾಂಗಕ್ಕೆ ದೊಡ್ಡ ಗೊಂದಲವಾಗಿದೆ. ಸರಿಯಾದ ಮಾದರಿ ಇಲ್ಲದಿದ್ದರೆ ಜೀವನ ರೂಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಡಾ. ಶಿವಕುಮಾರಸ್ವಾಮಿಗಳ ಜೀವನ ಚರಿತ್ರೆಯು, ಹೇಗೆ ಮಾದರಿಯಾಗಿ ನಿಲ್ಲಬೇಕು ಎಂದು ಮುಂದಿನ ತಲೆಮಾರಿಗೆ ಹೇಳುತ್ತದೆ ಎಂದರು.ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್, ದಾಸೋಹ ಭಾಸ್ಕರ ಗ್ರಂಥ ರಚಿಸಿದ ವಿದ್ವಾನ್ ಹರಳೂರು ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
