ಹಾವೇರಿ
ಸ್ವಾತಂತ್ರ್ಯ ಎನ್ನುವದು ಒಂದು ಅನನ್ಯ ಅನುಭೂತಿ, ಇತಂಹ ಅಪೂರ್ವ ಅನುಭೂತಿಯ ಹಿಂದೆ ಅನೇಕ ಹುತಾತ್ಮರ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವಿದೆ. ಈ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಭಾರತೀಯರಾದ ನಮ್ಮ ಮೇಲೆ ಇದೆ. ಅಂಥ ಮಹಾತ್ಮರ ಸ್ಮರಣೆ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಾಹಿತಿ ಕೆ.ಬಿ ಬಿಕ್ಷಾವರ್ತಿಮಠ ಹೇಳಿದರು.
ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೊರಾಟಗಾರ ದಿ. ಸಂಗೂರ ಕರಿಯಪ್ಪ, ದಿ.ಚನ್ನಪ್ಪ ಚೌಶೆಟ್ಟಿ, ದಿ. ಬಸಪ್ಪ ಮಾಗನೂರ ಮತ್ತು ತುಳಜಪ್ಪ ಲಮಾಣಿ ಇವರ ದತ್ತಿನಿಧಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಜವಾಬ್ದಾರಿಯುತ ಪ್ರಜೆಗಳಾದ ನಾವು ದೇಶದ ವೈವಿಧ್ಯಮಯ ಭಾಷೆ, ಸಂಸ್ಕತಿ, ಮತಗಳಿಗೆ ಸೂಕ್ತ ಗೌರವ ನೀಡಿ, ಭಾರತದ ಸಮಗ್ರತೆಗೆ ಧಕ್ಕೆ ತರದೇ ಐಕ್ಯತೆ ಮೂಲ ಮಂತ್ರದೊಂದಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ರಾಜಕೀಯ ಉದ್ದೇಶಕ್ಕಾಗಿ ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಮಾತುಗಳಿಗೆ ಕಡಿವಾಣ ಹಾಕಬೇಕಾಗಿದ್ದು ಇಂದಿನ ಅವಶ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಕೋರಗಲ್ಲ ವಿರುಪಾಕ್ಷಪ್ಪ ಮಾತನಾಡಿ, ಇಂದು ನಾವು ಸಮಾನತೆ, ಜಾತ್ಯಾತೀತತೆ ಮೊದಲಾದ ಮೌಲ್ಯಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅವುಗಳನ್ನು ಕೃತಿಯಲ್ಲಿ ತರುವುದಿಲ್ಲ. ಆದರೆ ಸ್ವಾತಂತ್ರ್ಯ ಹೊರಾಟಗಾರರು ತಮ್ಮ ನಡೆ ನುಡಿಯಲ್ಲಿ ಸಮನ್ವತೆಯನ್ನು ಕಾಪಾಡಿಕೊಂಡಿದ್ದರು. ಅವರ ತತ್ವಾದರ್ಶಗಳನ್ನು ನಾನೆಲ್ಲರೂ ಪಾಲಿಸಬೇಕಾಗಿದೆ ಎಂದು ಹೆಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಳಿದಾಸ ಶಿಕ್ಷಣ ಸಂಸ್ಥೆಯ ಚೇರಮನ್ನ ಎಸ್.ಎಫ್.ಎನ್ ಗಾಜಿಗೌಡ್ರ ಮಾತನಾಡಿ, ಇಂದು ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವು ತುಂಬಿ ತುಳುಕುತ್ತಿದ್ದು, ದೇಶಾಭಿಮಾನ ಪ್ರಾಮಾಣಿಕತೆಗಳು ಮಾಯವಾಗಿವೆ. ಈ ದಿಶೆಯಲ್ಲಿ ನಾಡಿನ ಪ್ರವಂತರು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕಾಗಿದೆ. ದತ್ತಿನಿಧಿಗಳಂತಹ ಕಾರ್ಯಕ್ರಮಗಳು ಸಂಸ್ಕತಿಯನ್ನು ವರ್ಗಾಯಿಸುವ ಮಹತ್ತರ ಕಾರ್ಯ ಮಾಡುತ್ತವೆ ಎಂದು ಹೇಳಿದರು. ತಾಲೂಕಾ ಕಸಾಪ ಅಧ್ಯಕ್ಷ ವಾಯ್.ಬಿ ಆಲದಕಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಸ.ಎನ್ ದೊಡ್ಡಗೌಡರ, ಅಜ್ಜನಗೌಡ್ರ ಗೌಡಪ್ಪನವರ, ಬಿ.ಎಂ ಮಠದ, ರುದ್ರಪ್ಪ ಜಾಬೀನ, ಜಿ.ಎನ್ ಹೂಗಾರ, ಸಲೀಮ್ ದೇವಿಹೊಸೂರ, ಎಸ್.ಎಂ ಬಡಿಗೇರ, ಸಿ.ಎಸ್ ಮರಳಿಹಳ್ಳಿ, ಸಿ.ಜಿ ತೋಟಣ್ಣನವರ .ಮುಖ್ಯೋಪಾಧ್ಯಾಯ ಎಂ.ಎಸ್ ಕೆಂಚನಗೌಡರ ಶಿಕ್ಷಕ ಸಿ.ಜಿ ಚಿಕ್ಕಮಠ ವಿಜಯಕುಮಾರ ಹಾವನೂರ ಅನೇಕರಿದ್ದರು.