ಶಕುನಿ ತಿಮ್ಮನಹಳ್ಳಿ ತಾಂಡಾದಲ್ಲಿ ದೀಪಾವಳಿ ವಿಶೇಷ ಆಚರಣೆ

ಕೊರಟಗೆರೆ

           ಬಲಿಪಾಡ್ಯಮಿ ನಿಮಿತ್ತ ಕೊರಟಗೆರೆ ತಾಲ್ಲೂಕಿನ ಶಕುನಿತಿಮ್ಮನಹಳ್ಳಿ ಲಂಬಾಣಿ ತಾಂಡದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಅವರ ಸಂಸ್ಕತಿ, ಸಂಪ್ರದಾಯ, ಆಚಾರ ವಿಚಾರ ಸೇರಿದಂತೆ ಅವರದೇ ಆದ ಭಾಷೆಯಲ್ಲಿ ಸಾಂಸ್ಕತಿಕ ಕಾರ್ಯಕ್ರಮದೊಂದಿಗೆ ನೂರಾರು ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರ್ರಮದಿಂದ ಆಚರಿಸಿದರು.

        ಬಲಿಪಾಡ್ಯಮಿ ನಿಮಿತ್ತ ಬಂಜಾರ ದೇವರ ನಾಮ ಸ್ಮರಣೆಯೊಂದಿಗೆ ಅಪ್ಪ, ಅಮ್ಮ, ಅಣ್ಣ, ತಮ್ಮ, ಗುರು, ಹಿರಿಯರ ಗುಣಗಾನ ಮಾಡಿ ಅವರಿಗೆ ನಮಸ್ಕಾರ ಸಲ್ಲಿಸಿದರು. ವóರ್ಷೇದಾಡ್‍ಕೋರ್ ದವಾಳಿ ಬಾಪು ತೋನ ಮೇರಾ, ಸೇವಾಲಾಲ್‍ತೋನ ಮೇರಾ, ಮರಿಯಮ್ಮತೋನ ಮೇರಾ ಎಂಬ ಶುಭಾಶಯದ ಹಾಡು ಬಂಜಾರ ಸಮುದಾಯದ ಪ್ರತಿತಾಂಡಾದ ಪ್ರತಿ ಮನೆಗಳಲ್ಲಿ ದೀಪಾವಳಿ ಹಬ್ಬದ ಅಮಾವಾಸ್ಯೆಯ ಸಂಜೆ ಕೇಳಿಬರುವಂತೆಯೆ ಈ ತಾಂಡಾದಲ್ಲೂ ಹಾಡಿ, ವಿಶೇಷ ಪೂಜೆ ಕೈಂಕರ್ಯಗಳನ್ನು ಮಾಡಿದರು.

        ಪ್ರತಿ ಲಂಬಾಣಿ ತಾಂಡಾಗಳಲ್ಲಿಯೂ ದೀಪಾವಳಿ ಹಬ್ಬದಂದು ಅವಿವಾಹಿತ ಹೆಣ್ಣು ಮಕ್ಕಳಷ್ಟೆ ಇತ್ತೀಚೆಗೆ ದೇವಸ್ಥಾನದ ಬಳಿ ದೀಪ ಹಚ್ಚಿ ನಂತರ ಗ್ರಾಮದ ಮನೆ ಮನೆಗೂ ಪ್ರತಿಯೊಬ್ಬ ಮಹಿಳೆಯರು ದ್ವೇಷ ಅಸೂಯೆ ಮರೆತು ಈ ಹಬ್ಬದಂದು ದೀಪ ಹಚ್ಚುವುದರ ಜೊತೆಗೆ ತಮ್ಮ ತಾಂಡಾದಲ್ಲಿರುವ ಕತ್ತಲನ್ನು ಹೋಗಲಾಡಿಸಿ ಹಾಗೂ ಸಮೃದ್ದಿ ಬೆಳಕನ್ನು ಕರುಣಿಸುವಂತೆ ಮತ್ತು ಎಲ್ಲಾ ಕುಟುಂಬದವರಿಗೂ ಆ ದೇವರು ಆರೋಗ್ಯ, ಐಶ್ವರ್ಯ ಕೊಡಲಿ ಎಂದು ಎಲ್ಲಾ ಹೆಣ್ಣು ಮಕ್ಕಳು ದೇವರಲ್ಲಿ ಪ್ರಾರ್ಥಿಸಿದರು.

        ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡ ಗಾಡಿರಾಮಾನಾಯ್ಕ್ ಮಾತನಾಡಿ, ಬುಡಕಟ್ಟು ಜನಾಂಗದವರಾಗಿರುವ ನಮಗೆ, ಸರ್ಕಾರ ಈಗಾಗಲೇ ಪ್ರತಿವರ್ಷವೂ ಫೆಬ್ರುವರಿ 15 ರಂದು ಸರ್ಕಾರಿ ಕಚೇರಿಗಳಲ್ಲಿ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಆಚರಣೆ ಮಾಡಲು ಈ ಹಿಂದಿನ ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು ಸಂತಸದ ವಿಚಾರವಾಗಿದೆ. ತಾಂಡಾ ಅಭಿವೃದ್ದಿ ನಿಗಮಕ್ಕೆ ಇನ್ನಷ್ಟು ಅನುದಾನ ನೀಡುವ ಮೂಲಕ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಈ ಜನಾಂಗದ ಬೆಳವಣಿಗೆಗೆ ಇನ್ನಷ್ಟು ಕೈ ಜೋಡಿಸುವಂತಾಗಬೇಕು ಎಂದರು.

       ಗ್ರಾಮಸ್ಥರಾದ ಗ್ರಾ.ಪಂ. ಸದಸ್ಯೆ ನೇತ್ರಾವತಿ ಕಾಳಿಚರಣ್, ಕೀರಾನಾಯ್ಕ, ಹನುಮನಾಯ್ಕ, ಚಲಪತಿನಾಯ್ಕ, ಸುಬ್ರಹ್ಮಣ್ಯ, ಕಾಳಿಂಗ ನಾಯ್ಕ್, ಮಾಗೇಶ್ ನಾಯ್ಕ್, ಬಾಬುನಾಯ್ಕ್, ಜ್ಯೋತಿ, ವಿನೋದ ಬಾಯಿ, ಚೈತ್ರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link