ಮಧುಗಿರಿ
ಜಾತಿ, ಮತ, ಬಣ್ಣಗಳ ಗಡಿಯನ್ನು ದಾಟಿ ನಿಸರ್ಗ ಧರ್ಮವನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ವಿಶ್ವ ಮಟ್ಟಕ್ಕೆ ಏರುತ್ತಾನೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಕಾರ ರತ್ನ ಕೆ.ಎನ್.ಆರ್. ಸಭಾಂಗಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ವಿಶ್ವ ಯುವಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಳ್ಳಿಗಾಡಿನಿಂದ ಬಂದಿದ್ದೇವೆ ಎಂಬ ಕೀಳರಿಮೆ ಎಂದಿಗೂ ಬೇಡ. ಸಾಧನೆ ಮಾಡುವ ನಿಟ್ಟಿನಲ್ಲಿ ಚಿಂತಿಸ ಬೇಕು. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವು. ಏಕೆಂದರೆ ಕರ್ನಾಟಕದಲ್ಲಿ ಎಲ್ಲಾ ಭಾಷೆಗೂ ಮತ್ತು ಎಲ್ಲಾ ಸಂಸ್ಕೃತಿಗೂ ಒಂದೇ ರೀತಿಯ ಸಮಾನತೆಯನ್ನು ನಮ್ಮ ಸರಕಾರಗಳು ನೀಡುತ್ತ ಬಂದಿವೆ. ಧರ್ಮವೆಂದರೆ ನಿತ್ಯವೂ ಕೂಡ ಬದಲಾಣೆಗೆ ತಕ್ಕಂತೆ ಬದಲಾದಾಗ ನಮ್ಮ ಸಮಾಜ ಸದೃಢವಾಗಿ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ.ಎಸ್.ಸಿ.ಸೋಮಶೇಖರ್ ಮಾತನಾಡಿ, ಹುಟ್ಟು ಮತ್ತು ಸಾವು ಮುಖ್ಯವಲ್ಲ. ಇವೆರಡರ ಮಧ್ಯೆ ನಾವು ನೀಡುವ ಕೊಡುಗೆಯೇ ಬಹು ಮುಖ್ಯ. ವಿವೇಕಾನಂದರ ಬದುಕೆ ಒಂದು ಹೋರಾಟದ ಬದುಕು. ಆದ್ದರಿಂದ ನಾವು ಕೂಡ ನಮ್ಮ ಜೀವನದಲ್ಲಿ ವಿವೇಕಾನಂದರ ರೀತಿಯಲ್ಲಿ ಹೋರಾಟ ರೂಢಿಸಿಕೊಂಡರೆ, ನಮ್ಮ ಜೀವನ ಉನ್ನತ ಮಟ್ಟಕ್ಕೇರುತ್ತದೆ. ಎಂದೇ ಆಗಲಿ ಪ್ರತಿಭೆ ಎಂಬುದು ಹುಟ್ಟುವುದು ಗುಡಿಸಲಲ್ಲಿಯೇ ಹೊರತು, ಅರಮನೆಗಳಲ್ಲ. ಬಡತನ, ಹಸಿವು ಹಾಗೂ ನೋವು ಎಂಬುದು ಮನುಷ್ಯನಿಗೆ ಸಾಧನೆಯ ದಾರಿ ತೋರಿಸುತ್ತದೆ. ಆದ್ದರಿಂದ ಮನುಷ್ಯನಿಗೆ ಇವೆಲ್ಲವನ್ನು ಮೆಟ್ಟಿ ನಿಲ್ಲುವ ಛಲವಿರಬೇಕೆಂದರು.
ಕಾರ್ಯಕ್ರಮದಲ್ಲಿ ಕುವೆಂಪುರವರ ಗೀತೆಗಳನ್ನು ಲಲಿತಾ ಲಕ್ಷ್ಮೀನರಸಯ್ಯ ಹಾಡಿದರು. ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು, ಪ್ರಾಂಶುಪಾಲ ಡಿ.ಎಸ್.ಮುನೀಂದ್ರ ಕುಮಾರ್, ಪ್ರೊ.ಮಲನ ಮೂರ್ತಿ, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪ್ರಾಧ್ಯಾಪಕರಾದ ಕೆ.ದಿವಾಕರ, ಕೆ.ಟಿ.ಸ್ವಾಮಿ, ನೀರಕಲ್ಲು ರಾಮಕೃಷ್ಣ, ಪದಾಧಿಕಾರಿಗಳಾದ ವಿಜಯಮೋಹನ್, ಹೆಚ್.ಡಿ.ನರಸೆಗೌಡ, ರಂಗಸ್ವಾಮಿ, ಪುಟ್ಟಸ್ವಾಮಿ, ವೀಣಾಶ್ರೀನಿವಾಸ್, ಪ್ರಾಧ್ಯಾಪಕ ಎಂ.ಜಿ.ಲಕ್ಷ್ಮೀಪತಯ್ಯ, ನಾಗಪ್ಪ, ಸುರೇಶ್, ವಿದ್ಯಾರ್ಥಿಗಳು, ಇತರರಿದ್ದರು.