ಬೆಂಗಳೂರು
ಆಪರೇಷನ್ ಕಮಲ ಕಾರ್ಯಾಚರಣೆಯ ಸಂಚು ರೂಪಿಸಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ. ಅವರೇ ಮಧ್ಯ ರಾತ್ರಿಯಲ್ಲಿ ಶರಣಗೌಡರನ್ನು ಮಾತುಕತೆಗಾಗಿ ಯಡಿಯೂರಪ್ಪ ಅವರ ಬಳಿ ಕಳುಹಿಸಿದ್ದರು ಎಂದು ಬಿಜೆಪಿ ಆರೋಪಿಸಿದೆ.
ಶರಣಗೌಡರೊಂದಿಗೆ ಕುಮಾರ ಸ್ವಾಮಿ ಮಾತುಕತೆ ನಡೆಸಿದ್ದು ನಿಜ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಆದರೆ ಆಡಿಯೋದಲ್ಲಿರುವುದು ಮುಖ್ಯಮಂತ್ರಿ ಅವರ ಸುಳ್ಳು ಮತ್ತು ಕಟ್ಟು ಕಥೆಯಾಗಿದೆ. ಆಡಿಯೋದಲ್ಲಿರುವ ಧ್ವನಿ ತಮ್ಮದಲ್ಲ. ಶರಣಗೌಡರನ್ನು ಮಾತ್ರ ಭೇಟಿಯಾಗಿದ್ದು, ಇದಕ್ಕೆ ಬೇರೆ ಬೇರೆ ರೀತಿಯ ಅರ್ಥ ಕಲ್ಪಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರ ಎನ್. ರವಿಕುಮಾರ್ ಹೇಳಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕುಮಾರ ಸ್ವಾಮಿ ಅವರು ಮಹಾನ್ ನಾಟಕವಾಡುತ್ತಿರುವುದು ಈಗಾಗಲೇ ಹಲವಾರು ಬಾರಿ ಋಜುವಾತಾಗಿದೆ. ಆ ಧ್ವನಿ ತಮ್ಮದ್ದಾಗಿದ್ದರೆ ತಾಜಕೀಯ ನಿವೃತ್ತಿ ಪಡೆಯುವುದಾಗಿ ಯಡಿಯೂರಪ್ಪ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ ಎಂದಿದ್ದಾರೆ.
ರಾಜಕೀಯವಾಗಿ ಯಾವುದೇ ಪರಿಶ್ರಮ ಹಾಕದೇ ಇದ್ದರೂ ಅನಾಯಾಸವಾಗಿ ಮುಖ್ಯಮಂತ್ರಿ ಹುದ್ದೆ ಸಿಕ್ಕಿದ್ದು, ಕುಮಾರ ಸ್ವಾಮಿ ಅವರು ಜನಹಿತ ಕೆಲಸ ಮಾಡಬೇಕು. ವಿಜುಗೌಡರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಲು 25 ಕೋಟಿ ರೂಗೆ ಬೇಡಿಕೆ ಇಟ್ಟಿದ್ದಾದರೂ ಏಕೆ ಎಂಬುದನ್ನು ಕುಮಾರ ಸ್ವಾಮಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜೆಡಿಎಸ್ ನಾಯಕರು ಅನೇಕ ರೀತಿಯ ಕುತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಪಾರಾಗಲು ಬಿಜೆಪಿ ನಾಯಕರ ಮೇಲೆ ಆರೋಪ ಹೊರಿಸುತ್ತಿರುವುದು ಖಂಡನೀಯ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
