ಬೆಂಗಳೂರು
ಕೋವಿಡ್ 19 ಸೋಂಕು ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ – ಐಐಎಸ್ ಸಿ ವಿಜ್ಞಾನಿಗಳ ತಂಡ ಮೂಲ ಮಾದರಿಯ ವೆಂಟಿಲೇಟರ್ ಅನ್ವೇಷಣೆಯಲ್ಲಿ ತೊಡಗಿದೆ.
ಬಹುತೇಕ ದೇಶಗಳಲ್ಲಿ ಲಾಕ್ ಡೌನ್ ಘೋಷಿಸಿರುವ ಕಾರಣ ವೆಂಟಿಲೇಟರ್ ಗಳ ಉತ್ಪಾದನೆಗೆ ಅಗತ್ಯವಾಗಿರುವ ಪ್ರಮುಖ ಬಿಡಿ ಭಾಗಗಳು ಆಮದಾಗುತ್ತಿಲ್ಲ. ಇದರಿಂದಾಗಿ ಕೋವಿಡ್ 19 ಸೋಂಕಿತರಿಗೆ ತೀರಾ ಅನಿವಾರ್ಯವಾಗಿರುವ ವೆಂಟಿಲೇಟರ್ ಗಳು ಸಿಗುತ್ತಿಲ್ಲ. ಈ ಸಮಸ್ಯೆ ನಿವಾರಣೆಗಾಗಿ ಐಐಎಸ್ ಸಿ ಇಂಜಿನಿಯರ್ ಗಳು ಎಲೆಕ್ಟ್ರೋ ಮೆಕಾನಿಕಲ್ ವೆಂಟಿಲೇಟರ್ ತಯಾರಿಕೆಯಲ್ಲಿ ತೊಡಗಿದ್ದಾರೆ.
ಬ್ರಿಟನ್‍ನ ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆಯ ಮಾರ್ಗಸೂಚಿಯಂತೆ ದೇಶೀಯ ಪರಿಕರಗಳನ್ನು ಬಳಸಿಕೊಂಡು ಇನ್ನು ಕೆಲವೇ ವಾರಗಳಲ್ಲಿ ವೆಂಟಿಲೇಟರ್ ಗಳನ್ನು ಉತ್ಪಾದನೆಮಾಡುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.
ಐಐಎಎಸ್‍ಸಿಯ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಇಂಜಿನಿಯರಿಂಗ್‍ನ ಪ್ರಧಾನ ವಿಜ್ಞಾನಿ ಟಿ.ವಿ. ಪ್ರಭಾಕರ್, ನಾವು ತಯಾರಿಸುತ್ತಿರುವ ವೆಂಟಿಲೇಟರ್ ಗಳನ್ನು ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾಗಿದೆ. ಇದಕ್ಕಾಗಿ ಹತ್ತು ದಿನಗಳಿಂದ ಎಡೆಬಿಡದೇ ಅನ್ವೇಷಣೆಯಲ್ಲಿ ತೊಡಗಿದ್ದೇವೆ ಎಂದರು.
ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಗೌರಬ್ ಬ್ಯಾನರ್ಜಿ, ಏಪ್ರಿಲ್ ಅಂತ್ಯದ ವೇಳೆಗೆ ಉತ್ಪಾದಕರು ತಮ್ಮದೇ ಆದ ವೆಂಟಿಲೇಟರ್ ಮಾದರಿಗಳನ್ನು ಉತ್ಪಾದಿಸಲು ನಮ್ಮ ಪ್ರಯತ್ನ ಸಹಕಾರಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕೋವಿಡ್ 19 ಚಿಕಿತ್ಸೆಗಾಗಿ ದೇಶದಲ್ಲಿ ಕೇವಲ 40 ಸಾವಿರ ವೆಂಟಿಲೇಟರ್ ಗಳು ಮಾತ್ರ ಇವೆ. ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಕೂಡ ತೀವ್ರವಾಗಲಿದೆ, ಹೀಗಾಗಿ ಐಐಎಸ್ ಸಿ ಪರಿಣಿತರ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದು ಆಶಾಭಾವನೆ ಮೂಡಿಸಿದೆ.ಕೋವಿಡ್ -19ನಿಂದ ಗಂಭೀರವಾಗಿ ತೊಂದರೆಗೊಳಗಾಗುವ ಮತ್ತು ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿರುವರಿಗೆ ವೆಂಟಿಲೇಟರ್ ಮೂಲಕ ಆಮ್ಲಜನಕ ಪೂರೈಸಬೇಕಾಗುತ್ತದೆ. ವೆಂಟಿಲೇಟರ್ ರೋಗಿಗೆ ಗಾಳಿ ಹಾಗೂ ಆಮ್ಲಜನಕ ಮತ್ತು ಆಹಾರವನ್ನು ಕೂಡ ಒದಗಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ