ಹಿರಿಯೂರು :
ವಕೀಲರ ಸಂರಕ್ಷಣಾ ಕಾಯಿದೆಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಈ ಕೂಡಲೇ ಜಾರಿಗೆ ತರಬೇಕು ಎಂಬುದಾಗಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ಭಾರತೀಯ ವಕೀಲರ ಪರಿಷತ್ ನಿರ್ದೇಶನದ ಮೇರೆಗೆ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಒತ್ತಾಯಿಸಿ ನಗರದ ಎಲ್ಲಾ ವಕೀಲರು ಕೋರ್ಟ್ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆಯ ಮೂಲಕ ನಗರದ ತಾಲ್ಲೂಕು ಕಛೇರಿಗೆ ಆಗಮಿಸಿ ತಾಲ್ಲೂಕು ತಹಶೀಲ್ದಾರ್‍ರವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ, ಪ್ರಧಾನಮಂತ್ರಿಯವರಿಗೆ ಲಿಖಿತ ಮನವಿಯನ್ನು ಸಲ್ಲಿಸಿ ಅವರು ಮಾತನಾಡಿದರು.
ವಕೀಲರ ರಕ್ಷಣಾ ಕಾಯಿದೆಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಈ ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ದೇಶಾದ್ಯಂತ ಭಾರತೀಯ ವಕೀಲರ ಪರಿಷತ್ ನೇತೃತ್ವದಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ವಕೀಲರಿಗೆ ಸಿಗಬೇಕಾದ, ವಿಮಸೌಲಭ್ಯ, ಸ್ಟೈಪಂಡರಿ ಸೌಲಭ್ಯ, ಆಕ್ಸಿಡೆಂಟ್ ಆದ ಸಂದರ್ಭದಲ್ಲಿ ಸೌಲಭ್ಯ, ವಕೀಲರ ಮಸೂದೆ ತಿದ್ದುಪಡಿ ಸೇರಿದಂತೆ ಇತರೆ ಸೌಲಭ್ಯಗಳಿಗೆ ಸರ್ಕಾರವನ್ನು ಒತ್ತಾಯಿಸಿದರು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ ಸೇರಿದಂತೆ ಸಂಘದ ಜಂಟಿಕಾರ್ಯದರ್ಶಿ ಕೆ.ರಾಜಪ್ಪ, ವಕೀಲರುಗಳಾದ, ಮಹಲಿಂಗಪ್ಪ, ರಫೀಕ್, ರಮೇಶ್, ಆರ್.ಸುರೇಶ್, ಬಿ.ಜಗದೀಶ್, ತಿಪ್ಪೇಸ್ವಾಮಿ, ಬಿ.ವಿಜಯ್, ದೃವಕುಮಾರ್, ಆರ್.ತಿಪ್ಪೇಸ್ವಾಮಿ, ಎಸ್.ಈರಣ್ಣ, ಕಾಂತರಾಜ್, ವೆಂಕಟೇಶ್ ಸೇರಿದಂತೆ ಅನೇಕ ವಕೀಲರುಗಳು ಭಾಗವಹಿಸಿದ್ದರು.