ಬೆಂಗಳೂರು
ಟ್ರಿನಿಟಿ ನಿಲ್ದಾಣದ ಬಳಿಯಿರುವ ಮೆಟ್ರೋ ಕಂಬದಲ್ಲಿನ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಒಂದು ದಿನ ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ದುರಸ್ತಿ ಕೆಲಸ ನಡೆಯುತ್ತಿದೆ. ಒಂದು ದಿನ ಪಿಲ್ಲರ್ ಕಂಬದ ಅಂತರ ಸರಿಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಬೇಕೋ ಬೇಡವೋ ಎನ್ನುವುದನ್ನು ಚರ್ಚೆ ಮಾಡುತ್ತೇವೆ. ಒಂದು ವೇಳೆ ಸ್ಥಗಿತ ಮಾಡುವ ಅನಿವಾರ್ಯತೆ ಬಂದರೆ ಈ ಭಾನುವಾರ ಅಥವಾ ಮುಂದಿನ ಭಾನುವಾರ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಮೆಟ್ರೋ ನಿಗಮ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದಾರೆ.
ಗುಣಮಟ್ಟದ ಕೊರತೆಯಿಂದ ಅಥವಾ ಎಂಜಿನಿಯರ್ ತಪ್ಪಿನಿಂದ ಕಂಬದಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಹನಿಕೂಮ್ ಕಾಂಕ್ರೀಟ್ (ಮಿಶ್ರಣ)ದಿಂದಾಗಿ ಹೀಗೆ ಆಗುವುದು ಸಾಮಾನ್ಯ. ಹೀಗಾಗಿ ಬೈಯಪ್ಪನಹಳ್ಳಿ ಹಾಗೂ ನಾಯಂಡಹಳ್ಳಿ ಮಾರ್ಗದಲ್ಲಿ ಸ್ವಲ್ಪ ಈ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಂಬಗಳನ್ನು ಮುಖಾಮುಖಿಯಾಗಿ ನಿರ್ಮಾಣ ಮಾಡಿಲ್ಲ. ಮುಂದಿನ ತಿರುವಿನ ಭಾರವನ್ನು ಹೊತ್ತುಕೊಳ್ಳುವ ರೀತಿಯಲ್ಲಿ ವಿನ್ಯಾಸ ಮಾಡಿದ್ದೇವೆ. ಈ ಭಾನುವಾರ ಅಥವಾ ಮುಂದಿನ ಭಾನುವಾರ ದುರಸ್ತಿ ಮಾಡಲಿದ್ದೇವೆ. ಜನ ಆತಂಕ ಪಡುವುದು ಬೇಡ. ನಮ್ಮ ಎಂಜಿನಿಯರ್ ಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ಬೇರೆ ಭಾಗದ ತಜ್ಞರಿಂದಲೂ ಸಲಹೆ ಪಡೆದಿದ್ದೇವೆ ಎಂದು ತಿಳಿಸಿದರು.
ದುರಸ್ತಿ ಕಾರ್ಯದ ವೇಳೆ ಮೆಟ್ರೋ ಸಂಚಾರ ತೊಂದರೆ ಆಗುತ್ತದೆ. ಹೀಗಾಗಿ ಮೆಜೆಸ್ಟಿಕ್ ಭಾಗದಲ್ಲಿ ಹೆಚ್ಚಿನ ಮೆಟ್ರೋ ರೈಲು ಸಂಚಾರ ಮಾಡಲಿವೆ. ಆದರೆ ಸದ್ಯದ ಮಟ್ಟಿಗೆ ಸಂಚಾರದಲ್ಲಿ ಕೊಂಚ ಏರು ಪೇರು ಆಗಿದೆ. ಪ್ರಯಾಣಿಕರು ಸಹಕರಿಸಬೇಕು. ಆಂತರಿಕ ತನಿಖೆ ನಡೆಯುತ್ತಿದೆ. ಪಿಲ್ಲರ್ ನಲ್ಲಿ ಯಾವುದೇ ದೋಷವಿಲ್ಲ ಎಂದು ಮಾಹಿತಿ ನೀಡಿದರು.
ಮೆಟ್ರೋ ಗುಣಮಟ್ಟದಲ್ಲಿ ರಾಜಿಯಾಗಲ್ಲ. ಲೋಡ್ ಹೆಚ್ಚಳದಿಂದ ಪಿಲ್ಲರ್ ನಲ್ಲಿ ಬಿರುಕು ಉಂಟಾಗಿಲ್ಲ. ಕಾಂಕ್ರೀಟ್ ಮಿಶ್ರಣದ ತೊಂದರೆಯಿಂದ ಈ ರೀತಿ ಆಗಿರಬಹುದು ಎಂದು ಸ್ಪಷ್ಟನೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
