ಬೆಂಗಳೂರು
ಕಳೆದ 2016ರ ನವೆಂಬರ್ 9 ರಂದು ನೋಟು ಅಮಾನ್ಯೀಕರಣ ಮಾಡಿದ ಕರಾಳದಿನವನ್ನು ಇತಿಹಾದಲ್ಲಿ ಯಾರೂ ಮರೆಯಲು ಸಾಧ್ಯವಿಲ್ಲ ಮುಂಬೈ ದಾಳಿ,ನ್ಯೂಯಾರ್ಕ್ ಮೇಲಿನ ದಾಳಿಯಷ್ಟು ನೋಟ್ ಅಮಾನ್ಯೀಕರಣ ದಾಳಿ ಭೀಕರ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟೀಕಿಸಿದ್ದಾರೆ.
ಒಂದು ಸಾವಿರ ಐನೂರು ಮುಖಬೆಲೆಯ ನೋಟು ರದ್ದುಗೊಳಿಸಿ ಎರಡು ವರ್ಷ ಕಳೆದಿರುವುದನ್ನು ಕಪ್ಪು ದಿನ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ನೀಡಿ ಮೋದಿ’ಎಂಬ ಘೋಷ ವಾಕ್ಯದೊಂದಿಗೆ ನಗರದಲ್ಲಿ ಶುಕ್ರವಾರ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೋಟು ಅಮಾನ್ಯೀಕರಣ ಸಮಸ್ಯೆಯು ದೇಶದ ಪ್ರತಿಯೊಬ್ಬರನ್ನೂ ಕಾಡಿದೆ. ಎಲ್ಲಾ ವರ್ಗದವರ ಆರ್ಥಿಕ ವಹಿವಾಟಿಗೂ ಪೆಟ್ಟು ಕೊಟ್ಟಿದೆ ಎಂದು ಆರೋಪಿಸಿದರು.
ಪೆಟ್ರೋಲ್ ದರ ಏರಿಕೆ ಮೂಲಕ ಜನರಿಗೆ ಸಂಕಷ್ಟವಾಗಿದೆ.ಜೊತೆಗೆ, ಏಕಾಏಕಿ ನೋಟು ಅಮಾನ್ಯೀಕರಣ ದಿಂದಲೂ ಬಹಳ ಸಮಸ್ಯೆ ಆಗಿದೆ ಎಂದ ಅವರು, ಕೇಂದ್ರ ಸರ್ಕಾರ ಲೂಟಿ ಕೋರರನ್ನ ರಕ್ಷಣೆ ಮಾಡುತ್ತಿದೆ.ಇವೆಲ್ಲಾ, ಕೇಂದ್ರ ಸರ್ಕಾರ ಮಾಡಿದ ಸಾಧನೆ ಎಂದು ಹೇಳಿದರು.
ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ನೋಟು ರದ್ದತಿ ಅರ್ಥ ವ್ಯವಸ್ಥೆ ಸುಧಾರಣೆಗೆ ಮದ್ದು ಎಂದು ಬಿಂಬಿಸಲಾಗಿತ್ತು. ಆದರೆ ನೋಟು ಅಮಾನ್ಯೀಕರಣ ವಿತ್ತ ವ್ಯವಸ್ಥೆ ಸುಧಾರಿಸಿಕೊಳ್ಳಲಾರದಂತೆ ಮಾಡಿದ ಬಿಜೆಪಿಯಿಂದ ದೇಶವನ್ನ ರಕ್ಷಿಸಬೇಕಿದೆ ಎಂದರು.
ಮೋದಿ ಸರ್ಕಾರ ಸೂಟು, ಬೂಟಿನ ಸರ್ಕಾರ ಸಾಮಾನ್ಯ ಜನರ ಕಷ್ಟಸುಖ ಈ ಸರ್ಕಾರಕ್ಕೆ ಗೊತ್ತಾಗಲ್ಲ ಎಂದ ಅವರು, ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಆದರೆ,ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದ್ರೂ ಲೋಕಪಾಲ ನೇಮಕ ಮಾಡಲಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಎರಡು ವರ್ಷದ ಹಿಂದೆ ನೋಟ್ ಬ್ಯಾನ್ ಮಾಡಿದ್ದರು.ದೇಶದ 130 ಜನರಿಗೆ ಶೋಷಣೆ ಮಾಡಿದ್ದಾರೆ.ಇದು ದೇಶದ ಇತಿಹಾಸದಲ್ಲೇ ಘೋರ ದುರಂತ ಎಂದು ಬಣ್ಣಿಸಿದರು.
ಗುಡ್ಡ ಅಗೆಯಲು ಹೋಗಿ ಇಲಿಯನ್ನೂ ಹಿಡಿಯಲಿಲ್ಲ.ನೋಟ್ ಬ್ಯಾನ್ ನಿಂದ ಬರೀ ಸಂಕಷ್ಟವೇ ತುಂಬಿದೆ.ಉದ್ಯೋಗ ಸಿಗುತ್ತಿಲ್ಲ, ಕಾರ್ಮಿಕರಿಗೆ ಕೂಲಿ ಸಿಗುತ್ತಿಲ್ಲ, ಜಿಡಿಪಿ ಉತ್ಪಾದನೆ ಕುಂಠಿತವಾಗಿದೆ ರೈತರು ಸಂಕಷ್ಟಕ್ಕೆ ಬಿದ್ದಿದ್ದಾರೆ,ವ್ಯಾಪಾರ ಕುಸಿದಿದೆ ಹಾಗೂ ಇಡೀ ಆರ್ಥಿಕ ವ್ಯವಸ್ಥೆಯೇ ಕುಸಿದುಹೋಗಿದೆ ಎಂದು ತಿಳಿಸಿದರು.
ನೋಟ ಬ್ಯಾನ್ ಮಾಡಿದ್ದಾರೆ ಸರಿ.ಆದರೆ, ಇದರಿಂದ ಎಷ್ಟು ಕಪ್ಪು ಹಣ ಭಾರತಕ್ಕೆ ವಾಪಸ್ಸು ತಂದಿದ್ದಾರೆ ಅದನ್ನು ಜನರ ಮಂದಿಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಪ್ರಶ್ನೆ ಮಾಡಿದರು.
ನೋಟ್ ಬ್ಯಾನ್ ಕೇವಲ ಬಡವರಿಗೆ ಕಷ್ಟ ನೀಡಿದೆ.ಶ್ರೀಮಂತರಿಗೆ ನೋಟ್ ಬ್ಯಾನ್ ಯಾವುದೇ ಕಷ್ಟ ನೀಡಿಲ್ಲ.ನೋಟ್ ಬ್ಯಾನ್ ನಿಂದ ಬಡ ಬಹಿಳೆಯರು ಪರದಾಡುತ್ತಿದ್ದಾರೆ ಎಂದ ಅವರು, ಮೋದಿ ಬಡವರ ಬೆನ್ನಿಗೆ ಚೂರಿ ಹಾಕಿದ್ದಾರೆ.ಈ ಕೇಂದ್ರ ಸರ್ಕಾರವು ಸಂವಿಧಾನ,ಮಹಿಳಾ ವಿರೋಧಿಯಾಗಿದೆ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ನೋಟ್ ಅಮಾನ್ಯೀಕರಣ ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ. ಬಡವರಿಗೆ ಹಣ ತಂದು ಕೊಡುತ್ತೇವೆ ಎಂದಾಗ ನಮಗೆ ಖುಷಿ ಬಂದಿತ್ತು.ಆದರೆ, 15ಲಕ್ಷ ಬಿಡಿ, 15 ಪೈಸೆಯೂ ಯಾರಿಗೂ ಬಂದಿಲ್ಲ.ಮೋದಿ ಕಪ್ಪು ಹಾಣ ವಾಪಸ್ ತಂದಿಲ್ಲ.ಅಲ್ಲದೆ, ಬಿಜೆಪಿ, ಆರ್ ಎಸ್ ಎಸ್ ಗೆ ಒಳ್ಳೆದಿನ ಬಂದಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಜಮೀರ್ ಅಹ್ಮದ್ ಖಾನ್, ಮನ್ ಕೀ ಬಾತ್ ಎಂದರೆ, ಹೆಂಡತಿ ಜೊತೆ ಸುಖ-ದುಖಃ ಹಂಚಿಕೊಳ್ಳುವುದು.ಆದರೆ, ಮೋದಿ ಮನ್ ಕೀ ಬಾತ್ ಎಂದು ದಿಕ್ಕು ತಪ್ಪಿಸಿದ್ದಾರೆ.ಇನ್ನೂ, ದೇಶದೆಲ್ಲೆಡೆ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ, 2019ರಲ್ಲಿ ಮೋದಿಯನ್ನು ಸೋಲಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಸದ ಉಗ್ರಪ್ಪ, ಶಾಸಕ ರೋಷನ್ ಬೇಗ್ , ಮಾಜಿ ಶಾಸಕ ಆರ್.ವಿ.ದೇವರಾಜ್, ಪರಿಷತ್ ಸದಸ್ಯ ರಿಝ್ವಾನ್ ಆರ್ಶದ್, ಎಂ.ಡಿ.ಲಕ್ಷ್ಮೀ ನಾರಾಯಣ, ನಾಗರಾಜ್ ಯಾದವ್, ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರು, ಬ್ಲಾಕ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಉಗ್ರಪ್ಪಗೆ ಜೈಕಾರ:
ನೋಟು ರದ್ದುಗೊಳಿಸಿ ಎರಡು ವರ್ಷ ಕಳೆದಿರುವುದನ್ನು ಕಪ್ಪು ದಿನವನ್ನಾಗಿ ಕಾಂಗ್ರೆಸ್ ಕಾರ್ಯಕರ್ತರು ಆಚರಿಸುತ್ತಿದ್ದಾಗ ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿರುವ ಉಗ್ರಪ್ಪ ಅವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಭಾಷಣ ಮಾಡುವ ಮೊದಲು, ಉಗ್ರಪ್ಪ ಅವರಿಗೆ ನಾಯಕರು ಅಭಿನಂದನೆ ಸಲ್ಲಿಸಿದರು.ಇದೇ ವೇಳೆ ಮಾತನಾಡಿದ ಉಗ್ರಪ್ಪ ನೋಟು ಅಮಾನ್ಯೀಕರಣದಿಂದ ಭಾರತ ದೇಶದ ಆರ್ಥಿಕತೆ ತೀವ್ರ ಕುಂಠಿತವಾಗಿದ್ದು, ಇದಕ್ಕೆ ಮೂಲ ಕಾರಣವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ