ಕೊಪ್ಪಳ:
ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಯೊಂದರ ಆರೋಪ ಕೇಳಿಬಂದಿದೆ. ‘ಒಂದೇ ಕೈಯಲ್ಲಿ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ, ಹಾಗೆ ಜಗತ್ತಿನಲ್ಲಿ ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ ಎಂಬ ಅವರ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಕಾಂಗ್ರೆಸ್ ಮುಖಂಡ ಸಂಗನಗೌಡ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಅಕ್ಟೋಬರ್ 10 ರಂದು ಎಂ. ಗುಡದೂರು ಗ್ರಾಮದ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ದೂರು ದಾಖಲಿಸಿಕೊಂಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ಎಸ್ಪಿಗೆ ದೂರು ನೀಡಿದ್ದ ಸಂತ್ರಸ್ತೆಯ ಮಾವ ಯಮನೂರಪ್ಪ, ನೊಂದ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಅಮರೇಗೌಡ ಬಯ್ಯಾಪುರ ಅವರ ಬಳಿಯೂ ಮನವಿ ಮಾಡಿದ್ದರು ಎನ್ನಲಾಗಿದೆ.
ಆರೋಪಿ ಪರವಾಗಿಯೇ ನಿಲುವು ತಾಳಿರುವ ಮಾಜಿ ಶಾಸಕರು, ಎಸ್ ಪಿಗೆ ದೂರು ನೀಡಬಾರದಿತ್ತು “ನಿಮ್ಮ ಮರ್ಯಾದೆಯನ್ನು ನೀವೆ ಕಳೆದುಕೊಳ್ಳುತ್ತಿದ್ದೀಯಾ, ಒಬ್ಬರಿಂದ ಹೇಗೆ ಅತ್ಯಾಚಾರ ಮಾಡಲು ಸಾಧ್ಯ? ನೀನು ಒಬ್ಬನನ್ನು ಕರೆದುಕೊಂಡು ಬಾ, ನಾನು ಓರ್ವ ಮಹಿಳೆಯನ್ನು ಕಳುಹಿಸುತ್ತೇನೆ. ಆ ವ್ಯಕ್ತಿ ಆಕೆಯನ್ನು ಅತ್ಯಾಚಾರ ಮಾಡಲಿ ನೋಡೋಣ, ಒಬ್ಬನಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮ ವಿಚಾರ ಇದು, ಮರ್ಯಾದೆ ಪ್ರಶ್ನೆ ಇದೆ ಯೋಚಿಸು” ಎಂದು ಸಂತ್ರಸ್ತೆ ಮಾವನಿಗೆ ಹೇಳುವ ಫೋನ್ ಸಂಭಾಷಣೆ ಆಡಿಯೋ ವೈರಲ್ ಆಗಿದ್ದು, ಅಮರೇಗೌಡ ಬಯ್ಯಾಪುರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.