ಬೆಂಗಳೂರು:
ಕಾರ್ಪೋರೇಟ್ ಕಂಪನಿಗಳು ರಾಜ್ಯದಲ್ಲಿ ಆರೋಗ್ಯ ಸೇವೆ ನೀಡಲು ಹೆಚ್ಚು ಆಸ್ಪತ್ರೆ ನಿರ್ಮಾಣ ಮಾಡುವ ಹೆಜ್ಜೆ ಇಟ್ಟರೆ ಕರ್ನಾಟಕ ಹೆಲ್ತ್ ಟೂರಿಸಂ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಎಚ್‌ಕೆಪಿ ರಸ್ತೆಯಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯಾ ಆಸ್ಪತ್ರೆಯ 125ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಕ್ರಿಶ್ಚಿಯನ್ ಮಿಷನರಿಗಳು ವಿಶ್ವಾದ್ಯಂತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ವಿಶ್ವದ ಯಾವುದೇ ಮೂಲೆಗೆ ತೆರಳಿದರೂ ಮಿಷನರಿಗಳ ಶಿಕ್ಷಣ ಸಂಸ್ಥೆ ನೋಡಬಹುದು ಎಂದರು.
ಹಲವು ವರ್ಷಗಳ ಹಿಂದಿನಿಂದಲೂ ಬಡವರ ಸೇವೆ ಮಾಡುತ್ತಿರುವ ಮಿಷನರಿಗಳು, ಯಾವುದೇ ನಿರೀಕ್ಷೆ ಇಟ್ಟುಕೊಂಡು ಸೇವೆ ನೀಡುತ್ತಿಲ್ಲ. ಕರ್ನಾಟಕದಲ್ಲಿಯೂ ಸಾಕಷ್ಟು ಶಿಕ್ಷಣ ಸಂಸ್ಥೆ , ಆಸ್ಪತ್ರೆಗಳನ್ನು ತೆರೆದು ಸೇವೆ ನೀಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ. ದೇಶದಲ್ಲಿಯೇ ಕರ್ನಾಟಕ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕಾರ್ಪೋರೇಟ್ ಕಂಪನಿಗಳು ಸಿಎಸ್‌ಆರ್ ನಿಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣ ಮಾಡುತ್ತಿವೆ. ಈ ಪ್ರಮಾಣ ಹೆಚ್ಚಾದರೆ ಕರ್ನಾಟಕ ಹೆಲ್ತ್‌ಹಬ್ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
