ದಾವಣಗೆರೆ:
ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಕಾಲೇಜು ಸ್ಥಾಪಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಭರವಸೆ ನೀಡಿದರು.
ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆಯ ಪ್ರಾದೇಶದಿ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಗರದ ಶಾಮನೂರು ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯ ಮೊದಲ ಮಹಡಿಯಲ್ಲಿ ನಿರ್ಮಿಸಿರುವ ರೈತರ ತರಬೇತಿ ಸಭಾಂಗಣವನ್ನು ಶನಿವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಕಾಲೇಜು ಸ್ಥಾಪನೆಯಾದರೆ, ಸುತ್ತಮುತ್ತ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಸಂಸದ ಜಿ.ಎಂ.ಸಿದ್ದೇಶ್ವರ್ ಸಹ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು.
ಬಳಿಕ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ಇಲ್ಲಿ ಕೃಷಿ ವಿವಿ ಸ್ಥಾಪನೆಯಾಗುವುದರಿಂದ ಆಗಲಿರುವ ಉಪಯೋಗದ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಒತ್ತಡ ಹೇರಲಾಗುವುದು. ಇದಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಸಹ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಮಳೆಯಾಶ್ರಿತ ಬೇಸಾಯ ಪದ್ಧತಿಯನ್ನು ಅವಲಂಬಿಸಿ ರಾಜ್ಯ ಶೇ.60ರಷ್ಟು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಮಳೆಯ ಕಣ್ಣಾಮುಚ್ಚಾಲೆಯಿಂದ ರೈತರು ಪದೇ, ಪದೇ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಬೆಳೆ ವಿಮೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2016ರಿಂದ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿರುವುದೇನೋ ಸ್ವಗಾತರ್ಹ. ಆದರೆ, ಈ ಯೋಜನೆಯಲ್ಲಿನ ಹಲವು ಲೋಪಗಳಿಂದಾಗಿ ಬಹುತೇಕ ರೈತರಿಗೆ ಈ ವರೆಗೂ ಸರಿಯಾಗಿ ಬೆಳೆ ವಿಮೆ ಮೊತ್ತ ದೊರೆತಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಲೋಕಸಭೆ ಅಧಿವೇಶನದಲ್ಲಿ ಚರ್ಚಿಸುವಂತೆ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿಕೊಳ್ಳಲಿಕ್ಕಾಗಿ ಡಿ.22ರ ನಂತರ ದೆಹಲಿಗೆ ತೆರಳುವುದಾಗಿ ತಿಳಿಸಿದರು.
ರೈತರಿಂದ ಬೆಳೆ ವಿಮೆ ಹಣ ಕಟ್ಟಿಸಿಕೊಳ್ಳುವ ಸಂದರ್ಭದಲ್ಲಿ ವಿಮಾ ಕಂಪನಿಗಳ ಅಧಿಕಾರಿಗಳಿಗೆ ಇರುವ ಉತ್ಸಾಹವು ರೈತರಿಗೆ ವಾಪಾಸ್ ಬೆಳೆ ವಿಮೆ ಪಾವತಿಸುವಾಗ ಇರುವುದಿಲ್ಲ. ಇನ್ನೂ ಮುಂದೆ ಪ್ರತಿ ತಾಲೂಕಿಗೆ ಒಬ್ಬರಂತೆ ವಿಮಾ ಪ್ರತಿನಿಧಿಯನ್ನು ನೇಮಿಸಿ, ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಳೆ ವಿಮೆಯ ಬಗ್ಗೆ ರೈತರಿಗೆ ಸರಿಯಾದ ಮಾರ್ಗದರ್ಶನ ಮಾಡುವ ವ್ಯವಸ್ಥೆ ಜಾರಿಗೆ ತರಲು ಚರ್ಚಿಸುತ್ತೇನೆಂದು ಹೇಳಿದರು.
ಬಹುತೇಕ ಕೃಷಿ ಪರಿಕರ ಮಾರಾಟಗಾರರಿಗೆ ಯಾವ ಭೂಮಿಯಲ್ಲಿ ಯಾವ ಸಮಯಕ್ಕೆ ಎಷ್ಟು ಪ್ರಮಾಣದಲ್ಲಿ ಬೀಜ ಬಿತ್ತನೆ ಮಾಡಬೇಕು. ಎಷ್ಟೇಷ್ಟು ರಾಸಾಯನಿಕ ಗೊಬ್ಬರ, ಕೀಟನಾಶಕ ನೀಡಬೇಕೆಂಬುದರ ಬಗ್ಗೆ ಸೂಕ್ತ ಮಾಹಿತಿ ಇಲ್ಲವಾಗಿದೆ. ಹೀಗಾಗಿ ರೈತರಿಗೂ ಸೂಕ್ತ ಮಾರ್ಗದರ್ಶನ ದೊರೆಯದ ಕಾರಣ ಅತ್ಯಧಿಕ ರಾಸಾಯನಿಕ ಸಿಂಪರಣೆ ಮಾಡುವುದರಿಂದ ಹಾಗೂ ಗೊಬ್ಬರ ಬಳಸುತ್ತಿರುವುದರಿಂದ ಭೂಮಿಯ ಸತ್ವವು ಹಾಳಾಗಿರುವುದಲ್ಲದೇ, ವಿಷಪೂರಿತ ಆಹಾರ ಸೇವನೆ ಮಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಜಿಲ್ಲೆಗೆ ಕೃಷಿ ಕೇಂದ್ರಿಯ ವಿಶ್ವವಿದ್ಯಾಲಯವನ್ನು ತರಲಿಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿ ಕೃಷಿ ವಿವಿಗೆ ಪೂರಕವಾದ ವಾತಾವರಣವಿದ್ದು, ಕತ್ತಲಗೆರೆ ಬಳಿ 400ರಿಂದ 500 ಎಕರೆ ಜಾಗ ಇರುವ ಬಗ್ಗೆಯೂ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಹರಿಹರ ತಾಲೂಕಿನ ಕೊಂಡಜ್ಜಿ ಬಳಿಯೂ ಕೃಷಿ ವಿವಿ ಸ್ಥಾಪನೆಗೆ ಬೇಕಾಗಿರುವ ಭೂಮಿ ಇದೆ.
ಈ ಕುರಿತು ಕೃಷಿ ಸಚಿವರು ಮುಂದಿನ ಬಜೆಟ್‍ನಲ್ಲಿ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.ಫಸಲ್ ಬಿಮಾ ಯೋಜನೆ ಎಂದಾಕ್ಷಣ ಎಲ್ಲರೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ಆದರೆ, ಅದರಲ್ಲಿ ಶೇ.49 ರಷ್ಟು ಕೇಂದ್ರ ಸರ್ಕಾರ ಹಾಗೂ ಶೇ,49ರಷ್ಟು ರಾಜ್ಯ ಸರ್ಕಾರದ ಹಾಗೂ ಶೇ.2 ರೈತರ ಹಣ ವಿನಿಯೋಗಿಸುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರವೂ ಫಸಲ್ ಯೋಜನೆಯಲ್ಲಿನ ಗೊಂದಲ ನಿವಾರಿಸಿ ವಿಮೆ ಮಾಡಿದ ರೈತರಿಗೆ ಹಣ ತಲುಪುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದೇಸಿ ಸಸ್ಯ ಸಂರಕ್ಷಣೆ ಮಾರ್ಗದರ್ಶನ ಇರುವ ಕೈಪಿಡಿಯನ್ನು ಗಣ್ಯರು ಬಿಡುಗಡೆ ಮಾಡಲಾಯಿತು. ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಹನುಮಂತಪ್ಪ, ಕೃಷಿ ವಿವಿ ರಾಜ್ಯ ನೋಡಲ್ ಅಧಿಕಾರಿ ಡಾ.ಜಿ.ಆರ್. ಪೆನ್ನೋಬಳಸ್ವಾಮಿ, ಪ್ರೊ.ವಿ.ವೀರಭದ್ರಯ್ಯ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಟಿ.ಆರ್.ವೇದಮೂರ್ತಿ, ಆರ್.ತಿಪ್ಪೇಸ್ವಾಮಿ, ಗಣೇಶ್‍ನಾಯ್ಕ, ಸದಾಶಿವ, ರುದ್ರೇಶ್, ಪ್ರಭಾಕರ್, ಲಿಂಗರಾಜ್, ಕಟ್ಟಡ ಶಿಲ್ಪಿ ವಿಜಯಾನಂದ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಜಿ. ಈಶ್ವರಪ್ಪ ಕೃಷಿ ತಂತ್ರಜ್ಞರ ಸಂಸ್ಥೆ ಕುರಿತು ಹಾಗೂ ಕೃಷಿ ವಿಸ್ತರಣಾ ನಿರ್ದೇಶಕ ಎಂ.ಎಸ್. ನಟರಾಜ್ ದೇಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
