ಸಮನ್ವಯತೆಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ.

ಹೊಸಪೇಟೆ :

    ಸರ್ವಧರ್ಮ ಸಮನ್ವಯತೆ ಇದ್ದರೆ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಕೊಟ್ಟೂರು ಸಂಸ್ಥಾನಮಠದ ಜಗದ್ಗುರು ಡಾ.ಶ್ರೀ ಸಂಗನಬಸವ ಸ್ವಾಮೀಜಿ ಹೇಳಿದರು.

        ಇಲ್ಲಿನ ಕೊಟ್ಟೂರು ಸಂಸ್ಥಾನಮಠದಲ್ಲಿ ಸರ್ವಧರ್ಮ ಸಮನ್ವಯತೆ ರಥೋತ್ಸವದ ನಿಮಿತ್ತ ಬುಧವಾರ ಆಯೋಜಿಸಿದ್ದ 1,111 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ನಾವು ಪ್ರಕೃತಿ ಉಳಿಸುವ ಕೆಲಸ ಮಾಡುವ ಬದಲು ಅದನ್ನು ನಾಶ ಮಾಡುತ್ತಿರುವುದರಿಂದ ಇಂದು ಮಳೆ ಬೆಳೆ ಕಡಿಮೆಯಾಗಿ ಸಕಲ ಜೀವರಾಶಿಗಳಿಗೂ ನೀರಿನ ತೊಂದರೆಯಾಗಿದೆ.

       ಹೀಗಾಗಿ ಪ್ರಕೃತಿ ಸಮತೋಲನಕ್ಕಾಗಿ ಸರ್ವಧರ್ಮದವರಿಗೂ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಕೃತಿ ನಾಶದಿಂದ ಅನೇಕ ತೊಂದರೆಗಳು ಆಗುತ್ತಿದ್ದರೂ ಯಾವುದೇ ಸರ್ಕಾರಗಳು ಎಚ್ಚರ ವಹಿಸುತ್ತಿಲ್ಲ ಎಂದರು.

         ನಂತರ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಜಗತ್ತಿನ ಎಲ್ಲಾ ಧರ್ಮಗ್ರಂಥಗಳಿಂದ ಧರ್ಮ ಎಂಬ ಪದ ತೆಗೆದರೆ ಉಳಿದಿದ್ದೆಲ್ಲ ಕೇವಲ ಕಾಗದವಾಗುತ್ತದೆ. ಧರ್ಮ ಎಂಬ ಪದವೇ ನಮ್ಮ ದೇಶದ ಸಂಸ್ಕತಿ, ಭಾವೈಕ್ಯ, ಸಾಮರಸ್ಯವನ್ನು ಬೆಸೆಯುತ್ತದೆ. ಪ್ರಪಂಚದಲ್ಲಿ ಹೆಣ್ಣಿಲ್ಲವೆಂದರೆ ಶೂನ್ಯವೆಂದು ಭಾವಿಸಬಹುದು.

         ಹೆಣ್ಣನ್ನು ಪೂಜ್ಯ ಭಾವನೆಯಿಂದ ಗೌರವಿಸುವ ದೇಶ ನಮ್ಮದು. ಬ್ರಹ್ಮ, ವಿಷ್ಣು, ಮಹೇಶ್ವರರಿಗಿಂತ ತಾಯಿಯೇ ಶ್ರೇಷ್ಠ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.ಇದೇ ವೇಳೆ 1,111 ಮುತ್ತೈದೆಯರಿಗೆ ಸಾಮೂಹಿಕವಾಗಿ ಉಡಿ ತುಂಬಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾದಕರನ್ನು ಸನ್ಮಾನಿಸಲಾಯಿತು.

         ಥಿಯೋಸೆಫಿಕಲ್ ಕಾಲೇಜಿನ ಗ್ರಂಥಪಾಲಕಿ ಡಿ.ಎನ್.ಸುಜಾತ ರೇವಣಸಿದ್ದಪ್ಪ, ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯ ಮುಖ್ಯಗುರು ಸಿ.ಎಸ್.ಶರಣಯ್ಯಸ್ವಾಮಿ ಕಾರ್ಯಕ್ರಮ ನಡೆಸಿಕೊಟ್ಟರು.ಈ ಸಂಧರ್ಭದಲ್ಲಿ ಹಿರೇಮಲ್ಲನಕೆರೆ ಶ್ರೀ ಚೆನ್ನಬಸವ ಸ್ವಾಮೀಜಿ, ಬಾಗಲಕೋಟೆ ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ವೀರಣ್ಣ ಹಲಕುರ್ತಿ, ಹುನಗುಂದದ ದೊಡ್ಡಮ್ಮ ಹವಾಲ್ದಾರ್, ವಳಬಳ್ಳಾರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರ ಶಾಂತಮಲ್ಲ ಸ್ವಾಮೀಜಿ, ಗರಗ ನಾಗಲಾಪುರ ಶ್ರೀ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ದರೂರಿನ ಕೊಟ್ಟೂರು ದೇಶಿಕರು ಸೇರಿ ವಿವಿಧ ಮಠದ ಮಠಾಧೀಶರು ಸಾನಿಧ್ಯ ವಹಿಸಿದ್ದರು. ಅಕ್ಕನ ಬಳಗದ ಗದಗ ಪ್ರೇಮ ಮೇಟಿ, ಕೊಪ್ಪಳದ ಕೋಮಲಾ ಕುದುರಿಮೋತಿ, ಬಾದಾಮಿಯ ನಾಗರತ್ನಮ್ಮ ಪಟ್ಟಣದ, ಹೊಸಪೇಟೆಯ ಅರುಣಾ ಶಿವಾನಂದ ಇದ್ದರು.

 ರಥೋತ್ಸವ :

          ಶ್ರೀ ಕೊಟ್ಟೂರುಸ್ವಾಮಿ ಮಠದಿಂದ ಸರ್ವಧರ್ಮ ಸಮನ್ವಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಬುಧವಾರ ಸಂಜೆ ನಡೆಯಿತು

         ಶ್ರೀ ಕೊಟ್ಟೂರುಸ್ವಾಮಿ ಮಠದಿಂದ ಮುಖ್ಯ ಬಜಾರ್ ಮೂಲಕ ಗಾಂಧಿ ವೃತ್ತದ ವರೆಗೆ ರಥ ಸಾಗಿತು. ಅಲ್ಲಿಂದ ಮೂಲಸ್ಥಳಕ್ಕೆ ಭಕ್ತರು ಎಳೆದು ತಂದು ನಿಲ್ಲಿಸಿದರು. ನಂದಿಧ್ವಜ ಕುಣಿತ, ಗೊಂಬೆ ಕುಣಿತ, ತಾಷಾ ರಾಂಡೋಲು, ವೀರಗಾಸೆ ಕುಣಿತ, ಕೋಲಾಟ ಸೇರಿ ವಿವಿಧ ಜಾನಪದ ವಾದ್ಯಗಳು ನೋಡುಗರ ಮನ ಸೆಳೆದವು.

         ಮಠದ ಮುಂಭಾಗದ ಮುಖ್ಯ ರಸ್ತೆಯಲ್ಲಿ ಅಲಂಕೃತಗೊಂಡ ತೇರಿನಲ್ಲಿ ಎಲ್ಲಾ ಧರ್ಮಗಳ ಗ್ರಂಥಗಳನ್ನಿಟ್ಟು ಪೂಜಿಸಲಾಯಿತು. ಸರ್ವಧರ್ಮಿಯರು ಎಳೆಯುವ ಈ ರಥೋತ್ಸವಕ್ಕೆ ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಚಾಲನೆ ನೀಡಿದರು. ಕೊಟ್ಟೂರು ಮಠದ ಜಗದ್ಗುರು ಡಾ. ಶ್ರೀ ಸಂಗನಬಸವ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಶರಣುಸ್ವಾಮಿ ಸೇರಿ ವಿವಿಧ ಮುಖಂಡರು, ಅಕ್ಕನ ಬಳಗದ ಸದಸ್ಯರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link