ಸಂವಿಧಾನ ದಿನಾಚರಣೆ

ಹರಿಹರ:

       ಧರ್ಮ, ಜಾತಿ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡದೆ, ಎಲ್ಲರಿಗೂ ಸಮಾನ ಅವಕಾಶಗಳನ್ನು ಹಾಗೂ ಯೋಗ್ಯ ಜೀವನಮಟ್ಟ ಕಲ್ಪಿಸಿಕೊಡುವುದು ಸಂವಿಧಾನದ ಮೂಲ ಆಶಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಕೆ.ಬೇನಾಳ್ ಹೇಳಿದರು.

     ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ದೇಶದಲ್ಲಿ ಹಲವಾರು ಜನಾಂಗ, ಧರ್ಮ, ಭಾಷೆ, ಸಂಸ್ಕತಿ ಮುಂತಾದ ಭಿನ್ನತೆ ಹೊಂದಿದವರಿದ್ದಾರೆ, ಯಾವುದೇ ಪ್ರಜೆ ಅನ್ಯಾಯಕ್ಕೊಳಗಾದಾಗ ತಾರತಮ್ಯವಿಲ್ಲದೆ ನ್ಯಾಯ ದೊರಕಿಸಿಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ ಎಂದರು.

      ಜನಸಾಮಾನ್ಯರಿಗೆ ಕಾನೂನು ಜ್ಞಾನ ಮೂಡಿಸಲು, ಬಡವರು, ಹಿಂದುಳಿದವರು, ಅಸಹಾಯಕರಿಗೆ ಉಚಿತ ಕಾನೂನು ನೆರವು ನೀಡುವದನ್ನು ಸಂವಿಧಾನ ಕಡ್ಡಾಯಗೊಳಸಿದೆ. ಎಲ್ಲರ ಒಳಿತಿಗೆ ನಾವೇ ರಚಿಸಿಕೊಂಡಿರುವ ಸಂವಿಧಾನ, ಕಾನೂನುಗಳನ್ನು ತಪ್ಪದೆ ಪಾಲಿಸಬೇಕಾಗಿದೆ ಎಂದರು.

       2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅವಿನಾಶ ಚಿಂದು ಹೆಚ್. ಮಾತನಾಡಿ, ಲಿಂಗಸಮಾನತೆ ಪ್ರತಿಪಾದಿಸುವ ಸಂವಿಧಾನದಿಂದ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಪ್ರಾತಿನಿಧ್ಯ ದೊರೆಯುತ್ತಿದೆ. ತಾವು ಹೆಣ್ಣೆಂಬ ಕೀಳಿರಿಮೆ ತೊರೆದು, ಆತ್ಮವಿಶ್ವಾಸದಿಂದ ಮುನ್ನುಗ್ಗುವ ಮೂಲಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

      ಮನುಷ್ಯನ ಬುದ್ದಿಶಕ್ತಿ ಅಗಾಧವಾದದು, ಅದರಲ್ಲಿ ಕೇವಲ ಶೇ.5 ರಿಂದ 10ರಷ್ಟು ಮಾತ್ರ ನಾವು ಬಳಸಿಕೊಳ್ಳುತ್ತಿದ್ದು, ಉಳಿದದ್ದು ವೃಥಾ ಪೋಲಾಗುತ್ತಿದೆ. ಈಗಿನಿಂದಲೆ ಸಮಯಪ್ರಜ್ಞೆ ಬೆಳೆಸಿಕೊಂಡು ಶಿಶ್ತುಬದ್ದ ರೀತಿಯಲ್ಲಿ ಅಧ್ಯಯನ ಮಾಡಿದರೆ ನಿಮ್ಮ ಕನಸಿನ ಭವಿಷ್ಯ ನನಸು ಮಾಡಿಕೊಳ್ಳುವುದು ಕಷ್ಟವೇನಲ್ಲ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

      ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಕೀಲರಾದ ಹೆಚ್.ಎಂ.ಷಡಾಕ್ಷರಯ್ಯ, ನವೆಂಬರ್ 26ರ ದಿನದಂದೆ ಕಾನೂನು ದಿನಾಚರಣೆ ಆಚರಿಸಲು ಸುಪ್ರಿಂ ಕೋರ್ಟ್‍ನ ಹಿರಿಯ ನ್ಯಾಯವಾದಿ ಡಾ|ಎಲ್.ಎಂ.ಸಿಂಘ್ವಿ ಕಾರಣೀಭೂತರು. ಸಂವಿಧಾನ ರಚನೆಗೆ ಶ್ರಮಿಸಿದ ನಿಯೋಗದ ಎಲ್ಲಾ 207 ಕಾನೂನು ಪಂಡಿತರನ್ನು ಸ್ಮರಿಸುವ ದಿನವಿದು ಎಂದರು.

      ವಕೀಲರಾದ ಜಿ.ಹೆಚ್.ಭಾಗೀರಥಿ ಮಾತನಾಡಿ, ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ಹೊಂದಿರುವ ಹೆಗ್ಗಳಿಗೆ ನಮ್ಮದು. ಪ್ರಸ್ತುತ ದೇಶ ಎದರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಈಗಿರುವ ಸಂವಿಧಾನದಲ್ಲೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಭಾರತದಲ್ಲಿ ಸಂವಿಧಾನವೇ ಪರಮಶ್ರೇಷ್ಠವಾಗಿದ್ದು, ಧರ್ಮಕ್ಕಿಂತ ಸಂವಿಧಾನ ಪಾಲನೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

      ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ನಮ್ಮ ಸಂವಿಧಾನಕ್ಕೆ ತಳಹದಿಯಾಗಿರುವ ಕಾನೂನಿನ ಆಧಿಪತ್ಯ ಹಾಗೂ ನ್ಯಾಯಾಂಗದ ಸ್ವಾತಂತ್ರ ಎತ್ತಿ ಹಿಡಿಯುವುದು ಎಲ್ಲರ ಕರ್ತವ್ಯ. ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ರೂಪಿಸಿದ ಎಷ್ಟೋ ಕಾನೂನು, ನಿಯಮಗಳನ್ನು ನ್ಯಾಯಾಂಗ ರದ್ದುಗೊಳಿಸಿದೆ ಎಂದರು.ವಕೀಲರಾದ ಸೈಯದ್ ಯೂನಸ್, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರಹಮತ್ ಬಿ., ಸಿಬ್ಬಂದಿ ಮಂಜುನಾಥ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link