ಮದ್ಯ ಮಾರಾಟ ತಕ್ಷಣವೇ ಸ್ಥಗಿತಗೊಳಿಸಬೇಕು : ಕೋರಿ ಯೋಗೀಶ್ ಕುಳಗಟ್ಟೆ

ಹೊನ್ನಾಳಿ

       ಮದ್ಯ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಶ್ರಮಜೀವಿ ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೋರಿ ಯೋಗೀಶ್ ಕುಳಗಟ್ಟೆ ಒತ್ತಾಯಿಸಿದರು.

       ಪಟ್ಟಣದ ಜ್ಯೋತಿ ವೈನ್ಸ್ ಮತ್ತು ಸುಗಂಧ ಬಾರ್‍ಗಳ ಎದುರು ಮಾಲೀಕರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‍ಗಳು, ಸ್ಯಾನಿಟೈಸರ್ ಲಿಕ್ವಿಡ್ ವಿತರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನಜಾಗೃತಿ ಮೂಡಿಸಿ ಅವರು ಮಾತನಾಡಿದರು.

       ಮದ್ಯ ಮಾರಾಟದಿಂದ ಸಾಮಾಜಿಕವಾಗಿ ಅನೇಕ ದುಷ್ಪರಿಣಾಮಗಳುಂಟಾಗುತ್ತವೆ. ಶ್ರಮಿಕ ಹಾಗೂ ಶೋಷಿತ ವರ್ಗದವರ ಗೋಳು ಕೇಳುವವರಿಲ್ಲದಂತಾಗುತ್ತದೆ. ಆದ್ದರಿಂದ, ಮದ್ಯ ಮಾರಾಟ ನಿಲ್ಲಿಸಬೇಕು ಎಂದು ತಿಳಿಸಿದರು.ಕಳೆದ 45 ದಿನಗಳಿಂದ ಲಾಕ್ ಡೌನ್ ಆದ ಪರಿಣಾಮ ದೇಶಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಹಾಗಾಗಿ, ಎಲ್ಲ ಮದ್ಯವ್ಯಸನಿಗಳು ಮದ್ಯಪಾನ ತ್ಯಜಿಸಿ ಹೊಸ ವ್ಯವಸ್ಥೆಗೆ ಹೊಂದಿಕೊಂಡಿದ್ದರು.

    ಆದರೆ, ಇದೀಗ, ರಾಜ್ಯ ಸರಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಏಕೈಕ ಉದ್ದೇಶದಿಂದ ಮತ್ತೆ ಮದ್ಯ ಮಾರಾಟ ಪ್ರಾರಂಭಿಸಿದ್ದು, ಶ್ರಮಿಕರನ್ನು, ಬಡವರನ್ನು ಬಡತನದ ಕೂಪಕ್ಕೆ ತಳ್ಳುವ ಹುನ್ನಾರ ನಡೆಸಿದೆ. ತಕ್ಷಣವೇ ಮದ್ಯ ಮಾರಾಟ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

     ಈ ಹಿಂದೆ ಸೇವಿಸುತ್ತಿದ್ದ ಮದ್ಯದ ಪ್ರಮಾಣ ಲೆಕ್ಕಾಚಾರ ಹಾಕಿ ತ್ಯಜಿಸಿದ ನಂತರವೂ ಅಷ್ಟೇ ಪ್ರಮಾಣದಲ್ಲಿ ಮದ್ಯ ಸೇವನೆಗೆ ಮುಂದಾದರೆ ಮೆದುಳಿನ ಸಾಮಥ್ರ್ಯ ಕುಗ್ಗುತ್ತದೆ. ಬಹಳ ದಿನಗಳ ನಂತರ ಮದ್ಯ ದೊರೆತ ಖುಷಿಯಲ್ಲಿ ಮಿತಿ ಮೀರಿ ಮದ್ಯ ಸೇವಿಸಿದರೆ ಎದೆಬಡಿತ ಹೆಚ್ಚಳ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳು ಉಂಟಾಗುತ್ತವೆ. ಕುಟುಂಬಗಳಲ್ಲಿ ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತವೆ.

     ಪೊಲೀಸರು, ವೈದ್ಯರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ನಡೆಸಿದ ಪ್ರಯತ್ನ ವ್ಯರ್ಥವಾಗುತ್ತದೆ. ನಾಡಿನ ಆರ್ಥಿಕತೆ ಸದೃಢಗೊಳಿಸಲು ಜನಪ್ರತಿನಿಧಿಗಳು, ಸಚಿವರಿಗೆ ನೀಡಿರುವ ಸವಲತ್ತುಗಳನ್ನು ಕಡಿತಗೊಳಿಸುವುದು, ಅನಗತ್ಯ ಸರಕಾರಿ ವೆಚ್ಚಗಳಿಗೆ ಕಡಿವಾಣ ಹಾಕುವುದು ಮತ್ತಿತರ ಮಾರ್ಗಗಳನ್ನು ಅನುಸರಿಸಬಹುದು ಎಂದು ಅವರು ವಿವರಿಸಿದರು.

     ಮದ್ಯದ ಆಸೆಗೆ ಮದ್ಯವ್ಯಸನಿಗಳು ಮನೆಗಳಲ್ಲಿನ ದವಸ-ಧಾನ್ಯ, ಆಭರಣ ಸೇರಿದಂತೆ ವಿವಿಧ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿ ಮಾರಾಟ ಮಾಡಿ ಆ ಹಣವನ್ನು ಮದ್ಯ ಖರೀದಿಸಲು ಬಳಸುತ್ತಾರೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಿಕೆ ಸಲ್ಲದು. ಹಾಗಾಗಿ, ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ವೈನ್‍ಸ್ಟೋರ್ಸ್ ಮಾಲೀಕರಾದ ಬಿ. ಸಿದ್ಧಪ್ಪ, ಎಂ. ರಮೇಶ್, ಎಂ. ಸಿದ್ಧಪ್ಪ, ಹೊನ್ನೂರ್‍ಸಾಬ್, ಇಮ್ರಾನ್, ನವೀನ್, ಮುಖಂಡರಾದ ರವಿ, ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link