ನಾಲ್ಕು ದಿನಕ್ಕೊಮ್ಮೆ ಶುದ್ಧ ನೀರು ಪೂರೈಕೆಗೆ ಆಗ್ರಹ

ದಾವಣಗೆರೆ:

     ತಕ್ಷಣವೇ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು, ನಾಲ್ಕು ದಿನಗಳಿಗೊಮ್ಮೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‍ಯುಸಿಐ ಕಮ್ಯುನಿಷ್ಟ್ ಪಕ್ಷದ ನೇತೃತ್ವದಲ್ಲಿ ಇಲ್ಲಿನ ಹೆಚ್.ಕೆ.ಆರ್.ನಗರದ ನಿವಾಸಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

     ಇಲ್ಲಿನ ಪಾಲಿಕೆಯ ಎದುರು ಎಸ್‍ಯುಸಿಐ ಕಮ್ಯುನಿಷ್ಟ್ ಪಕ್ಷದ ನೇತೃತ್ವದಲ್ಲಿ ಜಮಾಯಿಸಿದ ಹೆಚ್.ಕೆ.ಆರ್.ನಗರದ 1, 2 ಹಾಗೂ 3ನೇ ಕ್ರಾಸ್ ನಿವಾಸಿಗಳು ಖಾಲಿ ಕೊಡ ಪ್ರದರ್ಶಿಸಿದ್ದಲ್ಲದೇ, ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈದ ಪಾಲಿಕೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಯುಸಿಐ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಹೆಚ್.ಕೆ.ಆರ್. ನಗರದ 1,2 ಹಾಗೂ 3ನೇ ಕ್ರಾಸ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ಭಾಗದ ನಾಗರೀಕರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

     ಈ ಹಿಂದೆ ಅಧಿಕಾರಿಗಳು ಹೆಚ್.ಕೆ.ಆರ್.ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ತಗಡಿನ ಚಾವಣಿ ಬಿಟ್ಟರೆ, ಅಲ್ಲಿ ನೀರು ಇಲ್ಲ ನೀರಿನ ಘಟಕವು ಇಲ್ಲವಾಗಿದೆ. ಅಲ್ಲದೇ, ಈ ಭಾಗದಲ್ಲಿ ಪಾಲಿಕೆ ಸರಬರಾಜು ಮಾಡುವ ಕುಡಿಯುವು ನೀರು ವಾಸನೆ ಹಾಗೂ ಮಣ್ಣು ಮಿಶ್ರಿತವಾಗಿದೆ. ಇದಕ್ಕೆ ಒಳಚರಂಡಿಯ ಪಕ್ಕದಲ್ಲೇ ಹಾದು ಹೋಗಿರುವ ನೀರಿನ ಪೈಪ್‍ಗೆ ಕುಡಿಯುವ ನೀರಿನ ಹೊಸ ಪೈಪ್ ಕನೆಕ್ಷನ್ ಕೊಟ್ಟಿರುವುದೇ ಕಾರಣವಾಗಿದೆ.

     ಹೀಗಾಗಿ ಸಾರ್ವಜನಿಕರು ಕಲುಷಿತ ನೀರು ಸೇವಿಸುತ್ತಿರುವುದರಿಂದ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದ ಆರೋಗ್ಯದ ದುಷ್ಪರಿಣಾಮ ಬೀರಿದ್ದು, ವಿವಿಧ ರೋಗ-ರುಜಿನಗಳ ಭೀತಿಯಿಂದ ಸಾರ್ವಜನಿಕರು ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಈ ಭಾಗದಲ್ಲಿ ನೆಲೆಸಿರುವ ಬಹುತೇಕರು ಕೂಲಿ ಕೆಲಸ, ತರಕಾರಿ ಮಾರಾಟ ಸೇರಿದಂತೆ ಇತರೆ ಕೆಲಸ, ಕಾರ್ಯಗಳನ್ನು ಮಾಡುವ ಮೂಲಕ ಜೀವನಸಾಗಿದುತ್ತಿದ್ದಾರೆ. ಹೀಗಾಗಿ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿ ಬಿಡುತ್ತಾರೆ. ಆದರೆ, ಪಾಲಿಕೆಯು ಬೆಳಿಗ್ಗೆ 10ರಿಂದ 12 ಗಂಟೆ ಅವಧಿಯ ಒಳಗಡೆ ನೀರು ಪೂರೈಸುತ್ತಿರುವ ಪರಿಣಾಮ ಕೆಲಸಕ್ಕೆ ಹೋಗಿರುವವರಿಗೆ ನೀರೇ ಸಿಗುವುದಿಲ್ಲ. ಅಲ್ಲದೇ, ಕೆಲ ಸಮಯದ ವರೆಗೆ ಮಾತ್ರ ನೀರು ಬಿಡುತ್ತಿದ್ದಾರೆ. 3ನೇ ಕ್ರಾಸ್ ಹೊರತುಪಡಿಸಿ ಉಳಿದೆಲ್ಲ ಕ್ರಾಸ್‍ಗಳಲ್ಲೂ 3 ಇಂಚಿನ ಪೈಪನ್ನು ಅಳವಡಿಸಿರುವ ಪರಿಣಾಮ ಅತೀ ನಿಧಾನವಾಗಿ ನೀರು ಬರುವುದರಿಂದ ಎಷ್ಟೋ ಮನೆಗಳಿಗೆ ಕನಿಷ್ಠ ಕುಡಿಯುವ ನೀರು ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಪಾದಿಸಿದರು.

     ಇಲ್ಲಿ ಈ ವರೆಗೂ ಬೋರ್ ನೀರಿನ ವ್ಯವಸ್ಥೆ ಮಾಡದಿರುವುದು ಸಹ, ನೀರಿನ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಬೋರ್ ನೀರಿನ ಪೈಪ್ ಅಳವಡಿಕೆ ಕಾರ್ಯ ಪೂರ್ಣಗೊಂಡಿಲ್ಲ. ಹೀಗಾಗಿ ದಿನನಿತ್ಯದ ಕೆಲಸದ ಬಳಕೆಗೆ ನೀರು ಲಭ್ಯ ಇಲ್ಲವಾಗಿದೆ ಎಂದು ಆರೋಪಿಸಿದರು.
ಹೆಚ್.ಕೆ.ಆರ್. ನಗರದ 3ನೇ ಕ್ರಾಸ್‍ನಲ್ಲಿ ಸಣ್ಣ ಚರಂಡಿಗಳ ಕಸ ವಿಲೇವಾರಿ ಹಾಗೂ ಸ್ವಚ್ಚತೆ ನಡೆದು ಒಂದೂವರೆ ವರ್ಷ ಕಳೆದಿದೆ. ಇಲ್ಲಿಯವರೆಗೂ ಯಾವ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಚಿಕ್ಕ ಮಕ್ಕಳು, ಗರ್ಭಿಣಿಯರು ಬಹಳ ಬೇಗ ರೋಗರುಜಿನಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ದೂರಿದರು.

      ಬಡಜನರ ಕೂಲಿ ಕಾರ್ಮಿಕರ ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು, ಬೋರ್ ನೀರು ಹಾಗೂ ನಗರಗಳಿನ ಚರಂಡಿಗಳ ಸ್ವಚ್ಛತೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು. ಹೆಚ್.ಕೆ.ಆರ್.ನಗರದ 1-2 ಹಾಗೂ 3ನೇ ಕ್ರಾಸ್‍ಗಳಲ್ಲಿ ಕುಡಿಯುವ ನೀರನ್ನು ನಾಲ್ಕು ದಿನಕ್ಕೊಮ್ಮೆ ಬಿಡಬೇಕು. ಹಾಗೂ ನಿಗದಿತ ದಿನದ ಬೆಳಿಗ್ಗೆ 6 ಅಥವಾ 7 ಗಂಟೆಗೆ ನೀರು ಸರಬರಾಜು ಮಾಡಬೇಕು. ಬೋರ್ ನೀರಿನ ವ್ಯವಸ್ಥೆ ಮಾಡಬೇಕು. ನಗರಗಳಲ್ಲಿ ಬರುವ ಸಣ್ಣ ಚರಂಡಿಗಳ ಸ್ವಚ್ಛತೆಗೆ ಗಮನ ಹರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

      ಪ್ರತಿಭಟನೆಯ ನೇತೃತ್ವವನ್ನು ಎಸ್‍ಯುಸಿಐ ಸದಸ್ಯರಾದ ಪರಶುರಾಮ್, ನಾಗಜ್ಯೋತಿ, ಸಿದ್ದೇಶ್ ಹಾಗೂ ನಗರದ ನಿವಾಸಿಗಳಾದ ಶಿವಮ್ಮ, ಶಾನಕ್ಕ, ಗೌರಮ್ಮ, ಶಾಂತಮ್ಮ, ಮಂಜುಳಮ್ಮ ಮತ್ತಿತರರು ವಹಿಸಿದ್ದರು.

ನೀರು ಮನುಷ್ಯನಿಗೆ ಜೀವಜಲವಾಗಿದ್ದು, ಜನ-ಜಾನುವಾರು ಬದುಕಲು ನೀರು ಅತ್ಯವಶ್ಯವಾಗಿದೆ. ಸ್ವಚ್ಛ ಕುಡಿಯುವ ನೀರು ಹಾಗೂ ಜೀವನ ಸಾಗಿಸಲು ದಿನನಿತ್ಯದ ಕೆಲಸ ಕಾರ್ಯಗಳಿಗೆ ಬೋರ್ ನೀರಿನ ಅಗತ್ಯವಿದೆ. ಆದರೆ, ಪಾಲಿಕೆ ಸಮರ್ಪಕವಾಗಿ ನೀರು ಪೂರೈಸದಿದ್ದರೆ, ಜೀವನ ನಡೆಸುವುದಾದರೂ ಹೇಗೆ? – ಮಂಜುನಾಥ್ ಕೈದಾಳೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap