ನ್ಯಾಯಸಮ್ಮತ ಚುನಾವಣೆಗೆ ನಿಯಮಾವಳಿ ಪಾಲಿಸಿ

ಚಿತ್ರದುರ್ಗ

       ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಜರುಗಿಸಲು ಈಗಾಗಲೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡಿದ್ದು, ರಾಜಕೀಯ ಪಕ್ಷಗಳು ನೀತಿ ಸಂಹಿತೆ ಪಾಲಿಸುವುದರ ಜೊತೆಗೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದರು.

        ಲೋಕಸಭೆ ಚುನಾವಣೆ ಕುರಿತಂತೆ ವಿವಿಧ ಪ್ರಚಾರ ಸಾಮಗ್ರಿ ಹಾಗೂ ಪರಿಕರಗಳಿಗೆ ದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಲು ಜಿಲ್ಲಾಡಳಿತ ಈಗಾಗಲೆ ಸಕಲ ರೀತಿಯಿಂದಲೂ ಸಜ್ಜಾಗಿದೆ. ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಚುನಾವಣೆಗೆ ಸಂಬಂಧಿತ ತರಬೇತಿಗಳನ್ನು ಕೈಗೊಳ್ಳಲಾಗಿದೆ. ಚುನಾವಣೆ ಸಂಬಂಧ ಅಗತ್ಯ ತಂಡಗಳನ್ನು ರಚಿಸಿಕೊಳ್ಳಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಸಿದ್ಧತೆ ಮಾಡಿಕೊಳ್ಳಾಗಿದ್ದು, ಮತಯಂತ್ರಗಳ ಬಳಕೆ ಕುರಿತಂತೆ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

       ಭಾರತೀಯ ಚುನಾವಣಾ ಆಯೋಗದಿಂದ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಕೂಡಲೆ, ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಎಲ್ಲ ರಾಜಕೀಯ ಪಕ್ಷಗಳು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣೆ ಸಂದರ್ಭದಲ್ಲಿ ದೂರುಗಳನ್ನು ಸ್ವೀಕರಿಸುವ ಕುರಿತು ದೂರು ಸ್ವೀಕೃತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಒಟ್ಟಾರೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ಜರುಗಿಸಲು ಎಲ್ಲ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪೇಯ್ಡ್ ನ್ಯೂಸ್‍ನಿಂದ ದೂರವಿರಿ

          ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು, ಪತ್ರಿಕೆ ಅಥವಾ ಟಿ.ವಿ. ಮಾಧ್ಯಮಗಳ ಮೂಲಕ ನಿಯಮಬಾಹಿರವಾಗಿ ಪ್ರಚಾರ ಕೈಗೊಳ್ಳುವಂತಿಲ್ಲ. ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಕಾಸಿಗಾಗಿ ಸುದಿ ಮಾಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಇಂತಹ ಯತ್ನವನ್ನು ಯಾರೂ ಮಾಡಬೇಡಿ. ತಪ್ಪಿದಲ್ಲಿ, ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು

         ಯಾವುದೇ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿಕೊಳ್ಳಲು ನಿರ್ಬಂಧವಿಲ್ಲ. ಆದರೆ ಅದಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಎಸ್‍ಎಂಎಸ್ ಸಂದೇಶ, ವಾಯ್ಸ್ ಕಾಲ್, ಕೇಬಲ್ ಅಥವಾ ಟಿ.ವಿ. ವಾಹಿನಿಯಲ್ಲಿ ಜಾಹೀರಾತು, ವಿಡಿಯೋ ಸಂದೇಶ, ಆಟೋಗಳಲ್ಲಿ ಬಳಸಲಾಗುವ ಆಡಿಯೋ ಸಂದೇಶ ಇತ್ಯಾದಿ ಪ್ರಚಾರ ಕಾರ್ಯಗಳಿಗೆ, ಸಂಬಂಧಪಟ್ಟ ಸಮಿತಿಯಿಂದ ಪೂರ್ವಾನುಮತಿ ಪಡೆದಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರಪತ್ರ ಮುದ್ರಕರು ಎಚ್ಚರ ವಹಿಸಿ:

         ಚುನಾವಣೆಗೆ ಸಂಬಂಧಿಸಿದಂತೆ ಕರಪತ್ರಗಳು, ಪೋಸ್ಟರ್ ಅಥವಾ ಬ್ಯಾನರ್ಸ್ ಮುದ್ರಣ ಮಾಡುವವರು, ಇಂತಹ ಮುದ್ರಣಕ್ಕೂ ಮುನ್ನ ಸಂಬಂಧಪಟ್ಟ ಪಕ್ಷ ಅಥವಾ ಅಭ್ಯರ್ಥಿ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ಕರಪತ್ರಗಳ ಮುದ್ರಣ ಸಂಖ್ಯೆ, ವೆಚ್ಚ ಇನ್ನಿತರ ಮಾಹಿತಿಯುಳ್ಳ ಘೋಷಣಾ ಪತ್ರವನ್ನು ಆಯಾ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ವಯಕ್ತಿಕ ಟೀಕೆ, ಟಿಪ್ಪಣಿ, ಜಾತಿ, ಮತಗಳ ನಿಂದನೆ ಇಂತಹ ವಿಚಾರಗಳನ್ನು ಕರಪತ್ರದಲ್ಲಿ ಮುದ್ರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

            ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಮಾತನಾಡಿ, ಚುನಾವಣೆಗೆ ಸ್ಪರ್ಧಿಸಲು ವಯೋಮಿತಿ ಕನಿಷ್ಟ 25 ವರ್ಷ ಆಗಿರಬೇಕು. ಚುನಾವಣಾ ವೆಚ್ಚಮಿತಿಯನ್ನು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಕನಿಷ್ಟ ಒಬ್ಬರು ಸೂಚಕರಿರಬೇಕು. ಇತರೆ ರಾಜಕೀಯ ಪಕ್ಷಗಳು ಅಥವಾ ಪಕ್ಷೇತರ ಅಭ್ಯರ್ಥಿಗಳಿಗೆ ಕನಿಷ್ಟ 10 ಜನ ಸೂಚಕರು ಇರಬೇಕು. ಕ್ರಿಮಿನಲ್ ಹಿನ್ನೆಲೆ ಇದ್ದಲ್ಲಿ, ವಿವರ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸಭೆ, ಸಮಾರಂಭ, ರ್ಯಾಲಿ ಕೈಗೊಳ್ಳಲು ಪೂರ್ವಾನುಮತಿ ಪಡೆಯಬೇಕು. ಭದ್ರತಾ ಠೇವಣಿ ಸಾಮಾನ್ಯ ಅಭ್ಯರ್ಥಿಗಳಿಗೆ 25 ಸಾವಿರ ರೂ. ಹಾಗೂ ಪ.ಜಾತಿ, ಪ.ವರ್ಗದವರಿಗೆ 12500 ರೂ. ನಿಗದಿಪಡಿಸಲಾಗಿದೆ ಎಂದರು.

           ಮುಖ್ಯ ಯೋಜನಾಧಿಕಾರಿ ಓಂಕಾರಪ್ಪ ಅವರು ಮಾತನಾಡಿ, ಸ್ಟಾರ್ ಪ್ರಚಾರಕರ ವಿವರವನ್ನು ಆಯಾ ಪಕ್ಷಗಳೇ ನೀಡಲಿದ್ದು, ಸ್ಟಾರ್ ಪ್ರಚಾರಕರ ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳು ವೇದಿಕೆ ಹಂಚಿಕೊಂಡಲ್ಲಿ, ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೇ ಸೇರಿಸಲಾಗುವುದು. ಒಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಲ್ಲಿ, ವೆಚ್ಚವನ್ನು ಸಮವಾಗಿ ಎಲ್ಲ ಅಭ್ಯರ್ಥಿಗಳಿಗೂ ಅವರ ವೆಚ್ಚಕ್ಕೆ ಸೇರಿಸಲಾಗುವುದು. ಸಭೆ, ಸಮಾರಂಭ ಅಥವಾ ರ್ಯಾಲಿಗಳಲ್ಲಿ ನೀತಿ ಸಂಹಿತೆ ನಿಗಾ ವಹಿಸುವ ಅಧಿಕಾರಿಗಳು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವುದರಿಂದ, ಯಾರೂ ವೆಚ್ಚದ ವಿಷಯದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಣ, ಮದ್ಯ ಹಂಚುವುದು, ಆಸೆ, ಆಮಿಷ ಒಡ್ಡುವುದು ಇವೆಲ್ಲವನ್ನು ಚುನಾವಣಾ ಅಕ್ರಮ ಎಂದೇ ಪರಿಗಣಿಸಿ, ಪ್ರಜಾ ಪ್ರಾತಿನಿಧ್ಯ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap