ಚಿಕ್ಕನಾಯಕನಹಳ್ಳಿ
ಜನಸಾಮಾನ್ಯರು ಪ್ರತಿಯೊಂದಕ್ಕು ಸರ್ಕಾರವನ್ನೇ ಹೊಣೆ ಮಾಡುವುದನ್ನು ಬಿಟ್ಟು, ನಮ್ಮಗಳ ಕರ್ತವ್ಯ ಏನೆಂದು ತಿಳಿದು ನಾಡಿನ ಸಂಪತ್ತನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬ ನಾಗರೀಕನ ಜವಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್‍ಕುಮಾರ್ ಡಿ.ವಡಿಗೇರಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ಪುರಸಭೆ, ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಜಲ ಸಂರಕ್ಷಣೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಳ್ಳಿ, ಊರು, ತೋಟ, ಜಮೀನುಗಳಲ್ಲಿ ನೀರು ಸಂಗ್ರಹಿಸುವ ಕೆಲಸವಾದರೆ ನೀರಿನ ಸಾಂದ್ರತೆ ಹೆಚ್ಚಾಗುತ್ತದೆ, ನೀರಿನ ಲಭ್ಯತೆ ಬಗ್ಗೆ ಯಾರಿಗೂ ಅರಿವಿಲ್ಲದೆ ವ್ಯರ್ಥ ಪೋಲು ಮಾಡುತ್ತಾರೆ, ನೀರು ಮಿತವಾಗಿ ಬಳಸುವುದರಿಂದ ಮುಂದಿನ ಪೀಳಿಗೆಗೂ ನೀರನ್ನು ಸಂಗ್ರಹಿಸಬಹುದು, ಕೃಷಿಯಲ್ಲಿ ನೈಸರ್ಗಿಕ ಗೊಬ್ಬರದ ಬಳಕೆಯಿಂದ ಆರೋಗ್ಯವನ್ನು ಹೆಚ್ಚಿಸಬಹುದು ಹಾಗೂ ಪರಿಸರವನ್ನು ಸಮತೋಲನವಾಗಿ ಕಾಯ್ದಿರಿಸಿಕೊಳ್ಳಬಹುದು ಎಂದರು.
ಸ್ಥಳೀಯ ಗ್ರಾ.ಪಂ, ಪುರಸಭೆ, ನಗರ ಸಭೆಗಳಲ್ಲಿ ಕೆಲಸ ನಿರ್ವಹಿಸುವ ವಾಟರ್‍ಮನ್‍ಗಳು ನೀರಿನ ಬಗ್ಗೆ ಗಮನ ಹರಿಸದೇ ಇರುವುದರಿಂದ ನೀರಿನ ಕೊಳಾಯಿಗಳಲ್ಲಿ ನೀರು ಹರಿದು ಪೋಲಾಗುತ್ತಿರುತ್ತದೆ ಈ ಬಗ್ಗೆ ಎಚ್ಚರ ವಹಿಸಬೇಕು, ನಾಗರೀಕರು ನೀರು ಪೋಲಾಗುವುದನ್ನು ನೋಡಿ ನಮಗೆ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳಬಾರದು, ಅಮೂಲ್ಯವಾದ ನೀರನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಜವಬ್ದಾರಿಯಾಗಿದೆ ಎಂದ ಅವರು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮತದಾರರು ಜಾಗೃತರಾಗಿ ಆಸೆ ಆಮೀಷಗಳಿಗೆ ಒಳಗಾಗದೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾದ ಪರಿಸರ ಅಭಿಯಂತರ ಹೆಚ್.ಚಂದ್ರಶೇಖರ್ ಮಾತನಾಡಿ, ನೀರಿನ ದುರ್ಬಳಕೆ ಪ್ರತಿಯೊಬ್ಬ ನಾಗರೀಕರಿಂದಲೂ ಆಗುತ್ತಿದೆ, ನೀರು ಇಲ್ಲದೆ ಹೋದರೆ ಯಾವುದೇ ಜೀವ ಸಂಕುಲ ಬದುಕಲು ಸಾಧ್ಯವಿಲ್ಲ, ನೀರಿದ್ದರೆ ಪ್ರಪಂಚವಿರಲು ಸಾಧ್ಯ, ನೀರು ಪಂಚಭೂತಗಳಲ್ಲಿ ಒಂದಾಗಿದೆ, ಇಂತಹ ಅಮೂಲ್ಯವಾದ ವಸ್ತುವನ್ನು ಯಾರೂ ಕೂಡ ತಾತ್ಸರ ಮಾಡದೆ ದೇವರ ಸ್ವರೂಪವೆಂದು ತಿಳಿದು ಅದರ ಬಳಕೆಯಾಗಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ನಿರ್ವಾಣಯ್ಯ ಮಾತನಾಡಿ, ಜೀವಜಲ ರಕ್ಷಿಸುವ ಜವಬ್ದಾರಿ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದ್ದು ಮುಂದಿನ ಪೀಳಿಗೆಯ ಬದುಕಿಗಾಗಿ ನೀರನ್ನು ರಕ್ಷಿಸುವ ಹೊಣೆ ಎಲ್ಲರದ್ದು ಎಂದರು.ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಪ್ರಮೀಳಾ, ಅಪರ ಸಿವಿಲ್ ನ್ಯಾಯಾಧೀಶರಾದ ಎನ್.ಕೃಷ್ಣಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎಂ.ಮಹಾಲಿಂಗಯ್ಯ, ಚನ್ನಬಸಪ್ಪ, ಎಸ್.ಎಚ್.ಚಂದ್ರಶೇಖರ್, ವಕೀಲರುಗಳಾದ ಎಮ್.ಬಿ.ನಾಗರಾಜ್, ಎನ್.ಎನ್.ಶ್ರೀಧರ್, ಸಿ.ಎನ್. ಕೃಷ್ಣಮೂರ್ತಿ, ಹೆಚ್.ಟಿ.ಹನುಮಂತಪ್ಪ, ಸಂಪನ್ಮೂಲ ವ್ಯಕ್ತಿ ಜಿ.ಪರಮೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.