ತುರುವೇಕೆರೆ :
ಭಾನುವಾರ ರಾತ್ರಿ ಸುರಿದ ಭರ್ಜರಿ ಮಳೆಯಿಂದಾಗಿ ಶಾಲೆಯೊಂದಕ್ಕೆ ನೀರು ನುಗ್ಗಿ ಶಾಲಾ ದಾಖಲಾತಿಗಳೆಲ್ಲವೂ ನೀರಿಗೆ ಆಹುತಿಯಾಗಿರುವ ಘಟನೆ ತಾಲ್ಲೂಕಿನ ಕಳ್ಳನಕೆರೆ ಗೊಲ್ಲರಹಟ್ಟಿಯಲ್ಲಿ ಸಂಭವಿಸಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ಶಾಲಾ ಆಸುಪಾಸಿನ ಜಮೀನಿನವರ ಕಿತ್ತಾಟದಿಂದ ಶಾಲೆ ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ಶಾಲೆಯಲ್ಲಿ ಪಾಠ ಪ್ರವಚನ ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.
ಅವಘಡಕ್ಕೆ ಕಾರಣವಾದ ಚರಂಡಿ ನೀರು :
ತಾಲ್ಲೂಕಿನ ಮಾದಿಹಳ್ಳಿ ಗ್ರಾಪಂ ವ್ಯಾಪ್ತಿಯ ಕಳ್ಳನಕೆರೆ ಗೊಲ್ಲರಹಟ್ಟಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಿದ್ದು, ಗ್ರಾಮದ ಸುಮಾರು 15 ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಂದ್ರಯ್ಯ ಹಾಗೂ ಪಂಕಜ ಶಾಲೆಯ ಇಬ್ಬರು ಶಿಕ್ಷಕರು. ಶಾಲೆಯು ಒಂದೇ ಕೊಠಡಿ ಹೊಂದಿದ್ದು ಎಲ್ಲಾ ಮಕ್ಕಳು ಒಂದೇ ಕಡೆ ಓದು-ಬರಹ ಕಲಿಯುತ್ತಿದ್ದಾರೆ. ಶಾಲಾ ಕಟ್ಟಡದ ಮುಂಭಾಗದವರೆಗೆ ಮಾತ್ರ ಚರಂಡಿಯಿದ್ದು ನೀರು ಮುಂದಕ್ಕೆ ಹೋಗಲು ರೈತರು ಅವಕಾಶ ನೀಡದ್ದರಿಂದ ಇಂತಹ ಅವಘಡ ಸಂಭವಿಸಿದೆ.
ದಾಖಲೆಗಳು ನೀರುಪಾಲು :
ಶಾಲಾ ಕಟ್ಟಡವು ಭಾಮಿಗಿಂತ ತುಂಬಾ ಕೆಳಮಟ್ಟದಲ್ಲಿರುವುದರಿಂದ ಬಂದ ನೀರು ಸೀದಾ ಶಾಲೆಯೊಳಗೆ ನುಗ್ಗುತ್ತದೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಗ್ರಾಮದೊಳಗಿನ ಮಳೆ ನೀರು ಹಾಗೂ ಹೇಮಾವತಿ ನೀರು ಒಟ್ಟಿಗೆ ಸೇರಿ ಸುಮಾರು ಎರಡು ಅಡಿಯಷ್ಟು ನೀರು ಶಾಲಾ ಕೊಠಡಿಯೊಳಗೆ ನುಗ್ಗಿದೆ. ಇದರಿಂದ ಎಸ್‍ಎಸ್‍ಎ ಅನುದಾನದ ಬಿಲ್‍ಗಳು, ಪಠ್ಯಪುಸ್ತಕಗಳು, ವಿದ್ಯಾಗಮನದ ರೆಕಾರ್ಡ್‍ಗಳು, ನಲಿ-ಕಲಿ ರ್ಯಾಕ್ಸ್, ಮಕ್ಕಳ ಆಟದ ಸಾಮಾನುಗಳು, ಆಹಾರದ ಪದಾರ್ಥಗಳು ಸೇರಿದಂತೆ ಎಲ್ಲವೂ ಮಳೆ ನೀರಿನ ಪಾಲಾಗಿದ್ದು, ಬೀರಿನಲ್ಲಿದ್ದ ಶಾಲಾ ದಾಖಲಾತಿಗಳು ಸಹ ನೀರಿನಲ್ಲಿ ನೆಂದು ಹಾಳಾಗಿವೆ.
ಫಲ ನೀಡದ ಮನವೊಲಿಕೆ ಯತ್ನ :
ಸಿಆರ್‍ಪಿ ಸಾ.ಶಿ.ದೇವರಾಜು, ಎಸ್‍ಡಿಎಂಸಿ ಅಧ್ಯಕ್ಷ ರವಿಕುಮಾರ್, ಗ್ರಾಪಂ ಸದಸ್ಯ ಯೋಗೀಶ್ ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ದುರ್ಗತಿ ಕಂಡು ಮಕ್ಕಳ ದೃಷ್ಠಿಯಿಂದ ಭೂಮಾಲೀಕರ ಮನವೊಲಿಸಲು ಪ್ರಯತ್ನ ಪಟ್ಟರಾದರೂ ಯಾವುದೇ ಫಲಪ್ರದ ಕಾಣಲಿಲ್ಲ.
ಭೂದಾನಿಗಳು ಮನಸ್ಸು ಮಾಡಬೇಕಿದೆ :
ಇತ್ತೀಚೆಗಷ್ಟೆ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಾಕ್ಸ್‍ಚರಂಡಿ, ಕಾಂಪೌಂಡ್, ಶೌಚಾಲಯಗಳ ಕ್ರಿಯಾಯೋಜನೆ ಅನುಮೋದನೆಯಾಗಿದ್ದು, ಕಳೆದ ಒಂದು ತಿಂಗಳ ಹಿಂದಷ್ಟೆ ಕಾಮಗಾರಿ ಕೈಗೆತ್ತಿಕೊಂಡ ಸಂದರ್ಭದಲ್ಲಿ ಚರಂಡಿ ಮಾಡಲು ಶಾಲಾ ಅಕ್ಕಪಕ್ಕದ ಹಿಡುವಳಿದಾರರು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈಗಾಗಲೇ ಶಾಲಾ ಪಾಯವು ರಸ್ತೆಗಿಂತ ತೀರಾ ಕೆಳ ಮಟ್ಟದಲ್ಲಿದಲ್ಲಿರುವುದರಿಂದ ಮಳೆ ನೀರು ಸಹಜವಾಗಿ ಶಾಲೆಯೊಳಗೆ ನುಗ್ಗುತ್ತದೆ. ಆದ್ದರಿಂದ ತಳಹದಿ ಎತ್ತರಿಸಿ ಕಟ್ಟಡ ನಿರ್ಮಾಣ ಮಾಡಬೇಕಿದೆ. ಗ್ರಾಮದಲ್ಲಿ ಭೂದಾನಿಗಳು ಯಾರಾದರೂ ಸ್ಥಳ ನೀಡಿದರೆ ಉತ್ತಮ ಶಾಲೆ ನಿರ್ಮಾಣ ಮಾಡಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾದಿಹಳ್ಳಿ ಗ್ರಾಪಂ ಕಾರ್ಯದರ್ಶಿ ನರೇಂದ್ರ ಪತ್ರಿಕೆಗೆ ತಿಳಿಸಿದ್ದಾರೆ.
ಶಾಲೆಯ ದುಸ್ಥಿತಿಗೆ ಗ್ರಾಮಸ್ಥರೇ ಕಾರಣ :
ಎರಡು ಮೂರು ಸಲ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಗ್ರಾಮದ ಜನತೆಯೊಂದಿಗೆ ಮಾತನಾಡಿ ಶಾಲೆಗೆ ಜಾಗ ನೀಡಿದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಿಸಿಕೊಡುವುದಾಗಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೆ ಶಾಲಾ ಕಟ್ಟಡಕ್ಕೆ ಎರಡು ಬಾರಿ ಅನುದಾನ ಬಂದಿದ್ದು ವಾಪಸ್ ಹೋಗಿದೆ. ಶಾಲೆಯ ಈ ದುಸ್ಥಿತಿಗೆ ಗ್ರಾಮಸ್ಥರೆ ಕಾರಣರಾಗಿದ್ದು, ಇದೀಗ ಮಳೆ ನೀರಿನಿಂದ ಹಾಳಾದ ರೆಕಾರ್ಡ್‍ಗಳ ಬಗ್ಗೆ ಶಾಲೆಯ ಶಿಕ್ಷಕರೊಂದಿಗೆ ಚರ್ಚಿಸಿ ಟೈಅಪ್ ಮಾಡಲಿದ್ದು, ಇಂಡೆಂಟ್ ತೆಗೆದುಕೊಂಡು ಡಿಡಿಪಿಐಗೆ ಸಲ್ಲಿಸಿ ರೆಕಾರ್ಡ್ ತೆಗೆಸಲು ಕ್ರಮ ಕೈಗೊಳ್ಳಲಾಗುವುದು.
-ರಂಗಧಾಮಯ್ಯ, ಬಿಇಒ, ತುರುವೇಕೆರೆ
ಖಾಸಗಿ ಶಾಲೆಗಳತ್ತ ಪೋಷಕರು :
ಒಂದು ತಿಂಗಳ ಹಿಂದಷ್ಟೇ ತಾಪಂ ಅನುದಾನದಲ್ಲಿ ವರಾಂಡಕ್ಕೆ ಪ್ಲೋರಿಂಗ್, ಚರಂಡಿ, ಸುಣ್ಣ-ಬಣ್ಣ ಮಾಡಿರುವುದು ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ಮಕ್ಕಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವಂತಹ ಇಂತಹ ದಿನಗಳಲ್ಲಿ ಮಕ್ಕಳು ಕುಳಿತು ಪಾಠ-ಪ್ರವಚನ ಕೇಳಲು ಮೂಲ ಸೌಕರ್ಯಗಳು ಇಲ್ಲವೆಂದಾದಲ್ಲಿ ಮಕ್ಕಳ ಪೋಷಕರು ಸರ್ಕಾರಿ ಶಾಲೆ ತ್ಯಜಿಸಿ ಖಾಸಗಿ ಶಾಲೆಗಳತ್ತ ಮುಖ ಮಾಡುವುದರಲ್ಲಿ ತಪ್ಪೇನಿದೆ ಎಂಬ ಮಾತು ಪೋಷಕರ ವಲಯದಿಂದ ಕೇಳಿ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
