
ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅವಾಂತರ ಸೃಷ್ಟಿಸಿದ್ದು, ಈ ಬಾರಿ ಮುಂಗಾರು ವಿಳಂಬವೆAಬ ಹವಾಮಾನ ಇಲಾಖೆಯ ಮುನ್ಸೂಚನೆಯ ಬೆನ್ನಲ್ಲೇ ಸೋಮವಾರ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರವಾಳಿ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಾಗಿದೆ. ಮುಂದಿನ 5 ದಿನಗಳವರೆಗೆ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಬೆಂಗಳೂರಿನಲ್ಲಿ ಬಿಸಿಲ ಝಳ ಎಂದಿನAತೆ ಮುಂದುವರೆಯಲಿದೆ.
ಒಣ ಹವೆಯಿಂದ ತತ್ತರಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ನಿನ್ನೆ ಸುರಿದ ಮಳೆ ಬಿಸಿಲ ಕಾವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದೆ. ರಭಸವಾಗಿ ಬೀಸಿದ ಗಾಳಿಯ ಪರಿಣಾಮ ಮರಗಳು ಧರೆಗುರುಳಿ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ಎನ್ ಆರ್ ಪುರ ತಾಲೂಕಿನ ಆಮ್ತಿ ಬಳಿ ಬೃಹತ್ ಮರ ರಸ್ತೆಗೆ ಬಿದ್ದಿದ್ದು, ರಸ್ತೆಬದಿಗಿದ್ದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಕಾರಣ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು.
ಕಳಸ ತಾಲೂಕಿನ ಕುದುರೆಮುಖ ಟಿಬಿ ಸರ್ಕಲ್ನಲ್ಲಿ ಮರ ಉರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಹಲವೆಡೆ ಮೇಲ್ಛಾವಣಿಗೆ ಹೊದಿಸಿದ್ದ ಶೀಟ್ಗಳು ಗಾಳಿಗೆ ಹಾರಿವೆ. ಕೊಪ್ಪ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಆರು ಮನೆಗಳ ಮೇಲ್ಛಾವಣಿಗಳು ಹಾರಿವೆ. ಅಲಗೇಶ್ವರ ಗ್ರಾಮದಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒದ್ದೆ : ಚಾಮರಾಜನಗರದ ಗುಂಡ್ಲುಪೇಟೆಯಲ್ಲೂ ಗಂಟೆಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒದ್ದೆಯಾಗಿದೆ. ಗುಂಡ್ಲುಪೇಟೆ ಭಾಗದ 110 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದರು.
ಹಾಸನದ ವಾಣಿಜ್ಯ ಮಳಿಗೆಗಗಳಿಗೆ ಹಾನಿ : ಹಾಸನ ಜಿಲ್ಲೆಯಲ್ಲಿ ಸಂಜೆ ಬೊಬ್ಬಿರಿದ ಗಾಳಿ ಮಳೆಗೆ ಅರಕಲಗೂಡು ತಾಲೂಕಿನ ಹಲವೆಡೆ ಮನೆಗಳಿಗೆ ಹಾಕಿದ್ದ ಶೀಟ್ಗಳು ಹಾರಿ ಹೋಗಿವೆ. ಮಳೆಗೆ ಕಾಲೇಜು ಕಟ್ಟಡ, ಬಿಜಿಎಸ್ ಸಮುದಾಯಭವನ ಹಾಗೂ ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿದ್ದ ಶೀಟ್ಗಳು ಹಾರಿ ಬಂದು ರಸ್ತೆಗೆ ಬಿದ್ದಿವೆ. ಮನೆಯ ಶೀಟ್ಗಳೂ ಕೂಡ ಹಾರಿ ಹೋಗಿದ್ದು, ತಗ್ಗಿನಲ್ಲಿದ್ದ ಮನೆಗಳಿಗೆ ನೀರು ನುಗ್ಗಿದೆ.
ಮರದ ಹರೆಗಳು ಕಾರಿನ ಮೇಲೆ ಬಿದ್ದು ಎರಡು ಕಾರುಗಳು ಜಖಂಗೊAಡಿವೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಬಿದ್ದ ಪರಿಣಾಮ ತಂತಿಗಳು ಕತ್ತರಿಸಿ ಬಿದ್ದಿದ್ದು ಹಲವು ಗ್ರಾಮಗಳಲ್ಲಿ ಜನ ಕತ್ತಲಲ್ಲಿ ಕೂರುವಂತಾಗಿತ್ತು.
ರಾಣೇಬೆನ್ನೂರು ಕೆರೆಯಂತಾದ ರಸ್ತೆಗಳು: ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಬ್ಯಾಡಗಿ ಸೇರಿದಂತೆ ವಿವಿಧ ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಮಳೆಗೆ ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ರಾಣೇಬೆನ್ನೂರಿನ ಮಳೆಗೆ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದ್ದಾರೆ.
ಮುಂದಿನ ಐದು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಸೂಚನೆ
ಏಪ್ರಿಲ್ 21ರಿಂದ 25ರವರೆಗೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಈ ಅವಧಿಯಲ್ಲಿ ಕರಾವಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ. ಉಳಿದಂತೆ ಬಿರು ಬಿಸಿಲು ಕಂಡುಬರಲಿದ್ದು, ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ.
ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಮುನ್ಸೂಚನೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಬಾಗಲಕೋಟೆ, ಹಾವೇರಿ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಾವಣಗೆರೆ, ಚಿತ್ರದುರ್ಗ, ಬೀದರ್ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಹಗುರ ಮಳೆಯಾಗಲಿದೆ.
ರಾಜಧಾನಿಯ ಜನ ಬಿಸಿಲಿನಿಂದ ತತ್ತರಿಸುತ್ತಿರುವಾಗಲೇ ಇನ್ನೂ 48 ಘಂಟೆಗಳ ಕಾಲ ಹವಾಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ವರದಿ ತಿಳಿಸಿದೆ. ಬೆಂಗಳೂರು ನಗರಕ್ಕೆ ವರುಣನ ಚಿಂಚನ ಸಾಧ್ಯತೆ ಇಲ್ಲ. ಇಲ್ಲಿ ಒಣಹವೆ ಮುಂದುವರೆಯಲಿದ್ದು, ಸದ್ಯ 36% ಗರಿಷ್ಠ ಉಷ್ಣಾಂಶ ದಾಖಲಾಗಿದೆ.








