ಬೆಂಗಳೂರು:
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಗಳ ಹಾವಳಿಯಿಂದ ರೈತರ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಗಳಿಗೆ ಪ್ರತ್ಯೇಕ ಉದ್ಯಾನವನ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆದಿದ್ದು, ಈ ವೇಳೆ ಶಿವಮೊಗ್ಗದಲ್ಲಿ ಮಂಗಗಳ ಹಾವಳಿಯಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಇದರಿಂದ ಬೆಳೆದ ಬೆಳೆ ರೈತರಿಗೆ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬಿ.ವೈ.ರಾಘವೇಂದ್ರ ಮನವಿಗೆ ಸ್ಪಂದಿಸಿದ ಸಿಎಂ ಬಿಎಸ್ ವೈ, ಶಿವಮೊಗ್ಗ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ನಿರ್ಮಾಣದ ಬಗ್ಗೆ ಸ್ಪಷ್ಟ ರೂಪರೇಷೆಗಳನ್ನು ತಯಾರಿಸಿ ವರದಿ ನೀಡಬೇಕು, ಕೂಡಲೇ 100 ಎಕೆರೆ ಜಮೀನಿನಲ್ಲಿ ಪ್ರಾಯೋಗಿಕವಾಗಿ ಮಂಕಿ ಪಾರ್ಕ್ ಮಾಡಿ, ಇಲ್ಲೇ ಅಧ್ಯಯನ ಮಾಡಿ, ಅದು ಯಶಸ್ವಿಯಾದರೆ ಬೇರೆ ಕಡೆ ಮಾಡೋಣ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕುಮಾರ್ ಬಂಗಾರಪ್ಪ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ