ಕಲಿಕೆ ಮಕ್ಕಳಲ್ಲಿ ಜೀವನೋತ್ಸಹ ಹೆಚ್ಚಿಸುವಂತಿರಲಿ

ಸಾಣೇಹಳ್ಳಿ :

       ಮಕ್ಕಳಿಗೆ ಕಲಿಕೆ ಭಾರ ಹಾಗೂ ತಲೆನೋವಾಗದೇ ಜೀವನೋತ್ಸಾಹ ಹೆಚ್ಚಿಸುವಂತಿರಬೇಕೆಂದು ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.

       ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ಶ್ರೀಶಿವಕುಮಾರ ಕಲಾಸಂಘ ಮತ್ತು ಶ್ರೀಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಮಕ್ಕಳ ಹಬ್ಬ-19’ರ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬದುಕನ್ನು ಪ್ರೀತಿಸಬೇಕು, ಎಲ್ಲರೊಟ್ಟಿಗೆ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕೆಂಬುದು ಈ ಮಕ್ಕಳ ಹಬ್ಬದ ಮೂಲ ಆಶಯವಾಗಿದೆ ಎಂದರು.

        ಧರ್ಮದ ಮೂಲ ತಿರುಳು ಹೃದಯ ಹೂವಾಗಬೇಕು, ಮನಸ್ಸು ಪ್ರೀತಿಯ ಮಧುವನ್ನು ಸುರಿಸುವಂತಾಗಬೇಕು. ಆ ಮಧುವನ್ನು ಶತೃಗಳಿಗೂ ಉಣಿಸುವಂಥ ಗುಣ ಮಕ್ಕಳಲ್ಲಿ ಬರಬೇಕು. ಮನುಷ್ಯನ ಮನಸ್ಸು ತುಂಬಾ ಚಂಚಲ. ಅದು ‘ನಾನು’ ಎನ್ನುವ ಅಹಂಕಾರದಿಂದ ತುಂಬಿಕೊಂಡಿದೆ. ಬಸವಣ್ಣನವರ ಆಣತಿಯಂತೆ ‘ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ……’ ಎಲ್ಲವನ್ನೂ ನಾನು ಮಾಡಿದೆ ಎನ್ನುವ ಅಹಂಕಾರ ಆವರಿಸಿಕೊಂಡರೆ ವ್ಯಕ್ತಿಯ ಅವನತಿ ಕಟ್ಟಿಟ್ಟ ಬುತ್ತಿ ಎಂದು ಸೂಚ್ಯವಾಗಿ ಎಚ್ಚರಿಸಿದರು.

        ಇದು ನನ್ನಿಂದ ಮಾತ್ರವಲ್ಲ ನಮ್ಮೆಲ್ಲರಿಂದ ಈ ಕೆಲಸ ಆಯಿತು ಅಂದರೆ ಅಹಂಕಾರ ಅಡಗಿ ಸುಧಾರಣೆ ಆಯಿತು ಎಂದರ್ಥ. 12ನೆಯ ಶತಮಾನದಲ್ಲಿ ಬಸವಣ್ಣನವರು ಉನ್ನತಿ ಸಾಧಿಸುವುದಕ್ಕೆ ಕಾರಣ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಅಹಂಕಾರ ನಿರಶನದ ಗುಣದಿಂದ. ಪ್ರೀತಿಗೆ ಎಂತಹ ದ್ವೇಷವನ್ನು ನಾಶಮಾಡುವ ಶಕ್ತಿಯಿದೆ. ನಾವು ನಮ್ಮ ಶತೃಗಳನ್ನು ಮಿತ್ರರಂತೆ ಪ್ರೀತಿಸುವ ಗುಣ ಮೈಗೂಡಿಸಿಕೊಳ್ಳುವುದೇ ನಿಜವಾದ ಧರ್ಮ. ಈ ರೀತಿಯ ಇಂತಹ ಬದುಕನ್ನು ನಾವು ಮಕ್ಕಳಿಗೆ ಕಲಿಸಿಕೊಡಬೇಕಾಗಿದೆ ಎಂದರು.

        ಆಧುನಿಕ ತಂತ್ರಜ್ಞಾನ ಅದರಲ್ಲೂ ಸಾಮಾಜಿಕ ಜಾಲತಾಣಗಳಿಂದ ಮನುಷ್ಯ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ಆದ್ದರಿಂದ ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡುವ ಕೆಲಸವನ್ನು ಪೋಷಕರು ಮಾಡಬೇಕು. ಸುತ್ತಮುತ್ತಲಿನ ಪ್ರಾಣಿ, ಪಕ್ಷಿ, ಗಿಡ-ಮರಗಳನ್ನು ಪ್ರೀತಿಸುವ ಮತ್ತು ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಅರಿವನ್ನು ಮಕ್ಕಳಲ್ಲಿ ಮೂಡಿಸಿ ಆ ಮೂಲಕ ಮಕ್ಕಳ ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು.

        ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಯಕ್ಷಗಾನ ಪಟು ಕೆರೆಮನೆ ಶಿವಾನಂದ ಹೆಗಡೆ, ವಿಶ್ವದಲ್ಲಿ ನಮ್ಮ ರಾಷ್ಟ್ರ ವಿಭಿನ್ನವಾಗಿ ಗುರುತಿಸಿಕೊಂಡಿರುವುದು ಕಲೆ, ಸಾಹಿತ್ಯ, ಸಂಸ್ಕತಿ, ಸಂಗೀತ ಮುಂತಾದ ವೈವಿಧ್ಯಮಯವಾದ ಅಂಶಗಳಿಂದ. ಆದರೆ ಇಂದು ಕೆಳಮಟ್ಟದ ಕಲಾ ಪ್ರದರ್ಶನ, ನಿರುತ್ಸಾಹ, ಸರಕಾರದ ಪ್ರೋತ್ಸಾಹ ಇಲ್ಲದಿರುವುದೇ ನಮ್ಮ ದೇಶಿ ಸಂಸ್ಕøತಿಯ ಅವನತಿಗೆ ಕಾರಣವಾಗುತ್ತಿದೆ ಎಂದರು.

       ಸಂಸ್ಕತಿಯ ಬಗ್ಗೆ ವೇದಿಕೆಗಳಲ್ಲಿ ಭಾಷಣ ಮಾಡುವವರು ಅನೇಕರಿದ್ದಾರೆ. ಆದರೆ ಸಂಸ್ಕತಿಯನ್ನು ಉಳಿಸಿ, ಬೆಳೆಸಿ, ಮೈಗೂಡಿಸಿಕೊಂಡು ಆಚರಿಸುವವರು ಬೆರಳೆಣಿಕೆಯಷ್ಟು ಮಾತ್ರ. ಅಂಥವರಲ್ಲಿ ಸಾಣೇಹಳ್ಳಿಯ ಪೂಜ್ಯರೂ ಒಬ್ಬರು. ಪೂಜ್ಯರು ಮಠವನ್ನು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರಿಸದೇ ರಂಗಭೂಮಿಯ ಕಾರ್ಯಗಳನ್ನು ಅದರೊಟ್ಟಿಗೆ ಸಮ್ಮಿಲತಗೊಳಿಸಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಂಸ್ಕತಿಕವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಈ ಕಾರ್ಯ ಅತ್ಯಂತ ಶ್ಲಾಘನೀಯವಾದುದು ಎಂದರು.
ರಂಗನಿರ್ದೇಶಕ ಕೃಷ್ಣಮೂರ್ತಿ ಮೂಡಬಾಗಿಲು, ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಿ ವಿ ಗಂಗಾಧರಪ್ಪ ಮಾತನಾಡಿದರು.

        ವೇದಿಕೆಯಲ್ಲಿ ರಂಗನಿರ್ದೇಶಕ ವೆಂಕಟೇಶ್ವರ ಕೆ ಸ್ವರ, ನೃತ್ಯ ಸಂಯೋಜಕಿ ಭೂಮಿಕ, ರಂಗಪ್ರಯೋಗಶಾಲೆಯ ಪ್ರಾಚಾರ್ಯ ಜಗದೀಶ್ ಆರ್ ಉಪಸ್ಥಿತರಿದ್ದರು. ಶಿವಸಂಚಾರದ ನಾಗರಾಜ್ ಹೆಚ್ ಎಸ್ ವಚನ ಗೀತೆಗಳನ್ನು ಹಾಡಿದರು. ಶಿವಕುಮಾರ್ ಬಿ ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

          ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯಿಂದ ಆಗಮಿಸಿದ 125ಜನ ಶಿಬಿರಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ರಂಗಶಾಲೆಯ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ಜಿ ಬಿ ಜೋಷಿ ರಚನೆಯ, ಜಗದೀಶ್ ಆರ್ ನಿರ್ದೇಶನದ ‘ಕದಡಿದ ನೀರು’ ನಾಟಕವನ್ನು ಪ್ರದರ್ಶಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link