ನಗರದ ಕುಡಿಯುವ ನೀರಿನ ಸರಬರಾಜಿಗಾಗಿ ಒತ್ತಾಯ

ಬಳ್ಳಾರಿ

      ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯು ಸಂಪೂರ್ಣವಾಗಿ ಕೆಟ್ಟುಹೋಗಿ ಅವ್ಯವಸ್ಥೆಯ ಆಗರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷವೂ ಬೇಸಿಗೆ ದಿನಗಳು ಬಂದಾಗ, 13-14 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಕೆಲವೆಡೆ ಒಂದೆರಡು ಗಂಟೆ ಬಿಟ್ಟು ಬಂದ್, ಮಾಡಲಾಗುತ್ತದೆ. ಕೆಲವಡೆ ನೀರು ಬಿಟ್ಟಾಗ, ಬಾರಿ ಪ್ರಮಾಣದ ನೀರು ಪೋಲಾಗಿ ವ್ಯರ್ಥವಾಗಿ ಹೋಗುತ್ತದೆ. ಕೆಲವೆಡೆ ಅವಶ್ಯಕತೆಗನುಗುಣವಾಗಿ ನೀರು ಸಿಗುವುದಿಲ್ಲ ಅನೇಕ ಕಡೆ ಚರಂಡಿ ಮಿಶ್ರಿತ ವಾಸನೆಯುಕ್ತ ನೀರು ತಿಂಗಳುಗಟ್ಟಲೇ ಬಂದರೂ ಕೇಳುವವರಿಲ್ಲ.

     ಇದನ್ನೆಲ್ಲಾ ನೋಡಿದರೆ ಮೇಲ್ನೋಟಕ್ಕೆ ಮಹಾನಗರ ಪಾಲಿಕೆಯ ಅತ್ಯಂತ ನಿರ್ಲಿಪತನ ಗೋಚರಿಸುತ್ತದೆ. ನೀರಿನ ಸರಬರಾಜು ವ್ಯವಸ್ಥೆಯ ನಿರ್ವಹಣೆ ಅರಾಜಕತೆಯ ದಾರಿ ಹಿಡಿದಿದೆ. ಒಂದೆಡೆ ತಜ್ಞರ ಅಭಿಪ್ರಾಯದಂತೆ ಈ ವರ್ಷ ಅಲ್ಲೀಪುರ ನೀರಿನ ಜಲಾಶಯದಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡವಷ್ಟು ನೀರು ಸಂಗ್ರಹಣೆಯಾಗಿದ್ದರೂ, ಬಳ್ಳಾರಿಯ ಜನತೆಗೆ 13-14ದಿನಗಳಿಗೊಮ್ಮೆ ಏಕೆ ನೀರು ಕೊಡಲಾಗುತ್ತದೆ ? ಅನೇಕ ಕಡೆ ಚರಂಡಿ ಮಿಶ್ರಿತ ನೀರು ಅನೇಕ ತಿಂಗಳುಗಳಿಂದ ಬಂದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಏಕೆ?. ಈ ಪ್ರಶ್ನೆಗಳು ಜನತೆಯನ್ನು ಕಾಡುತ್ತಿವೆ.

     ಆದ್ದರಿಂದ ಮಹಾನಗರ ಪಾಲಿಕೆಯು ಈ ನಿರ್ಲಕ್ಷ್ಯ ಬೇಜವಾಬ್ದಾರಿ ಧೋರಣೆಯನ್ನು ಬಿಟ್ಟು ಜನತೆಯ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯು ಮನವಿ ಮಾಡುತ್ತದೆ.

ಬೇಡಿಕೆಗಳು:
1. ಎಲ್ಲಾ ಬಡಾವಣೆಗಳಿಗೆ 2 ದಿನಕ್ಕೊಮ್ಮೆ ನೀರು ಸರಬರಾಜು ಮಾಡಿ.
2. ಮಲಿನವಾದ ಚರಂಡಿ ಮಿಶ್ರಿತ ನೀರು, ಕುಡಿಯುವ ನೀರಿನ ಪೈಪುಗಳಲ್ಲಿ ಬರದಂತೆ ತಡೆಯಲು ತುರ್ತಾಗಿ ಕ್ರಮ ಕೈಗೊಳ್ಳಿ.
3. ಅವ್ಯವಸ್ಥೆಯ ಆಗರವಾಗಿರುವ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಲು, ಅವಶ್ಯಕತೆಗೆ ತಕ್ಕಂತೆ ನೀರಿನ ಸಿಬ್ಬಂದಿ ಸಂಖ್ಯೆ ಹಾಗೂ ಮೇಲ್ವಿಚಾರಕರನ್ನು ನೇಮಿಸಿ.
4. ಯಾವ ದಿನಗಳಲ್ಲಿ ಯಾವ ಯಾವ ವಾರ್ಡುಗಳಿಗೆ ಯಾವ ಸಮಯದಲ್ಲಿ ನೀರು ಬಿಡುತ್ತೀರಿ ಎನ್ನುವುದನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿ.

     ಸುದ್ದಿ-ಮಹಾನಗರಪಾಲಿಕೆಯ ಎದುರು ನಡೆದ ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ(ಸಿ) ಜಿಲ್ಲಾ ನಾಯಕರುಗಳಾದ ಎ.ದೇವದಾಸ್, ಮಂಜುಳಾ.ಎಂ.ಎನ್, ಸೋಮಶೇಖರ ಗೌಡ, ಡಾ.ಪ್ರಮೋದ್, ಗೋವಿಂದ್, ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಮುರ್ತುಜಾ ಸಾಬ್, ಬಡಾವಣೆಯ ವಹೀದಾ ಬೀ, ಅಂಜಿನಪ್ಪ ನಗರ ಸೇರಿದಂತೆ ವಿವಿದ ಬಡಾವಣೆಯ ನಾಗರಿಕರು ಪಾಲ್ಗೊಂಡಿದ್ದರು. ನಗರಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ.ಮನೋಜ್ ಮನವಿ ಪತ್ರ ಸ್ವೀಕರಿಸಿ, ಮೇ 27ಕ್ಕೆ ನೀರಿನ ಸಮಸ್ಯೆ ಚರ್ಚಿಸಲು ಆಯುಕ್ತರೊಂದಿಗೆ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಅಂಜಿನಪ್ಪ ನಗರದ ಕುಡಿಯುವ ನೀರು ಸರಬರಾಜಿನ ವಾಲ್ವ್ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಬಡಾವಣೆಗೆ ಅಧಿಕಾರಿಗಳನ್ನು ಕಳುಹಿಸುವುದಾಗಿ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap