ಲೋಕಸಭಾ ಚುನಾವಣೆ : ಮತದಾರನ ಚಿತ್ತ ಯಾರತ್ತ??

ತುಮಕೂರು:

         ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.77.03 ಮತದಾನ ನಡೆದಿದ್ದು, ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಯಾರೂ ನಿರೀಕ್ಷಿಸದಷ್ಟು ಚೇತರಿಕೆ ಕಂಡುಬಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.72.50 ರಷ್ಟು ಮತದಾನ ನಡೆದಿದ್ದು, 2019 ರಲ್ಲಿ ಶೇ.5 ರಷ್ಟು ಹೆಚ್ಚಳವಾಗಿದೆ. ಸಂಜೆಯ ವೇಳೆಗೆ ಅನಿರೀಕ್ಷಿತ ರೀತಿಯಲ್ಲಿ ಹೆಚ್ಚಳಗೊಂಡ ಮತದಾನದ ಪ್ರಮಾಣ ಯಾರ ಪರವಾಗಲಿದೆ ಎಂಬುದರ ವಿಶ್ಲೇಷಣೆಗಳು ನಡೆಯುತ್ತಲೇ ಇದ್ದು, ಮೇ 23ರ ಫಲಿತಾಂಶವೇ ಉತ್ತರ ನೀಡಬೇಕು.

       ಕಳೆದ ಲೋಕಸಭಾ ಚುನಾವಣೆಗೂ ಪ್ರಸಕ್ತ ಚುನಾವಣೆಗೂ ಸಾಕಷ್ಟು ಏರುಪೇರುಗಳಾಗಿವೆ. 2014 ರಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ 4, ಕಾಂಗ್ರೆಸ್‍ನ 3 ಹಾಗೂ ಬಿಜೆಪಿ 1 ಸ್ಥಾನದಲ್ಲಿ ಅಧಿಕಾರದಲ್ಲಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ 1 ಸ್ಥಾನವನ್ನು ಕಳೆದುಕೊಂಡ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿದ್ದರೆ ಒಂದೇ ಕ್ಷೇತ್ರದಲ್ಲಿದ್ದ ಬಿಜೆಪಿ ಈಗ ನಾಲ್ಕು ಕ್ಷೇತ್ರಗಳಲ್ಲಿ ತನ್ನ ಪತಾಕೆ ಹಾರಿಸಿದೆ. ಮೂರು ಕ್ಷೇತ್ರಗಳಲ್ಲಿದ್ದ ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಷ್ಟೇ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.

       2014 ರಲ್ಲಿ ಜೆಡಿಎಸ್ ಪಕ್ಷವು ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕೊರಟಗೆರೆ, ಗುಬ್ಬಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕಾರ ಹಿಡಿದಿದ್ದರೆ ಕಾಂಗ್ರೆಸ್ ಪಕ್ಷವು ತಿಪಟೂರು, ತುಮಕೂರು ನಗರ, ಮಧುಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕಾರದಲ್ಲಿತ್ತು. ಇಡೀ ಜಿಲ್ಲೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು.

       ಆ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರದಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಂಡಿದ್ದ ಬಿಜೆಪಿ 2018 ರಲ್ಲಿ ಆ ಸ್ಥಾನವನ್ನು ಕಳೆದುಕೊಂಡಿದೆ. ಇಲ್ಲಿ ಸ್ಥಾನ ಕಳೆದುಕೊಂಡರೂ ನಾಲ್ಕು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಜೆಡಿಎಸ್ ಹಿಡಿತದಲ್ಲಿದ್ದ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕಾಂಗ್ರೆಸ್ ಹಿಡಿತದಲ್ಲಿದ್ದ ತುಮಕೂರು ನಗರ ಹಾಗೂ ತಿಪಟೂರು ಕ್ಷೇತ್ರಗಳು ಈಗ ಬಿಜೆಪಿ ಪಾಲಾಗಿವೆ. ತುಮಕೂರು ಗ್ರಾಮಾಂತರ ಜೆಡಿಎಸ್ ವಶವಾಗಿದೆ. ಜೆಡಿಎಸ್ ಪಾಲಾಗಿದ್ದ ಕೊರಟಗೆರೆ ಕ್ಷೇತ್ರ ಕೈವಶವಾಗಿದೆ.

       2014 ರ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಲ್ಕು ಕ್ಷೇತ್ರಗಳಲ್ಲಿದ್ದರೂ ಆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಲಭ್ಯವಾಗಿದ್ದ ಮತಗಳು ಕಡಿಮೆಯೇ. ಜೆಡಿಎಸ್ ಕ್ಷೇತ್ರವಿರುವ ಎಲ್ಲ ಕಡೆಯೂ ಆ ಮತಗಳು ಬಹುಪಾಲು ಕಾಂಗ್ರೆಸ್ ಕಡೆ ವಾಲಿದ್ದವು. ಹೀಗಾಗಿ ಎಸ್.ಪಿ.ಮುದ್ದಹನುಮೇಗೌಡರು 74041 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

        ಕಾಂಗ್ರೆಸ್ ಅಭ್ಯರ್ಥಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 11999, ಮಧುಗಿರಿ ಕ್ಷೇತ್ರದಲ್ಲಿ 38536, ಕೊರಟಗೆರೆ ಕ್ಷೇತ್ರದಲ್ಲಿ 33583, ತುರುವೇಕೆರೆ ಕ್ಷೇತ್ರದಲಿ 18737 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮುದ್ದಹನುಮೇಗೌಡರು ಗಳಿಸಿದ್ದ ಒಟ್ಟು ಮತ 4,29,868. ಜೆಡಿಎಸ್ ಅಭ್ಯರ್ಥಿಗಳಿದ್ದ ಎಲ್ಲ ಕ್ಷೇತ್ರಗಳಲ್ಲಿಯೂ ಎ.ಕೃಷ್ಣಪ್ಪ ಅವರ ಬದಲಿಗೆ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಮತಗಳನ್ನು ಪಡೆದಿದ್ದರು.

         ಹೀಗಾಗಿ ಆ ಪಕ್ಷದ ಸಾಧನೆ ಆಗ ಗಣನೀಯ ಕುಸಿತ ಕಂಡಿತ್ತು. ಇಡೀ 8 ಕ್ಷೇತ್ರಗಳಲ್ಲಿ ಮಧುಗಿರಿ, ಕೊರಟಗೆರೆ ಹಾಗೂ ತುರುವೇಕೆರೆಯಲ್ಲಿ ಜೆಡಿಎಸ್ 2ನೇ ಸ್ಥಾನ ಪಡೆದಿದ್ದನ್ನು ಬಿಟ್ಟರೆ ಉಳಿದೆಲ್ಲ ಕಡೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಯಾವ ಕ್ಷೇತ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿ ಲೀಡ್ ಪಡೆದಿರಲಿಲ್ಲ.

      ಬಿಜೆಪಿಯ ಜಿ.ಎಸ್.ಬಸವರಾಜು 3,55,827 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದರು. ಇವರು ತಿಪಟೂರಿನಲ್ಲಿ 14,759, ತುಮಕೂರು ನಗರದಲ್ಲಿ 6046, ತುಮಕೂರು ಗ್ರಾಮಾಂತರದಲ್ಲಿ 3973, ಗುಬ್ಬಿಯಲ್ಲಿ 2725 ಮುನ್ನಡೆ ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಸ್ಪರ್ಧಿಸುವಂತಾಯಿತು.

      ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಣದಲ್ಲಿ ಇಲ್ಲವಾದ ಕಾರಣ ಆ ಪಕ್ಷದ ಮತಗಳು ಸಹಜವಾಗಿ ಜೆಡಿಎಸ್ ಪಾಲಾಗಲಿವೆ ಎಂಬ ವ್ಯಾಖ್ಯಾನಗಳು ನಡೆದವು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಪಡೆದ ಒಟ್ಟು ಮತ 6,88,551 ಆಗಿತ್ತು. ಮೈತ್ರಿ ಅಭ್ಯರ್ಥಿಗೆ ಇಷ್ಟು ಮತಗಳು ಲಭ್ಯವಾಗುವವೆ? ಅಥವಾ ಏರುಪೇರು ಆಗಬಹುದೆ ಎಂಬ ಚರ್ಚೆಗಳು ಈಗ ಹೆಚ್ಚು ಚಾಲನೆಗೆ ಬಂದಿವೆ.

ಡಿಸಿಎಂ ವರ್ಚಸ್ಸು:

      ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಕೊರಟಗೆರೆಯಲ್ಲಿ ಮಾತ್ರ. ಡಾ.ಜಿ.ಪರಮೇಶ್ವರ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ತುಮಕೂರು ಕ್ಷೇತ್ರಕ್ಕೆ ದೇವೇಗೌಡರ ಹೆಸರು ಘೋಷಣೆ ಆದಾಗಿನಿಂದ ಪರಮೇಶ್ವರ್ ಹೆಚ್ಚು ಕ್ರಿಯಾಶೀಲರಾಗಿ ಓಡಾಡಿದರು. ದೇವೇಗೌಡರು ಸಹ ಪರಮೇಶ್ವರ್ ಹೆಗಲಿಗೆ ತಮ್ಮ ಗೆಲುವಿನ ಭಾರ ಹಾಕಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಬೇಗುದಿ ಕಾಣಿಸಿತು.

        ಚುನಾವಣೆಯ ಕೊನೆಯ ಹಂತದಲ್ಲಿ ಕೆಲವು ಮುಖಂಡರು ಪ್ರಚಾರದಲ್ಲಿ ಕಾಣಿಸಿಕೊಂಡರು. ಡಾ.ಜಿ.ಪರಮೇಶ್ವರ್ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ಪಡೆದು ಮೈತ್ರಿ ಅಭ್ಯರ್ಥಿ ಕಡೆ ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆಯೇ? ಕಾಂಗ್ರೆಸ್ ನಾಯಕರು ಹಾಗೂ ಆ ಪಕ್ಷದ ಮುಖಂಡರು ಮೈತ್ರಿಯನ್ನು ಬೆಂಬಲಿಸಿದ್ದಾರೆಯೇ ಎಂಬ ಚರ್ಚೆಗಳು ಚುನಾವಣೆ ದಿನದಿಂದಲೂ ನಡೆಯುತ್ತಲೇ ಇದೆ. ಪರಮೇಶ್ವರ್ ಇದೇ ಜಿಲ್ಲೆಯವರಾದ್ದರಿಂದ ಉಪಮುಖ್ಯಮಂತ್ರಿಗಳೂ ಆಗಿರುವುದರಿಂದ ಅವರ ವರ್ಚಸ್ಸು ಹೇಗೆ ಕೆಲಸ ಮಾಡಿದೆ ಎಂಬುದೂ ಇಲ್ಲಿ ಗಮನಾರ್ಹ.

        ಅಭ್ಯರ್ಥಿ ಬದಲಾವಣೆ ಪರಿಣಾಮ: ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಬದಲಾಗಿ ಜೆಡಿಎಸ್‍ಗೆ ಮಣೆ ಹಾಕಿದ್ದು, ಆನಂತರದ ಕೆಲವು ದಿನ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಚುನಾವಣೆಯ ವೇಳೆಗೆ ಈ ಪ್ರತಿಭಟನೆ ತಣ್ಣಗಾಗಿ ಮೈತ್ರಿ ಧರ್ಮ ಪಾಲನೆಯಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಈ ಮೈತ್ರಿ ಧರ್ಮ ಪಾಲನೆಯಾಗಿದೆಯೇ? ದೇವೇಗೌಡರ ಸ್ಪರ್ಧೆಯನ್ನು ಒಪ್ಪಿಕೊಂಡಿದ್ದಾರೆಯೇ? 2014ರ ಚುನಾವಣೆಯಲ್ಲಿ ಮೂಡಿದ ಒಕ್ಕಲಿಗರ ಜಾಗೃತಿ ಈಗಲೂ ಸಾಧ್ಯವಾಗಿದೆಯೇ ಎಂಬಂತಹ ಪ್ರಶ್ನೆಗಳಿಗೆ ಫಲಿತಾಂಶವೇ ಉತ್ತರ ನೀಡಬೇಕು.

ಇಬ್ಬರೂ ಹೋರಾಟಗಾರರು:

        ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಜಿ.ಎಸ್.ಬಸವರಾಜು ಹಾಗೂ ಹೆಚ್.ಡಿ.ದೇವೇಗೌಡರಿಬ್ಬರೂ ಹೋರಾಟಗಾರರೆ. ಇಬ್ಬರಿಗೂ 10 ವರ್ಷಗಳ ವಯೋಮಾನದ ಅಂತರವಿದೆ. ವೈಯಕ್ತಿಕವಾಗಿ ಹಾಗೂ ಪಕ್ಷದ ದೃಷ್ಟಿಯಿಂದ ನೋಡಿದರೆ ಇಬ್ಬರಿಗೂ ಸಕಾರಾತ್ಮಕ, ನಕಾರಾತ್ಮಕ ರಾಜಕೀಯ ಲೆಕ್ಕಾಚಾರಗಳು ಇದ್ದೇ ಇವೆ. ಇವೆಲ್ಲವನ್ನೂ ಮೀರಿದ ಚಿತ್ರಣವನ್ನು ಕಾಣಲು ಸಾಧ್ಯವಾಗಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap