ಹಾನಗಲ್ಲ :

ಮಸೀದಿಗಳನ್ನು ಅಸ್ತ್ರ ಮಾಡಿಕೊಂಡು ಭಯೋತ್ಪಾದನೆ ಹುಟ್ಟುಹಾಕಿ ರಾಷ್ಟ್ರೀಯ ಹಬ್ಬ ಸೇರಿದಂತೆ ಸಾಂಸ್ಕತಿಕ ವಾತಾವರಣಕ್ಕೆ ಆತಂಕವೊಡ್ಡುತ್ತಿರುವ ಕಿಡಿಗೇಡಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಹಾನಗಲ್ಲ ತಾಲೂಕಿನ ಹೀರೂರು ಗ್ರಾಮದಂತಹ ಘಟನೆಗಳು ಲೀಲಾಜಾಲವಾಗಿ ನಡೆಯಲು ಪರೋಕ್ಷವಾಗಿ ಸರಕಾರವೇ ಅನುಮತಿ ನೀಡಿದಂತಾಗುತ್ತದೆ ಎಂದು ಮೇಲ್ಮನೆ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದರು.
ಶನಿವಾರ ತಾಲೂಕಿನ ಹೀರೂರ ಗ್ರಾಮದಲ್ಲಿ ಗಣರಾಜ್ಯೋತ್ಸವ ದಿನದಂದು ಪ್ರಭಾತಪೇರಿ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಯೆಯ ನಂತರ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕರ್ನಾಟಕವನ್ನು ಇನ್ನೊಂದು ಕಾಶ್ಮೀರ ಮಾಡಲು ಹೊರಟಿರುವ ಕೋಮುವಾದಿಗಳನ್ನು ಹತ್ತಿಕ್ಕುವಲ್ಲಿ ರಾಜ್ಯದ ಜೆಡಿಎಸ್-ಕಾಂಗ್ರೇಸ್ ನೇತೃತ್ವದ ಸರಕಾರ ವಿಫಲವಾಗಿದೆ. ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆಯಾದಾಗಲೂ ಸ್ವಾಭಿಮಾನವಿಲ್ಲದವರಂತೆ ನಡೆದುಕೊಳ್ಳುತ್ತಿರುವ ನಾಯಕರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ದೇಶ ನಿರ್ಮಾಣಕ್ಕೆ ಯುವಕರನ್ನು ಸಿದ್ಧ ಮಾಡುವ ಬದಲು ಇಂಥ ಘಟನೆಗಳು ರಾಷ್ಟ್ರ ವಿರೋಧಿ ನೀತಿಗೆ ಬೆಂಬಲಿಸಿದಂತಾಗುತ್ತದೆ ಎಂದರು.
ಫೆ 6 ರಂದು ನಡೆಯುವ ಅಧಿವೇಶನದಲ್ಲಿ ಈ ಘಟನೆಯನ್ನು ಪ್ರಮುಖ ವಿಷಯವಾಗಿ ಚರ್ಚಿಸಲಾಗುತ್ತದೆ. ಈ ಘಟನೆಯಿಂದಾಗಿ ಗ್ರಾಮಸ್ಥರು, ಶಾಲಾ ಮಕ್ಕಳು ಭಯಗೊಂಡಿದ್ದಾರೆ. ದುಶ್ಕøತ್ಯ ಎಸಗಿದವರ ಮೇಲೆ ಕ್ರಮ ಜರುಗಿಸುವ ವಿಷಯದಲ್ಲಿ ಅಧಿಕಾರಿಗಳು ಆಡಳಿತ ಪಕ್ಷದ ನಾಯಕರ ಕಿವಿ ಮಾತು ಕೇಳಿ ಸುಮ್ಮನಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಬಂದು ಧ್ವಜಾರೋಹಣ ಮಾಡಿ ಮರೆಯಾದರೆ ಸಾಲದು. ಹಾವೇರಿ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು. ಹೀರೂರು ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷ ನೀಡುವವರೆಗೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಮಾತನಾಡಿ, ರಾಷ್ಟ್ರದ್ರೋಹಿಗಳನ್ನು ಸಂರಕ್ಷಿಸಲು ಹೊರಟಿರುವ ಈ ಸರಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಾಜದ್ರೋಹ ಎಸಗುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಕೈ ಮಾಡಿ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದವರ ಮೇಲೆ ಕಟ್ಟನಿಟ್ಟಿನ ಕ್ರಮ ಜರುಗಿಸದೇ ಇರುವುದು ಒಂದು ರಾಷ್ಟ್ರದ್ರೋಹವೇ ಆಗಿದೆ ಎಂದ ಅವರು, ಸೌಹಾರ್ಧತೆಯನ್ನು ದೌರ್ಬಲ್ಯ ಎಂದು ದುರುಪಯೋಗ ಮಾಡಿಕೊಳ್ಳುವುದು ಬೇಡ. ಇದು ಮಾನವಹಕ್ಕಿನ ಉಲ್ಲಂಘನೆ. ಪ್ರಕರಣ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ ಎಂದರು.
