ಮುಂದುವರೆದ ಕಲ್ಲು ಗಣಿಗಾರಿಕೆ : ಐತಿಹಾಸಿ ಬೆಟ್ಟಗಳು ಅಳಿವಿನಂಚಿಗೆ.

ಚಳ್ಳಕೆರೆ

      ಕಳೆದ ಹಲವಾರು ವರ್ಷಗಳಿಂದ ನಾಗರೀಕರಿಗೆ ತೊಂದರೆಯನ್ನುಂಟು ಮಾಡುತ್ತಿರುವ ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ಕೂಡಲೇ ತಡೆಯಬೇಕೆಂದು ಒತ್ತಾಯಿಸಿ ವಿಠಲನಗರದ ನಾಗರೀಕರು ಕೆ.ಶಿವಕುಮಾರ್ ನೇತೃತ್ವದಲ್ಲಿ ತಹಶೀಲ್ದಾರ್‍ಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ವಿರೋಧಿ ಹೋರಾಟಗಾರ ಕೆ.ಶಿವಕುಮಾರ್, ಕಳೆದ ಹಲವಾರು ವರ್ಷಗಳಿಂದ ಚಳ್ಳಕೆರೆ ನಗರ ವ್ಯಾಪ್ತಿಯ ರಿ.ಸರ್ವೆ ನಂ. 260 ರಲ್ಲಿ ಈ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು,

        ಇದರಿಂದ ವಿಠಲನಗರದ ಸುತ್ತಮುತ್ತಲಿನ ಪ್ರದೇಶಗಳ ಮನೆಯವರು ತೊಂದರೆ ಅನುಭವಿಸುತ್ತಿದ್ದು, ಅಲ್ಲಿನ ನಿವಾಸಿ ನಾಗರೀಕರು ಸಹ ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ತಡೆಯುವಂತೆ ರಾಜ್ಯ ಶ್ರೇಷ್ಟ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ನ್ಯಾಯಾಲಯ ಸದರಿ ಬ್ಲಾಸ್ಟಿಂಗ್ ಕಾರ್ಯವನ್ನು ಮುಂದುವರೆಸದಂತೆ ಸ್ಪಷ್ಟವಾಗಿ ಸೂಚನೆ ನೀಡಿದೆ.

         ಆದರೂ ಸಹ ಇಲಾಖೆಯಿಂದ ಅನುಮತಿ ಪಡೆದ ಚಿತ್ರದುರ್ಗ ಅಬ್ದುಲ್ ಕರೀಂ ಎಂಬ ಗುತ್ತಿಗೆದಾರರು ಕೇರಳದ ಖಾದರ್ ಮತ್ತು ಇತರೆಯವರ ಸಹಕಾರದಿಂದ ಬ್ಲಾಸ್ಟಿಂಗ್ ಕಾರ್ಯವನ್ನು ಮುಂದುವರೆಸಿದ್ದಾರೆ. ವಾರಕ್ಕೆ ಮೂರ್ನಾಲ್ಕು ಬಾರಿ ಸಂಜೆ ವೇಳೆಯಲ್ಲಿ ಬ್ಲಾಸ್ಟಿಂಗ್ ಮಾಡುವುದರಿಂದ ಹಲವಾರು ಮನೆಗಳು ಬಿರುಕು ಬಿಟ್ಟಿವೆ. ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ಅಂತರ್ಜಲ ಕುಸಿದು ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಸಹ ಉಂಟಾಗಿದೆ.

      ಬ್ಲಾಸ್ಟಿಂಗ್ ಕಾರ್ಯ ನಿಯಂತ್ರಿಸುವಂತೆ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಈ ಕಾರ್ಯ ನಿಂತಿಲ್ಲ. ನ್ಯಾಯಲಯ ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ಕಾರ್ಯವನ್ನು ನಿಲ್ಲಿಸುವಂತೆ ಸೂಚನೆ ನೀಡಿ ಆದೇಶ ಪ್ರತಿಯನ್ನು ಸಹ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಗಣಿ ಮತ್ತು ಭೂಗರ್ಭ ಇಲಾಖೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಅದ್ದರಿಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕಲ್ಲು ಗಣಿಗಾರಿಯನ್ನು ತಡೆಯಬೇಕೆಂದು ಅವರು ಒತ್ತಾಯಿಸಿದರು.

ವಿಶೇಷ 

       ಕಲ್ಲು ಗಣಿಗಾರಿಕೆ ಪ್ರದೇಶದ ಕೆಲವೇ ಮೀಟರ್‍ಗಳ ಅಂತರದಲ್ಲಿ ಮ್ಯಾಸಬೇಡ ಸಮುದಾಯದ ಶಕ್ತಿ ದೇವತೆಗಳು ನೆಲೆಸಿದ್ದು, ಸದರಿ ದೇವಾಲಯಗಳಲ್ಲಿ ಆಗಾಗ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿದ್ದು, ನೂರಾರು ಭಕ್ತರು ಆಗಮಿಸಿ ದೇವರ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ಧಾರೆ.

        ಆದರೆ, ಬ್ಲಾಸ್ಟಿಂಗ್‍ನಿಂದಾಗಿ ದೇವಾಲಯಗಳು ಸಹ ಅಪಾಯದ ಸ್ಥಿತಿ ತಲುಪಿದ್ದು ಆ ಭಾಗದ ಮ್ಯಾಸಬೇಡ ಸಮುದಾಯ ಆಕ್ರೋಶ ವ್ಯಕ್ತ ಪಡಿಸಿದ್ದು, ಶೀಘ್ರದಲ್ಲೇ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಸದರಿ ಕಲ್ಲು ಗಣಿಗಾರಿಕೆ ನಡೆಯುವ ಗುಡ್ಡದ ಹಿಂಭಾಗದಲ್ಲಿ ಗುಹೆ ಇದ್ದು, ಇದು ಪ್ರಾಚೀನ ಕಾಲದ ಇತಿಹಾಸ ಹೊಂದಿದೆ. ಈ ಹಿಂದೆ ರಾಜ, ಮಹಾರಾಜರು ತಮ್ಮ ಗುಪ್ತ ಚಟುವಟಿಕೆಗಳಿಗಾಗಿ ಈ ಗುಹೆಯನ್ನು ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಇಂತಹ ಮಹತ್ವಪೂರ್ಣವಾದ ಐತಿಹಾಸ ಸಂಗತಿಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಕೆ ಸರ್ಕಾರ ಅವಕಾಶ ನೀಡಿದ್ದನ್ನು ಇಲ್ಲಿನ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

        ರಿ.ಸರ್ವೆ ನಂ. 260ರ ವ್ಯಾಪ್ತಿಯ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳವು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿದ್ದು, ಬ್ಲಾಸ್ಟಿಂಗ್‍ನಿಂದ ಅರಣ್ಯ ಹಲವಾರು ಪ್ರಾಣ, ಪಕ್ಷಿಗಳಿಗೂ ಸಹ ತೊಂದರೆ ಉಂಟಾಗುತ್ತಿದೆ. ಸುತ್ತಮುತ್ತಲ ಹಲವಾರು ಕೃಷಿ ಭೂಮಿಯಲ್ಲಿ ವಿಷಕಾರ ಅಂಶದಿಂದ ಯಾವುದೇ ಬೆಳೆಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ಬ್ಲಾಸ್ಟಿಂಗ್ ಪರಿಣಾಮವಾಗಿ ಕಳೆದ 2016ರ ಮತ್ತು 2017ರಲ್ಲಿ ಕಾಡಿನಲ್ಲಿದ್ದ ಚಿರತೆ ನಗರದ ಹೊರವಲಯದಲ್ಲಿ ಪ್ರತ್ಯಕ್ಷವಾಗಿತ್ತು. ನನ್ನಿವಾಳ ಗುಡ್ಡದಲ್ಲೂ ಸಹ ಕೆಲವು ದಿನಗಳ ಕಾಲ ತಂಗಿದ್ದು ಜನರ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಪರಿಪಾಲಿಸುವ ದೃಷ್ಠಿಯಿಂದ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

         ಮನವಿ ಸ್ವೀಕಸಿದ ಮಾತನಾಡಿದ ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಕಲ್ಲು ಗಣಿಗಾರಿಕೆ ನಿಯಂತ್ರಣ ಕುರಿತು ನ್ಯಾಯಾಲಯ ಆದೇಶವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಬಿ.ಟಿ.ತಿಪ್ಪೇಸ್ವಾಮಿ, ಕೆ.ಸಿ.ಕುಮಾರ್, ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link