ಹರಪನಹಳ್ಳಿ:

ಎರಡನೇ ಬಾರಿಗೆ ನಡೆದ ಸ್ಥಳೀಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯ ಸಭೆ ಕೊರಂ ಕೊರತೆಯಿಂದ ವಿಫಲಗೊಂಡಿದೆ. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಕಾಶ ಹುಣಸಿಹಳ್ಳಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಗೆ ಒಟ್ಟು 26 ಸದಸ್ಯರಲ್ಲಿ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು.
ಅಧ್ಯಕ್ಷೆ ಅನ್ನಪೂರ್ಣಮ್ಮ ಹಾಗೂ ಉಪಾಧ್ಯಕ್ಷ ಮಂಜ್ಯಾನಾಯ್ಕ ಅವರಿಗೆ ಐದು ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಅವಿಶ್ವಾಸ ಪರ 17 ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು. ಆದರೆ ಅವಿಶ್ವಾಸಕ್ಕೆ ಒಂದು ಸ್ಥಾನದ ಕೊರತೆ ಉಂಟಾಗಿದ್ದರಿಂದ ಕಾರ್ಯನಿರ್ವಹಣಾಧಿಕಾರಿ ಮಮತಾ ಹೊಸಗೌಡರ ಅವರು `ಅವಿಶ್ವಾಸ ಗೊತ್ತುವಳಿಗೆ ಕೊರಂ ಕೊರತೆ ಉಂಟಾಗಿ ಸಭೆ ವಿಫಲಗೊಂಡಿದೆ ಎಂದು ಘೋಷಿಸಿದರು.
ಸಭಾಧ್ಯಕ್ಷ ಹುಣಸಿಹಳ್ಳಿ ಪ್ರಕಾಶ, `ಸಭಾಧ್ಯಕ್ಷರ ನಿರ್ಣಯವೇ ಇಲ್ಲಿ ಅಂತಿಮ. ಇಒ ಅವರು ಸದಸ್ಯರ ಹಾಗೂ ಸಭಾಧ್ಯಕ್ಷರ ಅಭಿಪ್ರಾಯ ಕೇಳದೆ ಹಾಗೆಯೇ ತೆರಳಿದ್ದಾರೆ. ಹಾಜರಿರುವ ಸಂಖ್ಯೆಗೆ ಅನುಗುಣವಾಗಿ ಮೂರನೇ ಎರಡು ಭಾಗದಷ್ಟು ಸದಸ್ಯರಿದ್ದಾರೆ. ಸಭಾಧ್ಯಕ್ಷರ ವಿವೇಚನಾ ನಿರ್ಣಯದ ಮೇರೆಗೆ ಅವಿಶ್ವಾಸ ಸಫಲವಾಗಿದೆ’ ಎಂದು ಅವರು ಘೋಷಿಸಿದರು.
ಅವಿಶ್ವಾಸದ ಪರ ಸದಸ್ಯರು ಸಭಾಂಗಣ ಬಿಟ್ಟು ತೆರಳದೇ ಅಲ್ಲಿಯೇ ಹಾಜರಿದ್ದು, ನ್ಯಾಯ ಒದಗಿಸಬೇಕು ಎಂದು ಪಟ್ಟು ಹಿಡಿದರು. ಮತ್ತೆ ಸಭೆಗೆ ಮರಳಿದ ಇಒ ಮಮತಾ ಅವರು, `ಪಂಚಾಯತ್ ರಾಜ್ಯ ಅಧಿನಿಯಮ 140 ಸಬ್ ಸೆಕ್ಸನ್ 3ರ ಪ್ರಕಾರ ಒಟ್ಟು ಚುನಾಯಿತಿ ಸದಸ್ಯರಲ್ಲಿ ಮೂರನೇ ಎರಡು ಭಾಗದಷ್ಟು ಸದಸ್ಯರ ಬಹುಮತವಿದ್ದರೆ ಸಭೆ ಸಫಲವಾಗಿದೆ ಎಂದು ಘೋಷಿಸಲಾಗುತ್ತದೆ. ಆದರೆ ಬಹುಮತಕ್ಕೆ ಬೇಕಾದ 18 ಸದಸ್ಯರ ಬದಲಾಗಿ 17 ಸದಸ್ಯರು ಹಾಜರಿದ್ದರಿಂದ ಈ ಸಭೆ ವಿಫಲವಾಗಿದೆ. ಕಾನೂನು ಪ್ರಕಾರ ನನ್ನ ಕೆಲಸ ಮಾಡಿದ್ದೇನೆ’ ಎಂದು ತಿಳಿಸಿದರು.
ಪಟ್ಟು ಬಿಡದ ಸದಸ್ಯರು: ಇಒ ಅವರ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಅವಿಶ್ವಾಸದ ಪರ ಸದಸ್ಯರು, ಹಾಜರಿರುವ ಸಂಖ್ಯೆಯ ಮೂರನೇ ಎರಡು ಭಾಗಕ್ಕೆ ಬಹುಮತ ನೀಡಬೇಕು. ಸಭಾಧ್ಯಕ್ಷ ವಿವೇಚನೆಗೆ ಈ ನಿರ್ಣಯ ಬಿಡದೇ ಇಒ ಏಕಪಕ್ಷೀಯ ಪರ ನಿರ್ಣಯ ಘೋಷಿಸಿದ್ದಾರೆ. ಇದು ಪ್ರಜಾತಂತ್ರಕ್ಕೆ ಮಾಡಿದ ಮೋಸ ಎಂದು ಆರೋಪದ ಸುರಿಮಳೆ ಸುರಿಸಿದರು.
ಸಭೆಗೆ ಬಾರದ ಸದಸ್ಯರು: ರಾಗಿಮಸಲಾವಾಡ ಕ್ಷೇತ್ರದ ಮಾನಿಬಾಯಿ ಹಾಗೂ ತೆಲಗಿ ಕ್ಷೇತ್ರದ ಜಿ.ಮಂಜುಳಾ ಅವರು ಸಭೆಗೆ ಗೈರು ಹಾಜರಾಗಿದ್ದು, ಅವಿಶ್ವಾಸ ಗೊತ್ತುವಳಿ ವಿಫಲವಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಸಿಇಒ ಅವರಿಂದ ಪಾಠ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಆಗಮಿಸಿದ್ದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್ ಅವರ ಬಳಿ ಸದಸ್ಯರು `ಅವಿಶ್ವಾಸ ನಿರ್ಣಯ ನಮಗೆ ತೃಪ್ತಿ ತಂದಿಲ್ಲ’ ಎಂದು ತಿಳಿಸಿದರು. ಸದಸ್ಯರ ಅಹವಾಲು ಆಲಿಸಿದ ಸಿಇಒ ಅವರು, `ಅಗತ್ಯವಾಗಿದ್ದ ಕೊರಂ ಕೊರತೆ ಉಂಟಾಗಿದೆ. ಈ ಬಗ್ಗೆ ಕಾನೂನುನಾತ್ಮ ಹೋರಾಟಕ್ಕೆ ಮುಂದಾದರೂ ಪ್ರಯೋಜನವಿಲ್ಲ. ಎಲ್ಲವೂ ಕಾನೂನು ಪ್ರಕಾರವೇ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
`ಆಗ ಸದಸ್ಯರು `ಸಭಾಧ್ಯಕ್ಷರ ಹಾಗೂ ಸದಸ್ಯರ ಒಪ್ಪಿಗೆ ಪಡೆಯದೇ ನಡಾವಳಿಗೆ ಸಹಿ ಮಾಡಿಸದೇ ಇಒ ಅವರು ಬುಕ್ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಜನಪ್ರತಿನಿಧಿಗಳಿಗೆ ಅಗೌರವ ತೋರಿದ್ದಾರೆ ಎಂದು ದೂರಿದರು. ಸಿಇಒ ಅವರು, ಸಭೆ ನಡಾವಳಿಗೆ ಸಭಾಧ್ಯಕ್ಷರು ಸಹಿ ಮಾಡಲೇಬೇಕು. ಇಲ್ಲವಾದಲ್ಲಿ ಅವರ ಸದಸ್ಯತ್ವ ಸ್ಥಾನಕ್ಕೆ ತೊಂದರೆ ಆಗುತ್ತದೆ. ಸಭಾಧ್ಯಕ್ಷರಾದವರು ಪಕ್ಷ ಬೇಧ ಮರೆತು ನಿರ್ಣಯ ತೆಗೆದುಕೊಳ್ಳಬೇಕು’ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
