ಮನ್ನಣೆ ಸಿಗದೆ ನಶಿಸುತ್ತಿರುವ ಗಮಕ ವಾಚನ

0
25

ದಾವಣಗೆರೆ:

     ಪ್ರಸ್ತುತ ಮನ್ನಣೆ ಸಿಗದೇ ಗಮಕ ವಾಚನ ನಶಿಸುವ ಹಂತ ತಲುಪಿದೆ ಎಂದು ಹರಿಹರದ ಎಂಕೆಇಟಿಎಲ್‍ಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎನ್.ಸುಜಾತ ಕಳವಳ ವ್ಯಕ್ತಪಡಿಸಿದರು.

     ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ “ಪದವಿ ಪಠ್ಯಾಧಾರಿತ ಗಮಕ ವಾಚನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ಕವಿಯ ಜೀವಾಳವೇ ಗಮಕವಾಗಿದ್ದು, ಕವಿಯ ಮನದಾಳದಲ್ಲಿರುವ ವಿಚಾರಗಳು ಸ್ವಾರಸ್ಯವಾಗಿ ಅಕ್ಷರ ರೂಪದಲ್ಲಿ ಮೂಡಿದಾಗ ಅದನ್ನು ಲಯ ಬದ್ಧವಾಗಿ ರಾಗ ಸಂಯೋಜಿಸಿ ಹಾಡುವ ಮೂಲಕ ಕೇಳುಗರಿಗೆ ಸರಳವಾಗಿ ಅರ್ಥವಾಗುವಂತೆ ಮಾಡಲು ಗಮಕ ಸಹಕಾರಿಯಾಗಿದೆ ಎಂದರು.

     ಗಮಕದಲ್ಲಿ ಸಂಗೀತ ಮತ್ತು ಸಾಹಿತ್ಯಕ್ಕೆ ಸಮಾನ ಅವಕಾಶಗಳಿವೆ. ಕವಿಯ ಕಾವ್ಯವನ್ನು ಲಯಬದ್ಧವಾಗಿ, ಅರ್ಥಪೂರ್ಣವಾಗಿ ಹಿತಮಿತವಾಗಿ ರಾಗ ಸಂಯೋಜನೆ ಮೂಲಕ ಪ್ರಸ್ತುತ ಪಡಿಸುವಲ್ಲಿ ಗಮಕ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎ.ಡಿ.ಬಸಪ್ಪ ಮಾತನಾಡಿ, ಪ್ರಸ್ತುತ ತಲೆಮಾರಿನ ಯುವ ಪೀಳಿಗೆಗೆ ಸಾರ್ವಕಾಲಿಕ ಚಿಂತನೆ ಹಾಗೂ ಜೀವನ ಮೌಲ್ಯಗಳು ಇರುವ ಹಳೆಗನ್ನಡ ಪರಿಚಯಿಸಿಕೊಡಬೇಕಾದ ಅವಶ್ಯಕತೆ ಇದೆ. ಇಂಥಹ ಕೆಲಸಗಳನು ನಡೆದರೆ, ಹಳೆಗನ್ನಡ ಹಾಗೂ ನಡುಗನ್ನಡದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯವನ್ನು ಹೋಗಲಾಡಿಸಲು ಸಾಧ್ಯವಾಗಲಿದೆ ಎಂದರು.

     ಕಾವ್ಯವನ್ನು ರಾಗವಾಗಿ, ಅರ್ಥಪೂರ್ಣವಾಗಿ ವಾಚನ ಮಾಡುವ ವಿಧಾನವೇ ಗಮಕಗಳ ಕೆಲಸವಾಗಿದೆ. ಅಂಥಹ ಗಮಕಗಳನ್ನು ಓದಿನೊಟ್ಟಿಗೆ ಹಾಡುವ ಮೂಲಕ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಗಮಕ ಸಾಹಿತ್ಯದ ಸಿದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

     ಕಾಲೇಜಿನ ಪ್ರಾಂಶುಪಾಲ . ಪಿ.ಎಸ್. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್.ವಿ. ಜಗನ್ನಾಥ್‍ರಾವ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here