ಕುಣಿಗಲ್
ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಡಿ.ಕೆ.ಸಹೋದರರು ಇದ್ದಾರೆ. ಇವರ ದಬ್ಬಾಳಿಕೆ, ಭ್ರಷ್ಟಾಚಾರದ ವಿರುದ್ದವೇ ನಾನು ಹೋರಾಟ ಮಾಡುತ್ತ ಬಂದಿದ್ದೇನೆ. ಕ್ಷೇತ್ರದಿಂದ ಒಂದು ಸಾರಿ ಗೆಲ್ಲಿಸಿ ಎಂದವರು ಇದೀಗ ಸಂಬಂಧಿಯನ್ನು ಶಾಸಕರನ್ನಾಗಿ ಮಾಡಿದ್ದಾರೆ. ಕುಣಿಗಲ್ ಕ್ಷೇತ್ರದ ಜನತೆಗೆ ಸ್ವಾಭಿಮಾನ ಇದ್ದರೆ, ಈ ಬಾರಿ ಡಿಕೆಶಿ ಸಹೋದರನ್ನು ತಿರಸ್ಕರಿಸಿ, ತಕ್ಕ ಪಾಠಕಲಿಸಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಪಕ್ಷದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಅವರು ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡುತ್ತ, ಇಂದು ದೇಶದಾದ್ಯಂತ ಮೋದಿಯ ಅಲೆ ಎದ್ದಿದೆ. ಇಲ್ಲಿ ನಾನು ಮುಖ್ಯವಲ್ಲ, ಮೋದಿಯನ್ನು ಜನ ಬಯಸಿದ್ದಾರೆ. ಅದಕ್ಕಾಗಿ ತಮ್ಮ ಬೂತ್ ಮಟ್ಟದಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಮತಗಳನ್ನು ಹಾಕಿಸುವ ಮೂಲಕ ಯಾರೇ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದರೂ ಚಿಂತಿಸದೇ ಬಿಜೆಪಿಗೆ ಮತ ಹಾಕಿಸಿ, ಮತ್ತೊಮ್ಮೆ ಅಂತಾರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸಿರುವ ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಎಂದು ಕರೆನೀಡಿದರು.
ಈ ಕ್ಷೇತ್ರದಲ್ಲಿ ಬರೀ ಸಂಸದರ ಸ್ಥಾನಕ್ಕಾಗಿ ಬಂದವರು ಕುಣಿಗಲ್ ಕ್ಷೇತ್ರಕ್ಕೆ ದುಡಿಯುತ್ತಿದ್ದ ಹಿರಿಯ ರಾಜಕಾರಣಿಗಳನ್ನು ಕಡೆಗಣಿಸಿ ಶಾಸಕರ ಸ್ಥಾನಕ್ಕೆ ಅವರ ಸಂಬಂಧಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿ, ಈ ಕ್ಷೇತ್ರವನ್ನು ಡಿಕೆಶಿ ಸಹೋದರರು ತಮ್ಮ ಹಿಡಿತದಲ್ಲಿಟ್ಟುಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ಇದೀಗ ಇಲ್ಲಿಯೂ 160 ಜನರನ್ನು ಪೊಲೀಸರು ರೌಡಿಲಿಸ್ಟ್ ಸೇರಿಸುವಂತೆ ಮಾಡಿದ್ದಾರೆ. ಮೊನ್ನೆ ಡಿ.ನಾಗರಾಜಯ್ಯ ನವರ ಬಳಿ ಬಂದು ಬೆಂಬಲಿಸುವಂತೆ ಕೇಳಿದಾಗ ಅವರು ತಕ್ಕ ಉತ್ತರವನ್ನೇ ಕೊಟ್ಟು ಕಳಿಸಿದ್ದಾರೆ ಎಂದ ಅವರು, ಡಿಕೆಶಿ ಅವರ ಆಚಾರ ವಿಚಾರ ದಬ್ಬಾಳಿಕೆಯಿಂದ ಬೇಸತ್ತಿರುವ ಚನ್ನಪಟ್ಟಣ, ಮಾಗಡಿ, ಕುಣಿಗಲ್ ಕ್ಷೇತ್ರಗಳು ಸೇರಿದಂತೆ 8 ಕಡೆಗಳಲ್ಲಿ ತಕ್ಕ ಪಾಠ ಕಲಿಸಲು ಜನತೆ ತೀರ್ಮಾನಿಸಿದ್ದಾರೆ ಎಂದರು.
ಈ ವಿಚಾರ ತಿಳಿದಿರುವ ಅವರಲ್ಲಿ ನಡುಕ ಉಂಟಾಗಿದ್ದು, ಇದೀಗ ರಾಹುಲ್ ಗಾಂಧಿಯನ್ನು ಕ್ಷೇತ್ರಕ್ಕೆ ತರುವ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ನರೇಂದ್ರ ಮೋದಿಯವರ ಸರಳತನ ಮತ್ತು ದೇಶದ ಬಗ್ಗೆ ಇರುವ ಭಕ್ತಿ ಹಾಗೂ ಅವರ ಸಹೋದರರು ಇಂದಿಗೂ ಕೂಲಿ ಮಾಡಿ ದುಡಿದು ತಿನ್ನುವ ಮಧ್ಯಮವರ್ಗದಲ್ಲಿದ್ದಾರೆ ಎಂಬುದನ್ನು ಜನ ಮೆಚ್ಚಿ ಮತ ನೀಡಿದರೆ ಇಂತಹ ಉತ್ತಮರಿಗೆ ಎಂದು ತೀರ್ಮಾನಿಸಿರುವುದರಿಂದ ಬಿಜೆಪಿ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಸರ್ಕಾರದವರು ಚುನಾವಣೆಯಲ್ಲಿ ಮೋದಿ ಅವರನ್ನು ಕಟ್ಟಿ ಹಾಕಲು ಒಂದಾಗಿ ಮೈತ್ರಿ ಧರ್ಮ ಪಾಲಿಸದೆ, ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಳ್ಳುತ್ತಿದ್ದಾರೆ. ಜೆಡಿಎಸ್ ಗೆ 8 ಸೀಟು ಬಿಟ್ಟು ಕೊಡುತ್ತೇವೆ ಎಂದವರು, ಇದೀಗ ಮಂಡ್ಯ, ತುಮಕೂರು, ಬೆಂಗಳೂರು ಏನಾಯ್ತು ನೋಡಿ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ವೃಥಾ ಸುಳ್ಳು ಆರೋಪ ಮಾಡುತ್ತಿರುವುದು ಜನರಿಗೆ ತಿಳಿದಿದೆ.
ನರೇಂದ್ರ ಮೋದಿಜಿ ಅವರ ಸಾಧನೆಯನ್ನ ಇಡೀ ವಿಶ್ವವೇ ವ್ಮೆಚ್ಚಿದೆ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ವಯಸ್ಸಾದವರು, ಯುವ ಸಮೂಹ ಮೋದಿ ಮೋದಿ ಎನ್ನುತ್ತಿದೆ. ಇಂತಹ ಜನನಾಯಕರನ್ನ ಬಿಟ್ಟು ಜನರಿಂದ ಪಪ್ಪು ಎಂದು ಕರೆಸಿಕೊಳ್ಳುವ ರಾಹುಲ್ ಗಾಂಧಿ ಬಣ ಕೇವಲ 60 ಸೀಟ್ ಪಡೆದರೆ ಬಿಜೆಪಿ 360 ಪಡೆಯಲಿದೆ ಎಂದು ಈಗಾಗಲೇ ಸಮೀಕ್ಷೆಗಳು ಹೇಳುತ್ತಿವೆ. ಈ ಲೋಕ ಸಭಾ ಚುನಾವಣೆ ಆಗುತ್ತಿದ್ದಂತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ನೂರಕ್ಕೆ ನೂರು ಭಾಗ ಬಿದ್ದು ಹೋಗಲಿದ್ದು, ಯಡಿಯೂರಪ್ಪನವರ ಸರ್ಕಾರ ಬರಲಿದೆ ಎಂದರು.
ತಾಲ್ಲೂಕು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಹಿಂದೆ ರಾಜ್ಯದಲ್ಲಿ 10% ಸರ್ಕಾರ ಇತ್ತು ಎನ್ನುತ್ತಿದ್ದರು. ಆದರೆ ಇದೀಗ ಕುಣಿಗಲ್ ತಾಲ್ಲೂಕಿನಲ್ಲಿ 10% ಆಡಳಿತ ಇದೆ. ನೀರಿನ ರಾಜಕಾರಣವನ್ನು ಮಾಡಲು ಬಂದಿದ್ದು, ವೈಕೆಆರ್ ಸೇವೆಯನ್ನೇ ಮರೆತು ಬಿಟ್ಟಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಒಂದಾದರೆ ಅದನ್ನೇ ಸಹೋದರರು ಒಂದಾದರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಅಯ್ಯೋ ನಾವೇನು ಶತ್ರುಗಳಲ್ಲ, ನಾವೂ ಅಣ್ಣತಮ್ಮಂದಿರೆ. ಇಂದು ತುಮಕೂರು ಜಿಲ್ಲೆಯಲ್ಲಿ ಸಂಸದರ ಸ್ಥಾನಕ್ಕೆ ಮುದ್ದಹನುಮೇಗೌಡರಿಗೆ ಟಿಕೆಟ್ ಕೈತಪ್ಪಲು ಇದೇ ಡಿಕೆಶಿ ಸಹೋದರರೇ ಕಾರಣ, ದೇವೇಗೌಡರಲ್ಲ. ಈ ಬಾರಿ ಚುನಾವಣೆಯಲ್ಲಿ ಮೈ ಮರೆತು ಮಲಗದೇ ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಿ ತಮ್ಮ ಕೆಲಸವನ್ನ ತಾವು ಮಾಡಿದರೆ ಸಂಸದರು, ಪ್ರಧಾನಿಗಳು ಅವರ ಕೆಲಸವನ್ನ ಅವರು ಸರಿಯಾಗಿ ಮಾಡುತ್ತಾರೆ. ಮೊದಲು ನಮ್ಮ ಶಕ್ತಿಯನ್ನ ಪ್ರಧಾನಿಗಳಿಗೆ ತುಂಬಲು ಮುಂದಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ರುದ್ರೇಶ್, ಮುನಿರಾಜು, ಮಾತನಾಡಿದರು. ಚಿಕ್ಕರಾಮಯ್ಯ, ಎ.ಸಂತೋಷ್, ಕೆ.ಎಸ್.ಬಲರಾಮ್, ದಿನೇಶ್, ನಂದಿನಿಸುರೇಶ್, ಕೃಷ್ಣ, ಕೋಟೆಗೋಪಿ, ರೂಪ, ವಿಜಯಮ್ಮ, ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
