ಕರ್ತವ್ಯ ನಿರ್ವಹಿಸುವಾಗ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು : ರಮೇಶ್‍ಕುಮಾರ್

ಬೆಂಗಳೂರು

     ಚುನಾಯಿತ ಜನಪ್ರತಿನಿಧಿಗಳು ತಾವು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು, ಜನರ ಪ್ರಾತಿನಿಧ್ಯವೇ ಅತಿ ಮುಖ್ಯ ಎಂದು ವಿಧಾನ ಸಭೆಯ ಸಭಾಧ್ಯಕ್ಷ ಕೆ. ಆರ್. ರಮೇಶ್‍ಕುಮಾರ್ ಅವರು ತಿಳಿಸಿದರು.

      ವಿಕಾಸ ಸೌಧದಲ್ಲಿಂದು ಏರ್ಪಡಿಸಿದ್ದ ವಿಧಾನ ಸಭೆ, ವಿಧಾನ ಪರಿಷತ್ತಿಗೆ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಆಯೋಜಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನ ಮಂಡಲದ ಕಾರ್ಯಕಲಾಪಗಳು, ಜವಾಬ್ದಾರಿಗಳು ಹಾಗೂ ಹಕ್ಕು ಬಾದ್ಯತೆಗಳ ಅರಿವು ಮೂಡಿಸಲು ಈ ಶಿಬಿರವನ್ನು ಏರ್ಪಡಿಸಲಾಗಿದ್ದು ಪ್ರಥಮ ಬಾರಿಗೆ ಆಯ್ಕೆಯಾಗಿರುವ ಶಾಸಕರು ಇದರ ಸದ್ಬಳಕೆ ಮಾಡಿಕೊಂಡು ವಿಧಾನ ಸಭಾ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

       ಬಯಸಿದವರೆಲ್ಲ ವಿಧಾನ ಸಭೆ, ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬರಲು ಸಾಧ್ಯವಿಲ್ಲ. ರಾಜ್ಯದ ಆರು ಕೋಟಿ ಜನರ ಪೈಕಿ ಕೇವಲ 224 ಜನ ಮಾತ್ರ ಶಾಸನ ಸಭೆಗೆ ಆಯ್ಕೆಯಾಗಲಿದ್ದಾರೆ. ಹಾಗಾಗಿ ನೀವು ಪುಣ್ಯವಂತರು ಈ ಅವಕಾಶವನ್ನು ಬಳಸಿಕೊಂಡು ಸಮಸ್ಯೆಯಲ್ಲಿರುವ ಜನರಿಗೆ ಒಳಿತು ಮಾಡುವಲ್ಲಿ ನಿಮ್ಮ ಗಮನ ಸದಾ ಇರಲಿ ಎಂದರು.

        ವಿಧಾನ ಸಭೆ ಅಧಿವೇಶನ ಹಾಗೂ ವಿಧಾನ ಮಂಡಲ ಸಮಿತಿಗಳ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಮಾತನಾಡಿದ ಅವರು, ವಿಧಾನ ಸಭೆ ಅಧಿವೇಶನಕ್ಕೆ ಬರುವ ಮುನ್ನ ಪೂರ್ವ ಸಿದ್ದತೆ ಮಾಡಿಕೊಂಡು ಬಂದು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿರಿ ಎಂದು ಸೂಚಿಸಿದರು.

       ಪ್ರತಿ ಹಂತದಲ್ಲೂ ನಾವು ಜನರನ್ನು ಪ್ರತಿನಿಧಿಸಬೇಕು. ಜನರ ನೋವು ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರಿಗೂ ಸರ್ವಾಧಿಕಾರ ಮನೋಭಾವ ಬರಬಾರದು. ಆದರೆ ಇತ್ತೀಚೆಗೆ ಪ್ರಜಾಪ್ರಭುತ್ವದ ನೆರಳಿನಲ್ಲಿಯೇ ಸರ್ವಾಧಿಕಾರ ಕಂಡು ಬರುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

       ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಥಮ ಬಾರಿಗೆ ಚುನಾಯಿತರಾಗಿರುವ ಶಾಸಕರು ಸದನಗಳಲ್ಲಿ ಹೆಚ್ಚಿನ ಸಮಯ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ವಿಧಾನ ಮಂಡಲದ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ರೂಡಿಸಿಕೊಂಡು ಹೆಚ್ಚಿನ ಅಧ್ಯಯನ ಮಾಡಿದಲ್ಲಿ ವಿಧಾನ ಮಂಡಲದಲ್ಲಿ ಪಾಲ್ಗೊಳ್ಳಿವಿಕೆ ಬಗ್ಗೆ ಅರಿವು ಮೂಡುತ್ತದೆ ಎಂದರು. ಸಭೆಯಲ್ಲಿ ಅರಣ್ಯ ಸಚಿವ ಶಂಕರ್ ಸೇರಿದಂತೆ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link