ಚಿತ್ರದುರ್ಗ:
ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿ ಗ್ರಾಮಗಳಿಗೆ ಸೇರಿದ ರುದ್ರಭೂಮಿ(ಸ್ಮಶಾನ)ದ ಜಾಗವನ್ನು ಉಳುಮೆ ಮಾಡುವ ಮೂಲಕ ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರಿಂದ ತೆರವುಗೊಳಿಸುವಂತೆ ಆಗ್ರಹಿಸಿ ಸದರಿ ಗ್ರಾಮಸ್ಥರು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ತಾಲೂಕು ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿ ಗ್ರಾಮಗಳಲ್ಲಿ ನೂರಾರು ವರ್ಷಗಳಿಂದಲೂ ಲಂಬಾಣಿ ಜನಾಂಗದವರು ವಾಸಿಸುತ್ತಿದ್ದು, ಯಾರಾದರೂ ಸಾವನ್ನಪ್ಪಿದಾಗ ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದಂತಾಗಿದೆ. ಸ್ಮಶಾನ ಭೂಮಿ ರಿ.ಸ.ನಂ.44 ರಲ್ಲಿ 13.28 ಎಕರೆ ಸರ್ಕಾರಿ ಗೋಮಾಳವಿದ್ದು, ಅದರಲ್ಲಿ 3.20 ಎಕರೆಯಷ್ಟು ಭೂಮಿಯನ್ನು ಸ್ಮಶಾನವನ್ನಾಗಿ ಪರಿವರ್ತಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದಲೂ ಸ್ಮಶಾನದ ಸುತ್ತಮುತ್ತಲಿನ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿರುವುದರಿಂದ ವೀರದಿಮ್ಮನಹಳ್ಳಿ ಹಾಗೂ ರಾಂಜಿಹಟ್ಟಿ ಗ್ರಾಮಗಳ ಲಂಬಾಣಿ ಜನಾಂಗದವರಿಗೆ ಅಂತ್ಯಸಂಸ್ಕಾರಕ್ಕೆ ಜಾಗವೇ ಇಲ್ಲದಂತಾಗಿದೆ. ಆದ್ದರಿಂದ ಸದರಿ ಗೋಮಾಳ ಜಮೀನಿನಲ್ಲಿ ನೀಡಲಾಗಿರುವ ಸ್ಮಶಾನ ಭೂಮಿಯನ್ನು ಸರ್ವೆ ಮಾಡಿಸಿ 3.20 ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಿ ಬಿಗಿ ಬಂದೋಬಸ್ತ್ ಮಾಡಿಕೊಡಬೇಕಾಗಿದೆ ಜಿಲ್ಲಾಡಳಿತವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ಭೂಹಕ್ಕುದಾರರ ವೇದಿಕೆ ಸಂಚಾಲಕ ಕೆ.ಬಿ.ರೂಪನಾಯ್ಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿಯ ನಿವೇಶನ ರಹಿತರಿಗೆ ಗೋಮಾಳ ಜಮೀನಿನಲ್ಲಿ ನಿವೇಶನ ನೀಡಬೇಕು
ಲ್ಯಾಂಡ್ ಮಾಫಿಯಾಗಳಿಂದ ಸರ್ಕಾರಿ ಗೋಮಾಳ ಜಮೀನು ರಕ್ಷಿಸಬೇಕು. ರಿ.ಸ.ನಂ.44 ರಲ್ಲಿ ಹದಿಮೂರು ಎಕರೆ 28 ಗುಂಟೆ ಜಮೀನಿನಲ್ಲಿ ಮೂರು ಎಕರೆ ಇಪ್ಪತ್ತು ಗುಂಟೆ ಜಮೀನು ಸ್ಮಶಾನಕ್ಕಾಗಿ ಕಾಯ್ದಿರಿಸಿದ್ದು, ಉಳಿದ ಜಮೀನನ್ನು ಜಾನುವಾರುಗಳ ಮೇವಿಗಾಗಿ ಮೀಸಲಿಡಬೇಕು. ಚಿತ್ರದುರ್ಗ ಬಂಜಾರ ಭವನದ ಬಳಿಯಿರುವ ರಾಜಕಾಲುವೆಯನ್ನು ತೆರವುಗೊಳಿಸಿ ಮಳೆ ಬಂದಾಗ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಜಿಲ್ಲಾಡಳಿತವನ್ನು ಕೋರಿದರು.
ಜನಪರ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್, ಸೇವಾಲಾಲ್ ಯುವಕ ಸಂಘದ ಅಧ್ಯಕ್ಷ ಎಲ್.ಶಂಕರ್‍ನಾಯ್ಕ, ಕಾರ್ಯದರ್ಶಿ ಎನ್.ಮಹಂತೇಶ್, ಉಪಾಧ್ಯಕ್ಷ ಜಿ.ವೆಂಕಟೇಶ್‍ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್‍ನಾಯ್ಕ, ವೆಂಕಟೇಶ್‍ನಾಯ್ಕ ಕಾರಬಾರಿ, ವಿ.ಎನ್.ರಾಮನಾಯ್ಕ, ಗೋಪಿನಾಯ್ಕ, ಗೋಪಾಲನಾಯ್ಕ, ಕುಮಾರನಾಯ್ಕ, ಡ್ರೈವರ್ ರಾಮನಾಯ್ಕ, ಟೈಲರ್ ಲಚ್ಚಾನಾಯ್ಕ, ಜಗದೀಶ್ ನಾಯ್ಕ, ಲಕ್ಷ್ಮನಾಯ್ಕ ಸೇರಿದಂತೆ ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿ ಗ್ರಾಮದ ನೂರಾರು ಲಂಬಾಣಿ ಜನಾಂಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
