ನವಂಬರ್ 18 ರಂದು ವಿಶೇಷ ನೊಂದಣಿ ಅಭಿಯಾನ

ಹಾವೇರಿ

       ಕರಡು ಮತದಾರರ ಪಟ್ಟಿಯು ದಿನಾಂಕ 10-11-2018ರಂದು ಪ್ರಕಟವಾಗಿದ್ದು, 2019ನೇ ಸಾಲಿಗಾಗಿ ಮತದಾರ ಪಟ್ಟಿಗಳ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹ ಮತದಾರರು ನಮೂನೆ-6ರಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದ್ದಾರೆ.

        ದಿನಾಂಕ 01-01-2019ರಂದು 18 ವರ್ಷ ಪೂರ್ಣಗೊಳ್ಳುವ ಅರ್ಹ ನಾಗರೀಕರು ಹೆಸರು ಸೇರ್ಪಡೆಗೆ ಅರ್ಹರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ದಿ :20.11.2018 ಕೊನೆಯ ದಿನವಾಗಿದ್ದು, ನಾಗರಿಕರು ತಮ್ಮ ಹಕ್ಕಿನಿಂದ ವಂಚಿತರಾಗದಿರಲು ಸೂಚಿಸಲಾಗಿದೆ.

        ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದವರು ಸಹ ಅಲ್ಲಿನ ವಿವರಗಳನ್ನು ಪರಿಶೀಲಿಸಿಕೊಂಡು ಹೆಸರು, ಲಿಂಗ, ವಯಸ್ಸು, ವಿಳಾಸ ಸರಿಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಕೋರಿದೆ. ವಿವರಗಳು ತಪ್ಪಾಗಿದ್ದಲ್ಲಿ ನಮೂನೆ-8ನ್ನು ಭರ್ತಿ ಮಾಡಬಹುದಾಗಿದೆ. ಅದೇ ರೀತಿ ಮೃತ, ವರ್ಗಾಯಿತ ಅಥವಾ ಅನರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಸೇರಿದ್ದು ಗಮನಕ್ಕೆ ಬಂದಲ್ಲಿ ಅಂತಹ ಮತದಾರರ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ನಮೂನೆ-7ನ್ನು ಭರ್ತಿ ಮಾಡುವ ಮೂಲಕ ಸಲ್ಲಿಸಬಹುದಾಗಿದೆ.

         ನಾಗರಿಕರ ಅನುಕೂಲಕ್ಕಾಗಿ ಇದೇ ರವಿವಾರ ನವಂಬರ್ 18 ರಂದು `ವಿಶೇಷ ನೊಂದಣಿ ಅಭಿಯಾನ ದಿನ’ವನ್ನಾಗಿ ಆಚರಿಸಲಾಗುವುದು. ಅಂದು ಮತಗಟ್ಟೆ ಅಧಿಕಾರಿಗಳು ತಮಗೆ ಸಂಬಂಧಿಸಿದ ಮತಗಟ್ಟೆಗಳಲ್ಲಿ ಉಪಸ್ಥಿತರಿದ್ದು ನೊಂದಣಿ ಕಾರ್ಯದಲ್ಲಿ ಸಹಾಯ ಮಾಡಲಿದ್ದಾರೆ. ಅದೇ ರೀತಿ ತಾಲ್ಲೂಕು ಕಾರ್ಯಾಲಯದ ಚುನಾವಣಾ ಸಿಬ್ಬಂದಿಗಳು ಸಹ ಕಛೇರಿಯಲ್ಲಿ ಹಾಜರಿದ್ದು, ಮತದಾರರ ನೊಂದಣಿ ಕಾರ್ಯದಲ್ಲಿ ಸಹಕರಿಸಲಿದ್ದಾರೆ.

        ಕಾರಣ ನಾಗರೀಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿ ಮತದಾನದ ಹಕ್ಕನ್ನು ಗಳಿಸಲು ಮತ್ತು ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link