ಹುಳಿಯಾರು
ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಿಂದ ಮಣ್ಣಿಗೆ ವಿಷ ಬೆರೆಸುತ್ತಿದ್ದು ವಿಷಯುಕ್ತ ಮಣ್ಣಿನಿಂದ ಭೂಮಿ ಬರಡು ಭೂಮಿಯಾಗಿ ಕೃಷಿಯಿಂದ ವಿಮುಖರಾಗಲು ಕಾರಣವಾಗುತ್ತಿದೆ ಎಂದು ಮಣ್ಣು ತಜ್ಞ ಸಾಯಿಲ್ ವಾಸು ತಿಳಿಸಿದರು.
ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸಿದ್ದರಾಮಯ್ಯ ಅವರ ತೋಟದಲ್ಲಿ ಭಾನುವಾರ ನಡೆದ ಸ್ವಯಂ ಮಣ್ಣು ಪರೀಕ್ಷಾ ಕಾರ್ಯಾಗಾರದಲ್ಲಿ ಮಾತನಾಡಿ ರಾಸಾಯನಿಕ ಗೊಬ್ಬರ ಬಳಕೆಯನ್ನು ತಕ್ಷಣ ಕೈಬಿಟ್ಟು ಸಾವಯವಗೊಬ್ಬರ ಬಳಕೆ ಆರಂಭ ಮಾಡಿದರೆ ಮುಂದಿನ ಪೀಳಿಗೆಗೂ ಫಲವತ್ತಾದ ಭೂಮಿ ಉಳಿಸಬಹುದು. ಕೃಷಿಯಲ್ಲಿ ಸಾವಯವಗೊಬ್ಬರ ಅಳವಡಿಸುವುದರಿಂದ ಭೂಮಿಯಲ್ಲಿ ತೇವಾಂಶ ಉಳಿದು ಬರದಲ್ಲೂ ಬೆಳೆಯನ್ನು ಕಾಪಾಡಲು ಸಹಾಯವಾಗುತ್ತದೆ ಎಂದರು.ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್‍ನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಕೆಲಸಕ್ಕೆ ಬಾರದ್ದಕ್ಕೆ ಮೀಸಲಿಡುತ್ತಾರೆ.
ಆದರೆ ರೈತರ ಜೀವನ ಹಸನಾಗಿಸುವ ಮಣ್ಣಿನ ಸಂರಕ್ಷಣೆಗೆ ನಯಾ ಪೈಸೆ ಖರ್ಚು ಮಾಡುವುದಿಲ್ಲ. ಸರ್ಕಾರಗಳು ಕೆಲಸಕ್ಕೆ ಬಾರದ ಇಲಾಖೆಗಳನ್ನು ರಚನೆ ಮಾಡಿ ಮಂತ್ರಿ ನೇಮಿಸಿದ್ದಾರೆ. ಆದರೆ ಮುಖ್ಯವಾಗಿ ಜೀವನಕ್ಕೆ ಬೇಕಾದ ಮಣ್ಣಿಗೆ ಇಲಾಖೆ, ಕಾಯಿದೆ ರೂಪಿಸದಿರುವುದು ದುರಂತ ಎಂದರು.
ಯಳನಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೈ.ಆರ್.ಮಲ್ಲಿಕಾರ್ಜುನಯ್ಯ, ಲಂಚಮುಕ್ತ ಕರ್ನಾಟಕದ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ, ಕಲ್ಲೇನಹಳ್ಳಿ ನಚಿಕೇತ್, ಸಹಜ ಕೃಷಿಕ ಶಿವಕುಮಾರ್, ಸಿದ್ದಬಸಪ್ಪ ಸೇರಿದಂತೆ 100 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.