ಚಿತ್ರದುರ್ಗ:
ಬರವಣಿಗೆಗಳು ವೀರಗಲ್ಲುಗಳ ಒಂದು ಭಾಗ. ಕಲ್ಲು, ಮೂರ್ತಿ, ಕಥನಶಿಲ್ಪ ಶಾಸನ, ಕಥನಶಿಲ್ಪಿಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ವೀರಗಲ್ಲುಗಳ ಬಗ್ಗೆ ವಿಶಿಷ್ಟತೆ ಕಂಡು ಬರುತ್ತದೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರಾಜಾರಾಮ ಹೆಗಡೆ ಹೇಳಿದರು.
ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನದ ಸಹಯೋಗದೊಂದಿಗೆ ಐ.ಎಂ.ಎ.ಸಭಾಂಗಣದಲ್ಲಿ ಭಾನುವಾರ ನಡೆದ 31 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕದ ವೀರಗಲ್ಲುಗಳಲ್ಲಿ ಸಾವಿನಾಚನೆಯ ಲೋಕ ಎಂಬ ವಿಷಯ ಕುರಿತು ಮಾತನಾಡಿದರು.
ವೀರಗಲ್ಲುಗಳಲ್ಲಿನ ಶಿಲ್ಪಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದಾಗ ಶಿಲ್ಪಗಳಿಗೆ ತನ್ನದೆ ಆದ ಮಹತ್ವ ಇದೆ ಎಂಬುದು ಗೊತ್ತಾಯಿತು. ಕನ್ನಡದ ಶಾಸನಗಳ ಬಗ್ಗೆ ಅಧ್ಯಯನ ನಡೆಸಿರುವ ಎಲ್ಲಾ ವಿದ್ವಾಂಸರುಗಳು ವೀರಗಲ್ಲುಗಳನ್ನು ಕುರಿತು ಅಧ್ಯಯನ ಮಾಡಿದ್ದಾರೆ. ವೀರಗಲ್ಲುಗಳನ್ನು ವಿಮರ್ಶೆ ಮಾಡಿದಲ್ಲಿ ಅನೇಕ ವಿಚಾರಗಳನ್ನು ತಿಳಿಯಬಹುದು ಎಂದರು.
ಬಾರತದ ಸಂಸ್ಕೃತಿಯಲ್ಲಿ ವೀರಪೂಜೆ ಪ್ರಮುಖವಾಗಿದೆ. ಇದರಿಂದ ವೀರಗಲ್ಲುಗಳ ಪರಂಪರೆ ಆರಂಭಗೊಂಡಿತು. 200-300 ವರ್ಷಗಳ ಹಿಂದೆ ವೀರಗಲ್ಲುಗಳ ಕುರಿತು ಚರಿತ್ರೆಯಲ್ಲಿ ಉಲ್ಲೇಖವಾಗಿದೆ. ವೀರರ ಸಾವಿನ ನಂತರ ಸ್ಥಿತಿಗತಿಗಳ ಬಗ್ಗೆ ಶಿಲ್ಪಿಗಳು ಹೇಗೆ ಕಲ್ಪನೆ ಮಾಡುತ್ತಾರೆಂಬುದನ್ನು ಅಧ್ಯಯನ ನಡೆಸಿದ್ದೇನೆ. ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ವೀರಗಲ್ಲುಗಳು ಇದೆ. 2300 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ವೀರಗಲ್ಲುಗಳು ಸಿಕ್ಕಿದೆ. ಮಹಾಭಾರತದಲ್ಲಿ ವೀರಗಲ್ಲುಗಳ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ ಎಂದು ತಿಳಿಸಿದರು.
ವೀರನಾದವನು ಯುದ್ದಭೂಮಿಯಿಂದ ಓಡಿ ಹೋಗಬಾರದು. ವೀರಮರಣವನ್ನಪ್ಪಿದರೆ ವೀರಸ್ವರ್ಗ ಸಿಗುತ್ತದೆ ಎಂಬ ಕಲ್ಪನೆ ಕುರಿತು ರಾಜರು ಇತರರಿಗೆ ತಿಳಿಸುತ್ತಿದ್ದರು. ಯುದ್ದ ಸಂದರ್ಭದಲ್ಲಿ ವೀರರಿಗೆ ವಿಶಿಷ್ಟ ಸ್ಥಾನವಿದೆ ಎಂದರು.
ಹಳೆ ಮೈಸೂರು ಪ್ರಾಂತ್ಯದಲ್ಲಿ ಕಥನಶಿಲ್ಪ ಕಂಡು ಬರುತ್ತದೆ. ತಮಿಳುನಾಡು, ಕರ್ನಾಟಕದಲ್ಲಿ ಕಥನಶಿಲ್ಪ ಶಾಸನಗಳು ಕಾಣಸಿಗುತ್ತದೆ. ವಿಜಯನಗರದ ಕಾಲದ ನಂತರ ವೀರಗಲ್ಲುಗಳು ಹೆಚ್ಚು ಜನಪ್ರಿಯವಾಗತೊಡಗಿದವು. ಭಾರತೀಯ ಪುರಾಣಗಳಲ್ಲಿ ಹೆಚ್ಚು ವೀರಗಲ್ಲುಗಳ ಪರಿಕಲ್ಪನೆ ಬರುತ್ತದೆ. ವೀರಗಲ್ಲುಗಳ ಪುರಾಣವನ್ನು ಶಿಲ್ಪರೂಪಕ್ಕೆ ಇಳಿಸುವಾಗ ಸೂಕ್ಷ್ಮವಾದ ಚಿತ್ರಣ ದೊರಕಿದೆ ಎಂದು ವೀರಗಲ್ಲುಗಳ ಮಹತ್ವವನ್ನು ತಿಳಿಸಿದರು.
ಕರ್ನಾಟಕದಲ್ಲಿ ಚಾಲುಕ್ಯ, ರಾಷ್ಟ್ರಕೂಟರು ಆಳಿದಾಗ ಆಂಧ್ರ, ಮಹಾರಾಷ್ಟ್ರ,ಗೋವಾದಲ್ಲಿಯೂ ವೀರಸ್ವರ್ಗ ತೋರಿಸುವ ವೀರಗಲ್ಲುಗಳು ಹೆಚ್ಚು ಜನಪ್ರಿಯವಾಗಿವೆ. ಸುರಾಂಗನೆಯರು ಬಂದು ವೀರನನ್ನು ಎತ್ತಿಕೊಂಡು ಹೋಗುವ ವಿವರಣೆ ವೀರಗಲ್ಲಿನ ದೈವತ್ತದ ಕಲ್ಪನೆಯಿದೆ. ವೀರ ಯಾವ ಕಾರಣಕ್ಕಾಗಿ ಭೂಮಿ ಮೇಲೆ ಹೋರಾಡಿದ ಎನ್ನುವುದನ್ನು ವೀರಗಲ್ಲು ತಿಳಿಸುತ್ತದೆ ಎಂದು ಹೇಳಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ್‍ತೆಲಗಾವಿ, ಸಾಹಿತಿ ಬಿ.ಎಲ್.ವೇಣು, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ರಾಜಮದಕರಿನಾಯಕ, ರೇಣುಕ ಶಿವಣ್ಣ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ