ಹಾವೇರಿ
ಪೂರ್ವ ವ್ಯಾಜ್ಯಗಳನ್ನು ರಾಜೀಸಂಧಾನ ಮೂಲಕ ಇತ್ಯರ್ಥಪಡಿಸುವ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಇದೇ ಮಾರ್ಚ್ 9 ರಂದು ಹಾವೇರಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಅಧೀನ ನ್ಯಾಯಾಲಯಗಳಲ್ಲಿ ಜರುಗಲಿದೆ .ಸಾರ್ವಜನಿಕರು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್. ರೇಣುಕಾದೇವಿ ಅವರು ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೊದಲ ತ್ರೈಮಾಸಿಕ ರಾಷ್ಟ್ರೀಯ ಲೋಕ ಅದಾಲತ್ ಮಾರ್ಚ್ 9 ರಂದು ವಿವಿಧ 1849 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಕ್ಕೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಸರ್ವೋಚ್ಛ ಹಾಗೂ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಪೂರ್ವ ವಾಜ್ಯಗಳನ್ನು ರಾಜೀಸಂಧಾನ ಮೂಲಕ ವಾಜ್ಯಗಾರರಿಗೆ ಪರಿಹಾರ ಒದಗಿಸಿ ವ್ಯಾಜ್ಯಗಳನ್ನು ವಿಲೆಮಾಡುವುದಾಗಿದೆ. ನ್ಯಾಯಾಲಯದ ಮುಂದಿರುವ ವ್ಯಾಜ್ಯಗಳು, ಕಡತಗಳನ್ನು ವಿಲೇವಾರಿಮಾಡಿ ಅಥವಾ ಮುಂದಿನ ನ್ಯಾಯಾಲಯಕ್ಕೆ ಕಳುಹಿಸಿಕೊಡಿ ಎಂದು ಹೇಳುವುದಿಲ್ಲ. ರಾಜೀ ಸಂಧಾನದ ಮೂಲಕ ಎರಡು ಕಡೆ ವ್ಯಾಜ್ಯಗಾರರಿಗೆ ಸೌಹಾರ್ದಯುತವಾಗಿ ಇತ್ಯರ್ಥಪಡಿಸಬೇಕು. ಎರಡು ವ್ಯಾಜ್ಯಗಾರರು ಸೌಹರ್ದಯುತವಾಗಿ ನ್ಯಾಯಾಲಯದಿಂದ ಹೊರಹೋಗಬೇಕು. ವ್ಯಾಜ್ಯದಿಂದ ಬಿಡುಗಡೆ ದೊರೆಯಬೇಕು ಎಂಬ ಆಶಯವಾಗಿದೆ.
ಇದರಿಂದ ವ್ಯಾಜ್ಯಗಾರರಿಗೆ ಹಣ, ಸಮಯ ಹಾಗೂ ಸಂಬಂಧಗಳು ಉಳಿಯುತ್ತದೆ ಎಂಬ ಉದ್ದೇಶ ನ್ಯಾಯಾಲಯದ್ದಾಗಿದೆ ಎಂದು ತಿಳಿಸಿದರು.ಲೋಕ ಅದಾಲತ್‍ನಲ್ಲಿ ಪ್ರಕರಂಗಳನ್ನು ರಾಜಿ ಸಂಧಾನದ ಮೂಲಕ ಪರಿಹಾರ ಒದಗಿಸಲು 21 ಬೆಂಚ್‍ಗಳನ್ನು ಸ್ಥಾಪಿಸಲಾಗುವುದು.
ಪ್ರತಿ ಬೆಂಚಿನಲ್ಲಿ ನುರಿತ ಓರ್ವ ನ್ಯಾಯಾಧೀಶರು ಹಾಗೂ ಓರ್ವ ನ್ಯಾಯಿಕ ಸಂಧಾನಕಾರರು ಪ್ರಕರಣದ ವಿಚಾರಣೆ ನಡೆಸಿ ಎರಡುಕಡೆಯವರ ಒಮ್ಮತದ ಮೇರೆಗೆ ರಾಜೀ ಮಾಡಿಸಲಾಗುವುದು. ಅತ್ಯಂತ ಸೂಕ್ಷ್ಮವಾಗಿ ಪ್ರಕರಗಳನ್ನು ಸಂಧಾನಕಾರರು ಪರಿಶೀಲಿಸಿ ರಾಜೀ ಮಾಡಿಸುತ್ತಾರೆ. ಯಾವುದೇ ಒತ್ತಡ ಮತ್ತು ಒತ್ತಾಯಕ್ಕೆ ಅವಕಾಶವಿರುವುದಿಲ್ಲ. ಎರಡು ಕಡೆಯ ಒಮ್ಮತ ಹಾಗೂ ಮನವರಿಕೆ ಮೂಲಕ ನ್ಯಾಯ ಸಮ್ಮತವಾಗಿ ರಾಜೀ ಮಾಡಿಸಲಾಗುತ್ತದೆ. ಒಮ್ಮೆ ಲೋಕ ಅದಾಲತ್‍ನಲ್ಲಿ ರಾಜೀಯಾದ ಪ್ರಕರಣಗಳು ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಹೇಳಿದರು.
ಚೆಕ್‍ಬೋನ್ಸ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ಪ್ರಕರಣಗಳು, ವಿದ್ಯುತ್ ಮತ್ತು ನೀರಿನ ಬಿಲ್ಲಿಗೆ ಸಂಬಂಧಪಟ್ಟ ಪ್ರಕರಣಗಳು, ವೈವಾಹಿಕ ಸಂಬಂಧ ಪ್ರಕರಣಗಳು, ಕಂದಾಯ ಪ್ರಕರಣಗಳು ಸೇರಿದಂತೆ ವ್ಯಾಜ್ಯ ಪೂರ್ವ ನ್ಯಾಯಾಲಯದಲ್ಲಿ ಇತ್ಯಥ್ರ್ಯಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಮಾಡಿಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ವೈ.ಎಲ್.ಲಾಡಖಾನ್ ಅವರು ಮಾತನಾಡಿ, ಕಳೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಜಿಲ್ಲೆಯ 193 ಪೂರ್ವ ವ್ಯಾಜ್ಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯಾರ್ಥಪಡಿಸಲಾಗಿದೆ. 13.51 ಕೋಟಿ ರೂ. ಸಂಗ್ರಹವಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ 1981 ಪ್ರಕರಣಗಳು ರಾಜೀ ಮಾಡಲಾಗಿದ್ದು, 30.9 ಕೋಟಿ ರೂ. ಸಂಗ್ರವಾಗಿದೆ ಎಂದು ತಿಳಿಸಿದರು.
ಮಾರ್ಚ್ 9 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 2 ಗಂಟೆವರೆಗೆ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.ಎರಡನೆಯ ಲೋಕ ಅದಾಲತ್ ಜುಲೈ 13 ರಂದು ಹಾಗೂ ಮೂರನೇ ರಾಷ್ಟ್ರೀಯ ರಾಷ್ಟ್ರೀಯ ಲೋಕ ಅದಾಲತ್ ಸೆಪ್ಟೆಂಬರ್ 14 ರಂದು ಹಾಗೂ ನಾಲ್ಕನೇ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಡಿಸೆಂಬರ್ 14 ರಂದು ನಡೆಯಲಿದೆ ಎಂದು ತಿಳಿಸಿದರು.