ದಾವಣಗೆರೆ:
ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ಗಳಿದ್ದರೂ ವೈದ್ಯರು, ಅರವಳಿಕೆ ತಜ್ಞರು, ಶುಶ್ರೂಷಕರ ಕೊರತೆ ಇರುವ ಕಾರಣಕ್ಕೆ ಅವನ್ನು ಬಳಸಲಾಗುತ್ತಿಲ್ಲ. ಹೀಗಾಗಿ ಅಗತ್ಯ ವೈದ್ಯರು, ಸಿಬ್ಬಂದಿ ಒದಗಿಸುವಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‍ಗಳು ಸಾಕಷ್ಟಿವೆ. ಆದರೆ, ಅವುಗಳ ನಿರ್ವಹಣೆಗೆ ಅಗತ್ಯವಾದ ತಜ್ಞ ವೈದ್ಯರು, ಸಿಬ್ಬಂದಿ, ಅರವಳಿಕೆ ತಜ್ಞರ ಕೊರತೆ ಇರುವ ಬಗ್ಗೆ ಆರೋಗ್ಯ ಸಚಿವ, ಆಯುಕ್ತರ ಗಮನಕ್ಕೂ ತಂದಿದ್ದೇವೆ ಎಂದರು.
ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದಿರುವ ಬಗ್ಗೆ ದೂರುಗಳಿದ್ದರೆ ಅಂತಹ ಆಸ್ಪತ್ರೆಗಳ ಪಟ್ಟಿಯನ್ನು ಕೊಡಿ. ಇಂದೇ ಜಿಲ್ಲಾಧಿಕಾರಿಗೆ ಹೇಳಿ, ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋವಿಡ್-19 ಮತ್ತು ಕೋವಿಡೇತರ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ನಮ್ಮ ಆದ್ಯತೆ. ಖಾಸಗಿ ಆಸ್ಪತ್ರೆಗಳಾಗಿರಲಿ ಅಥವಾ ಖಾಸಗಿ ಆಸ್ಪತ್ರೆಗಳೇ ಆಗಿರಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ್ದು ಅವುಗಳ ಕರ್ತವ್ಯ ಎಂದರು.ಕಳೆದೊಂದು ತಿಂಗಳಿನಿಂದ ನಾನು ಹೊರಗೆ ಬಂದಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ನಿನ್ನೆ, ಇಂದು ಮಾತ್ರ ಇಲ್ಲಿಗೆ ಬಂದಿದ್ದೇನೆ. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದೇನೆ. ಏನೇ ಮಾಹಿತಿ ಇದ್ದರೂ ಫೋನ್‍ನಲ್ಲೇ ಮಾಹಿತಿ ಪಡೆದು, ಸ್ಪಂದಿಸುತ್ತಿದ್ದೇನೆ ಎಂದು ಹೇಳಿದರು.
ಮಂತ್ರಿ ಬದಲಿಸಲು ಸಭೆ ನಡೆದಿಲ್ಲ:
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಕೈಗೊಳ್ಳುತ್ತಾರೆ. ನಮ್ಮಲ್ಲಿ ಮೂಲ ಬಿಜೆಪಿಯವರು, ವಲಸಿಗರು ಎಂಬುದು ಯಾವುದೂ ಇಲ್ಲ. ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಬಿಜೆಪಿಯವರಷ್ಟೇ ಎಂದ ಅವರು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಇಲ್ಲ. ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮನೆಯಲ್ಲಿ ಸಭೆ ನಡೆಸಿದ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಬಳಿ ಯಾರೂ ಬಂದು ಮಾತನಾಡಿಲ್ಲ. ಸಭೆಗೆ ನನ್ನನ್ನು ಕರೆದಿಲ್ಲ. ಇನ್ನು ಸಭೆಯ ಬಗ್ಗೆ ನನಗೆ ಹೇಗೆ ಗೊತ್ತಾಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮರು ಪ್ರಶ್ನೆ ಹಾಕಿದರು.
ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಸ್ವಾಗತಿಸುತ್ತೇನೆ.ಈಗಿನ ಜಿಲ್ಲಾ ಮಂತ್ರಿಗಳ ಬದಲಾವಣೆ ಬಗ್ಗೆ ಯಾವುದೇ ಸಭೆ, ಚರ್ಚೆಗಳೂ ನಡೆದಿಲ್ಲ. ಇನ್ನು ಕೆಲವು ಶಾಸಕರು ಜಿಲ್ಲಾ ಸಚಿವರ ಬದಲಾವಣೆ ಬಗ್ಗೆ ಸಭೆ ನಡೆಸಿದ್ದಾರೆಂಬುದೂ ಊಹಾಪೋಹವಷ್ಟೇ. ಸಚಿವರ ಬದಲಾವಣೆ ಬಗ್ಗೆ ಶಾಸಕರ್ಯಾರೂ ಸಭೆ ನಡೆಸಿಲ್ಲ ಎಂದರು.
ವಿಜಯೇಂದ್ರನ ವಿರುದ್ದ ಪಿತೂರಿ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಮೇಲೆ ವಿಪಕ್ಷದವರು ವಿನಾಕಾರಣ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಇದಕ್ಕೆಲ್ಲಾ ಪ್ರತಿಕ್ರಿಯಿಸುವುದು ಅನಾವಶ್ಯಕ. ವಿಜಯೇಂದ್ರ ವಿರುದ್ಧ ವಿಪಕ್ಷದವರು ಮಿಥ್ಯಾರೋಪ ಮಾಡುತ್ತಾರೆ. ಅದೆಲ್ಲಾ ಯಡಿಯೂರಪ್ಪ ಮಗ ವಿಜಯೇಂದ್ರ ಮೇಲೆ ವಿಪಕ್ಷಗಳು ಮಾಡಿರುವ ಪಿತೂರಿಯಷ್ಟೇ. ಆರೋಪದಲ್ಲಿ ಯಾವುದೇ ಸತ್ಯಾಂಶವೂ ಇಲ್ಲ ಎಂದರು.ಮುಂದಿನ 3 ವರ್ಷ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಬಿಎಸ್‍ವೈ ನೀಡುತ್ತಿದ್ದಾರೆ. ಮುಂದೆಯೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಮ್ಮ ನಾಯಕ ಯಡಿಯೂರಪ್ಪ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ