ಬ್ಯಾಡಗಿ:
ಮಾಲಿನ್ಯ ಕಾಪಾಡುವುದೂ ಸೇರಿದಂತೆ ಕಸ ನಿರ್ವಹಣೆಗೆ ವಿವಿಧ ರೀತಿಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿದರೂ ನಿಯಂತ್ರಣಕ್ಕೆ ಬರದಂತಾಗಿದೆ, ನಿಮ್ಮ ಮನೆಯಷ್ಟೇ ಪಟ್ಟಣವನ್ನೂ ಸಹ ಸ್ವಚ್ಚವಾಗಿಟ್ಟುಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪುರಸಭೆಯೊಂದಿಗೆ ಕೈಜೋಡಿಸುವಂತೆ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದಲ್ಲಿ ಸ್ವಚ್ಚ ಭಾರತ ಅಭಿಯಾನದಡಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಕಸ ವಿಲೇವಾರಿ ಮತ್ತು ಅದರ ನಿರ್ವಹಣೆ ಸಮಸ್ಯೆಯಾಗಿ ಪರಿಣಮಿಸಿದೆ, ಇದಕ್ಕಾಗಿ ಹಲವಾರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿದರೂ ನಿಯಂತ್ರಣಕ್ಕೆ ಬರದಂತಾಗಿದ್ದು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸ್ವಚ್ಚತೆಗೆ ಮನಸ್ಸು ಮಾಡಬೇಕಾಗಿದೆ ಎಂದರು.
ಸಾರ್ವಜನಿಕರಿಗೆ ಹಸಿ ಮತ್ತು ಒಣಕಸ ಬೇರ್ಪಡಿಸುವುದಕ್ಕಾಗಿಯೇ ಪ್ರತಿ ಮನೆಗೆ ಎರಡು ಡಸ್ಟ್ ಬಿನ್ಗಳನ್ನು ನೀಡಲಾಗಿದೆ, ಆದರೆ ಇಷ್ಟೆಲ್ಲಾ ಮಾಹಿತಿ ಮತ್ತು ಅನುಕೂಲತೆ ಕಲ್ಪಸಿದ್ದರೂ ಸಹ ಯಾರೊಬ್ಬರೂ ಮನಸ್ಸು ಮಾಡುತ್ತಿಲ್ಲ ಮತ್ತು ಕೊಟ್ಟಂತಹ ಸೌಲಭ್ಯಗಳು ದುರುಪಯೋಗವಾಗುತ್ತಿರುವುದು ಕಂಡು ಬರುತ್ತಿದೆ, ಹಸಿ ಮತ್ತು ಒಣ ಕಸವನ್ನು ಮನೆಯಲ್ಲಿಯೇ ಬೇರ್ಪಡಿಸುವುದರಿಂದ ಪುರಸಭೆಗೆ ಇನ್ನಷ್ಟು ಆದಾಯ ಹೆಚ್ಚಲಿದ್ದು ಕಸ ನಿರ್ವಹಣೆ ಮತ್ತು ವಿಲೇವಾರಿಗೆ ಸುಲಭವಾಗಲಿದೆ ಎಂದರು.
ನಮ್ಮೊಂದಿಗೆ ಕೈಜೋಡಿಸದಿದ್ದರೇ ದಂಡವೊಂದೇ ದಾರಿ:ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲುವವರ ಬಗ್ಗೆ ಪುರಸಭೆ ಹದ್ದಿನ ಕಣ್ಣು ಗಳನ್ನಿಟ್ಟಿದ್ದು, ಅದಕ್ಕಾಗಿ ಪಟ್ಟಣದೆಲ್ಲೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ, ಅದಾಗ್ಯೂ ಕಸ ಚೆಲ್ಲಿದವರನ್ನು ಸನ್ಮಾನಿಸುವ ಕಾರ್ಯ ಸಿಬ್ಬಂದಿಗಳಿಂದ ನಡೆಯುತ್ತಿದೆ, ಇದಕ್ಕೂ ಸಹ ನಿಯಂತ್ರಣಕ್ಕೆ ಬರದಿದ್ದಲ್ಲಿ ಕಸವನ್ನು ಚೆಲ್ಲಿ ತಪ್ಪು ಮಾಡುವವರ ವಿರುದ್ಧ ಕ್ರಮ ಅನಿವಾರ್ಯ, ಪುರಸಭೆ ಸಿಬ್ಬಂದಿಯೊಂದಿಗೆ ಕೈಜೋಡಿಸದಿದ್ದರೇ ಸ್ಥಳದಲ್ಲೇ ದಂಡ ವಸೂಲಿಯೊಂದೇ ಮುಂದಿನ ದಾರಿ ಎಂದರು.
ಇದಕ್ಕೂ ಮುನ್ನ ಸ್ಥಳೀಯ ಸಂಸ್ಥೆಗಳಾದ ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸ್ಕೈ ಆರ್ಗನೈಸೇಶನ್ ಕಾರ್ಮಿಕರುಗಳು ಹಾಗೂ ಪುರಸಭೆ ಪೌರಕಾರ್ಮಿಕರ ಜೊತೆಗೂಡಿ ಪಟ್ಟಣದ ವಿವಿಧೆಡೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಶಾಂತ ಯಾದವಾಡ, ಆರೋಗ್ಯಾಧಿಕಾರಿ ರವಿಕೀರ್ತಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.