ಚಳ್ಳಕೆರೆ
ಅಜ್ಞಾನದ ಕತ್ತಲಲ್ಲಿ ಮುಳುಗಿದ್ದ ಸಮಾಜಕ್ಕೆ ಜ್ಞಾನವೆಂಬ ಬೆಳಕನ್ನು ನೀಡಿ, ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಜ್ಞಾನದ ಹಾದಿಯತ್ತ ಸಾಗಲು ಪ್ರೇರಣೆ ನೀಡಿದ ಮಹಾನ್ ದಾರ್ಶನಿಕರೇ ಭಕ್ತ ಶ್ರೇಷ್ಠ ಕನಕದಾಸರು. ಕನಕದಾಸರಲ್ಲಿ ಅಡಗಿದ್ದ ಭಕ್ತಿಯ ಶಕ್ತಿಯಿಂದ ದೇವರೇ ಇವರತ್ತ ತಿರುಗಿ ನೋಡುವಂತಹ ಅಚಲವಾದ ಶ್ರದ್ದೆ ಭಕ್ತಿಯನ್ನು ಕನಕದಾಸರು ಮೈಗೂಡಿಸಿಕೊಂಡಿದ್ದರು. ಇಂತಹ ಮಹಾನ್ ಸರ್ವಶ್ರೇಷ್ಠ ವ್ಯಕ್ತಿಯ ಜಯಂತಿ ದಿನಾಚರಣೆಯಲ್ಲಿ ನಾವೆಲ್ಲರೂ ಕನಕದಾಸರ ಆದರ್ಶಗಳನ್ನು ಪಾಲಿಸುವತ್ತ ದೃಢ ಹೆಜ್ಜೆ ಇಡೋಣವೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ಕುರುಬರ ಹಾಸ್ಟಲ್ ಆವರಣದಲ್ಲಿ ತಾಲ್ಲೂಕು ಆಡಳಿತ, ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘ, ಕನಕ ನೌಕರರ ಸಂಘ ಮತ್ತು ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 531ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಪ್ರಗತಿಗಾಗಿ ಹಗಲಿರುಳು ಶ್ರಮಿಸಿದ ನಿರ್ಗಮನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಈ ಸಮುದಾಯದ ಹಿರಿಯ ಮುಖಂಡರಾಗಿದ್ದು, ಅವರು, ಈ ರಾಜ್ಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಡಳಿತವನ್ನು ನಡೆಸಿದ್ದು, ರಾಜ್ಯದ ಪ್ರಗತಿಗೆ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ಎಲ್ಲಾ ಸಾಧನೆಗಳ ಹಿಂದೆ ಕನಕದಾಸರ ಆದರ್ಶಗಳು ಇವೆ ಎಂದರು. ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಲು ನನಗೆ ಶಕ್ತಿ ತುಂಬಿದವರು ನಿರ್ಗಮನ ಮುಖ್ಯಮಂತ್ರಿ ಸಿದ್ದರಾಮಯ್ಯ. ಆದರಿಂದ ಈ ಸಮುದಾಯ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಯುವ ಶಕ್ತಿ ಕನಕದಾಸರ ಆದರ್ಶಗಳ ಪಾಲನೆಯತ್ತ ಗಮನಹರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಅಲಕ್ಷಿತ ಸಮುದಾಯದ ಹಿತವನ್ನು ಕಾಪಾಡುವುದರಲ್ಲಿ ಕನಕದಾಸರ ಸೇವೆ ಅನನ್ಯವಾಗಿದೆ. ತಮ್ಮದೇಯಾದ ಕೀರ್ತನೆಗಳ ಮೂಲಕ ಸಮಾಜದ ಮೌಢ್ಯದ ಕತ್ತಲನ್ನು ಹೋಗಲಾಡಿಸಲು ನೆರವಾದವರು. ಸರ್ಕಾರ ಇಂತಹ ದಾರ್ಶನಿಕ ಜಯಂತಿ ಆಚರಣೆ ಮಾಡುವ ಮೂಲಕ ಈ ಮಹಾನ್ ಚೇತನನ ನೆನಪು ಸದಾಕಾಲ ನಮ್ಮಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲು ಅನುಕೂಲವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾಸುರೇಶ್‍ಬಾಬು ಮಾತನಾಡಿ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಡಿಜೆಯ ಹಾಡಿನ ಶಬ್ದಕ್ಕೆ ಕುಣಿಯುವ ಯುವಕರು ಕಾರ್ಯಕ್ರಮಕ್ಕೆ ಗೈರು ಹಾಜರಾಗುತ್ತಾರೆ. ಡಿಜೆಯಲ್ಲೇ ಕನಕದಾಸರ ಕೀರ್ತನೆಯನ್ನು ಹಾಡಿಸುವ ಮೂಲಕ ಯುವ ಜನಾಂಗಕ್ಕೆ ಸ್ಪೂರ್ತಿ ತುಂಬಬೇಕು. ಸಮಾಜದ ಎಲ್ಲಾ ದಾರ್ಶನಿಕರೂ ಸಹ ಕೇವಲ ಒಂದೇ ಜಾತಿಗೆ ಸೀಮಿತವಾದವರಲ್ಲ, ಬದಲಾಗಿ ಎಲ್ಲಾ ದಾರ್ಶನಿಕರಲ್ಲೂ ಸಮಾಜವನ್ನು ಕಂದಾಚಾರಗಳಿಂದ ದೂರಮಾಡುವುದೇಯಾಗಿತ್ತು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಶಿವಲಿಂಗಪ್ಪ ಕನಕದಾಸರನ್ನು ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಕನಕ ನೌಕರರ ಸಂಘದಿಂದ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಆಹಲ್ಯಭಾಯಿ ಮಹಿಳಾ ಸ್ವಸಹಾಯ ಸಂಘದ ನೂತನ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ನಿವೃತ್ತ ಕೆಎಎಸ್ ಅಧಿಕಾರಿ ಬಿ.ಶಂಕರಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಎನ್.ಕವಿತಾರಾಮಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉಮಾಜನಾರ್ಧನ, ಎನ್.ರಂಜಿತಾ, ಕರ್ನಾಟಕ ರಾಜ್ಯ ಉಣ್ಣೆ ಕೈಮಗ್ಗಖಾದಿಯೇತರ ಮಹಾಮಂಡಳದ ರಾಜ್ಯಾಧ್ಯಕ್ಷ ಎನ್.ಜಯರಾಂ, ಕಾರ್ಯದರ್ಶಿ ಪಾತಲಿಂಗಪ್ಪ, ಹಿರಿಯ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ರಾಜ್ಯ ಉಪಾಧ್ಯಕ್ಷೆ ಬಿ.ಎಸ್.ಅನುಸೂಯಮ್ಮ, ಚೌಳೂರು ಬಸವರಾಜು, ಎಂ.ಭೀರಲಿಂಗಪ್ಪ, ವಿ.ಮಂಜುನಾಥ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‍ಗೌಡ, ಸಿ.ಕವಿತಾ, ಓ.ಸುಜಾತ, ಸುಮಾಭರಮಣ್ಣ, ಸುಮಕ್ಕ, ಜೈತುಂಬಿ, ತಾಲ್ಲೂಕು ಅಧ್ಯಕ್ಷ ಎ.ರಾಜಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ