ಹೊನ್ನಾಳಿ:
ಸಾಲ ಮನ್ನಾ ಸಂಬಂಧಿಸಿದಂತೆ ಬ್ಯಾಂಕ್‍ಗೆ ದಾಖಲೆಗಳನ್ನು ಸಲ್ಲಿಸಿ, ಸ್ವೀಕೃತಿ ಪತ್ರ ಪಡೆಯಲು ರೈತರು ಹರಸಾಹಸಪಡುವ ಸನ್ನಿವೇಶ ಸೃಷ್ಟಿಯಾಗಿದೆ.
ಕಳೆದ ವಾರ, ಡಿಸೆಂಬರ್ ತಿಂಗಳ ಕೊನೆಯ ಭಾಗದಲ್ಲಿ ಸಾಲು ಸಾಲು ಬ್ಯಾಂಕ್‍ಗೆ ರಜೆ ಇದ್ದ ಕಾರಣ ನಂತರದ ದಿನಗಳಲ್ಲಿ ಬ್ಯಾಂಕ್ ಬಹಳ ರಷ್ ಆಗುತ್ತಿದ್ದು, ಈ ಮಧ್ಯೆಯೇ ಸಾಲ ಮನ್ನಾ ದಾಖಲೆಗಳನ್ನು ಸ್ವೀಕರಿಸುವ ಪ್ರಕ್ರಿಯೆಯೂ ನಡೆಯುತ್ತಿರುವುದರಿಂದ ಬ್ಯಾಂಕ್ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ದಿನ ಬೆಳಿಗ್ಗೆ 6.30ರಿಂದಲೇ ಬ್ಯಾಂಕ್ ಎದುರು ರೈತರು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಅದರಲ್ಲೂ ವಯಸ್ಸಾದವರ ಗತಿ ದೇವರಿಗೇ ಪ್ರೀತಿ. ಕೆಲವರು ವೃದ್ಧ ಮಹಿಳೆಯರು ಸರದಿಯಲ್ಲಿ ನಿಲ್ಲುವುದಕ್ಕೂ ಆಗದೇ ಪರದಾಡುವ ದೃಶ್ಯ ಕರುಳು ಹಿಂಡುವಂತಿರುತ್ತದೆ. ಸರದಿ ಸಾಲಿನಲ್ಲಿ ನಿಂತು ನಿತ್ರಾಣಗೊಂಡ ಕೆಲವರು ಸಮೀಪದಲ್ಲಿಯೇ ಅಂಗಡಿ-ಮುಂಗಟ್ಟೆಗಳ ಕಟ್ಟೆಯ ಮೇಲೆ ಇಲ್ಲವೇ ಕಲ್ಲುಹಾಸಿನ ಮೇಲೆ ಕುಳಿತು ಕಾಲ ಕಳೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬ್ಯಾಂಕ್‍ನಲ್ಲಿ ವಿಶೇಷವಾಗಿ ಜಮೀನಿನ ಪಹಣಿ ಕೇಳುತ್ತಾರೆ. ಇತ್ತೀಚೆಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು “ಸಾಲ ಮನ್ನಾ ದಾಖಲೆ ನೀಡುವಾಗ ಪಹಣಿ ಅಗತ್ಯವಿಲ್ಲ” ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರಾದರೂ, ಬ್ಯಾಂಕಿನಲ್ಲಿ ಪಹಣಿ ಬೇಕು ಎಂದು ಕೇಳುತ್ತಿರುವುದು ರೈತರನ್ನು ಗೊಂದಲಕ್ಕೀಡು ಮಾಡಿದೆ. ಪಹಣಿ ಇಲ್ಲದೇ ಸರದಿ ಸಾಲಿನಲ್ಲಿ ನಿಲ್ಲುವ ರೈತರಿಗೆ ಬ್ಯಾಂಕ್ ಅಧಿಕಾರಿಗಳು ಪಹಣಿ ಬೇಕೇ ಬೇಕು ಎಂದಾಗ ಮತ್ತೆ ಆ ರೈತ ಪಹಣಿ ತೆಗೆದುಕೊಂಡು ಬರಲು ತಾಲೂಕು ಕಚೇರಿಗೆ ತೆರಳಿ ಅಲ್ಲಿಯೂ ಮಾರುದ್ದನೆಯ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಆತ, ಪಹಣಿ ತೆಗೆದುಕೊಂಡು ಬರುವಷ್ಟರಲ್ಲಿ ಬ್ಯಾಂಕ್ ಅವಧಿಯೇ ಮುಗಿದುಹೋಗಿರುತ್ತದೆ. ಮತ್ತೆ ಮರು ದಿನ ಹೊನ್ನಾಳಿಗೆ ಬಂದು ಬ್ಯಾಂಕ್ ಎದುರು ಸರದಿ ಸಾಲಿನಲ್ಲಿ ನಿಂತು ಕಾಯಬೇಕು. ತಮಗೆ ಬಂದಿರುವ ಈ ದುಸ್ಥಿತಿ ತಮ್ಮ ವೈರಿಗೂ ಬೇಡ ಎನ್ನುತ್ತಾರೆ ಚಿಕ್ಕಬಾಸೂರಿನ ರೈತ ನಾಗರಾಜಯ್ಯ. ಬ್ಯಾಂಕ್ ಅಧಿಕಾರಿಗಳು ರೈತರ ಮೇಲೆ ದಯೆ ತೋರಿ ರೈತರನ್ನು ಪದೇ ಪದೇ ಬ್ಯಾಂಕ್‍ಗೆ ಅಲೆದಾಡಿಸದೇ ಒಳಿತು ಮಾಡಬೇಕು ಎನ್ನುತ್ತಾರೆ ನೊಂದ ರೈತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ