ಹರಪನಹಳ್ಳಿ:
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ಸೋಮವಾರ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಲಂಚ ಸ್ವೀಕಾರ್ಹ ಕುರಿತಂತೆ ಬಿಇಒ ಎಲ್.ರವಿ ಹಾಗೂ ಎಫ್‍ಡಿಸಿ ಕೃಷ್ಣಮೂರ್ತಿ ಅವರನ್ನು ಬಂಧಿಸಿದ್ದಾರೆ.
ತೆಲಗಿ ಗ್ರಾಮದ ನಿವೃತ್ತ ಶಿಕ್ಷಕ ಅಂಜಿನಪ್ಪ ಎನ್ನುವವರು ಮೇ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು. ನಿವೃತಿ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಬಿಇಒ ಕಚೇರಿಯ ಎಫ್‍ಡಿಸಿ ಶ್ರೀನಿವಾಸ್ ಅವರ ಬಳಿ ದಾಖಲೆ ಸಲ್ಲಿಸಿದ್ದರು. ಸೌಲಭ್ಯಕ್ಕಾಗಿ ಹಲವಾರು ಬಾರಿ ಕಚೇರಿಗೂ ಅಲೆದಾಡಿದ್ದರು.
ಇದಾದ ಕೆಲ ದಿನಗಳಲ್ಲಿ ಅಂಜಿನಪ್ಪ ಅಪಘಾತದಲ್ಲಿ ಗಾಯಾಳುಗಳಾಗಿದ್ದರು. ಮತ್ತೆ ಸೌಲಭ್ಯಕ್ಕಾಗಿ ಕಚೇರಿಗೆ ಅಲೆದಾಟ ನಡೆಸಿದ್ದರು. ಕಚೇರಿ ಸಿಬ್ಬಂದಿ ಬಿಇಒ ಅವರನ್ನು ಕಾಣಲು ತಿಳಿಸಿದ್ದರು. ಅಲ್ಲದೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತಿದ್ದ ಅಂಜಿನಪ್ಪ ಅ.12ರಂದು ಎಸಿಬಿಗೆ ದೂರು ನೀಡಿದ್ದರು.
ದೂರಿನನ್ವಯ ಎಸಿಬಿ ಅಧಿಕಾರಿಗಳು ಕಳೆದ ಎರಡ್ಮೂರು ದಿನಗಳಿಂದ ದಾಳಿಗೆ ಹೊಂಚು ಹಾಕಿದ್ದರು. ಸೋಮವಾರ ಎಸಿಬಿ ತಂಡ ಅಂಜೀನಪ್ಪ ಅವರೊಂದಿಗೆ ಬಂದಾಗ ಬಿಇಒ ಅವರು ಕಚೇರಿಯಲ್ಲಿರಲಿಲ್ಲ. ಆಗ ಕ್ಲರ್ಕ್ ಕೃಷ್ಣಮೂರ್ತಿ ಅವರ ಮೂಲಕ ಬಿಇಒ ಅವರಿಗೆ ದೂರವಾಣಿ ಕರೆ ಮಾಡಿ ಅಂಜೀನಪ್ಪ ಅವರು 10 ಸಾವಿರ ಹಣ ತಂದಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಬಿಇಒ ಅವರು ಪ್ರತಿಕ್ರಿಯಿಸಿ ಹಣ ಪಡೆದು, ಅವರ ಕೆಲಸ ಮಾಡಿಕೊಡಲು ತಿಳಿಸಿದ್ದಾರೆ ಎಂದು ಫೋನ್ ಮೂಲಕ ದೃಢಿಕರಿಸಿದರು. ಲಂಚ ಸ್ವೀಕಾರ್ಯ ಸಾಭೀತಾಗಿದ್ದರಿಂದ ಎಸಿಬಿ ಅಧಿಕಾರಿಗಳು ಬಿಇಒ ಹಾಗೂ ಕ್ಲರ್ಕ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಎಸಿಬಿ ಡಿವೈಎಸ್‍ಪಿ ಪರಮೇಶ್ವರ ತಿಳಿಸಿದ್ದಾರೆ.ತಂಡದಲ್ಲಿ ಇನ್‍ಸ್ಪೆಕ್ಟರ್ ನಾಗಪ್ಪ ಹಾಗೂ ಎಂಟು ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
