ಮಕ್ಕಳಿಗೆ ಎದೆಹಾಲಿಗಿಂತ ಶ್ರೇಷ್ಠವಾದದ್ದು ಬೇರೊಂದಿಲ್ಲ

ಚಿತ್ರದುರ್ಗ:

       ಎದೆಹಾಲಿಗೆ ಸರಿಸಮನಾದ ಮಕ್ಕಳ ಆಹಾರ ಬೇರೊಂದಿಲ್ಲ. ನವಜಾತ ಶಿಶುಗಳಿಗೆ ತಾಯಂದಿರು ತಪ್ಪದೆ ಸ್ತನ್ಯಪಾನ ಮಾಡಿಸುವಂತೆ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ಅವರು ಹೇಳಿದರು.

          ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕಾಸವರಹಟ್ಟಿ ಸಹಯೋಗದೊಂದಿಗೆ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಸೋಮವಾರ ಏರ್ಪಡಿಸಿದ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲೇ ಶ್ರೇಷ್ಠ ಆಹಾರ. ಎದೆ ಹಾಲಿಗೆ ಸರಿಸಮನಾದ ಮಕ್ಕಳ ಆಹಾರ ಬೇರೊಂದಿಲ್ಲ.

          ಹೀಗಾಗಿ ತಾಯಂದಿರು ತಪ್ಪದೆ ಮಕ್ಕಳಿಗೆ ಸ್ತನ್ಯಪಾನ ಮಾಡಿಸಬೇಕು. ತಾಯಿಮರಣ ಮತ್ತು ಶಿಶುಮರಣದ ನಿಯಂತ್ರಣಕ್ಕೆ ಸರ್ಕಾರ ಸುರಕ್ಷಿತ ಮಾತೃತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದು, ಉಚಿತವಾಗಿ ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಗರ್ಭಿಣಿಯರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು, ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಮುಂದಾಗಬೇಕು ಎಂದು ಡಾ. ಬಿ.ವಿ. ಗಿರೀಶ್ ಅವರು ಹೇಳಿದರು. 

          ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಗರ್ಭಿಣಿಯರ ಶೀಘ್ರ ನೋಂದಾವಣಿ ಮಾಡಿಕೊಳ್ಳಲಾಗುತ್ತಿದ್ದು, ಮಹಿಳೆಯರು ಮುಟ್ಟುನಿಂತ ಒಂದು ತಿಂಗಳ ಒಳಗೆ ಹೆಸರು ನೋಂದಾಯಿಸಿ ತಾಯಿ ಕಾರ್ಡ ಪಡೆದುಕೊಳ್ಳಬೇಕು. ಇದರಿಂದ 8 ತಿಂಗಳುಗಳ ಕಾಲ ಪ್ರತಿ ಮಾಹೆ 9ನೇ ತಾರೀಕಿನಂದು ಉಚಿತ ವೈದ್ಯಕೀಯ ಸೇವೆ ದೊರೆಯುತ್ತದೆ.

         ಮುಂದೆ ಸಂಭವಿಸಬಹುದಾದ ಹೆರಿಗೆಯ ತೊಂದರೆಗಳನ್ನು ಮುಂಚೆಯೇ ಗುರುತಿಸಿ ಚಿಕಿತ್ಸೆ ಆರೈಕೆಯ ಸೇವೆಗಳನ್ನು ಪಡೆಯಬಹುದು. ಗರ್ಭಿಣಿಯರು ತಡ ಮಾಡಿದಷ್ಟು, ಆರೋಗ್ಯ ಇಲಾಖೆಯಿಂದ ದೊರೆಯುವ ಸೇವೆಯ ಸಂಖ್ಯೆ ಕಡಿಮೆಯಾಗುತ್ತದೆ. ತಾಯಂದಿರ ಮರಣ ಪ್ರಮಾಣ ತಗ್ಗಿಸಲು, ತಿಂಗಳು ತುಂಬುವ ಮೊದಲು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ನೋಂದಾಯಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು. ಸರ್ಕಾರದಿಂದ ತಾಯಿ ಮರಣ ನಿಯಂತ್ರಣಕ್ಕಾಗಿ ಇರುವ ಮಾತೃ ವಂದನಾ ಕಾರ್ಯಕ್ರಮದಡಿ, ಪ್ರಥಮ ಮಗುವಿನ ತಾಯಿಗೆ ಪ್ರತಿ ತಿಂಗಳು ರೂ.1000/- ಅವರ ಖಾತೆಗೆ ನೇರವಾಗಿ ಜಮ ಮಾಡುವ ಯೋಜನೆಗೆ ಅಂಗನವಾಡಿಯಲ್ಲಿ ಅರ್ಜಿ ಪಡೆದು ನೊಂದಾಯಿಸಿಕೊಳ್ಳಬೇಕು.

           ಮಾತೃಪೂರ್ಣ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಇದನ್ನ ಉಪಯೋಗಿಸಿ ಅಪೌಷ್ಠಿಕತೆಯಿಂದ ಮುಕ್ತರಾಗಿ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ರಕ್ತಹೀನತೆಗೆ ಸಂಬಂದಿಸಿದ ಜೌಷಧಿಗಳನ್ನು ಉಚಿತವಾಗಿ ಪಡೆಯಿರಿ ಎಂದು ತಿಳಿಸಿದರು. 

           ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಜಿಲ್ಲಾ ಮೇಲ್ವಿಚಾರಕಿ ಎನ್. ಸಾವಿತ್ರಮ್ಮ, ಕಿರಿಯ ಆರೋಗ್ಯ ಸಹಾಯಕಿ ನಾಗರತ್ನ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸುಮಾರು 50 ಗರ್ಭಿಣಿಯರು ಭಾಗವಹಿಸಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಹೆಚ್.ಐ.ವಿ. ಪರೀಕ್ಷೆ ಮಾಡಿಸಿಕೊಂಡರು, ವಿವಿಧ ಗ್ರಾಮಗಳಿಂದ ಬಂದಿದ್ದ ಗರ್ಭಿಣಿಯರಿಗೆ ರಕ್ತಹೀನತೆಯ ಚಿಕಿತ್ಸೆ, ವಿವಿಧ ಪರೀಕ್ಷೆಗಳನ್ನು ನಿರ್ವಹಿಸಲಾಯಿತು. ಸ್ತನ್ಯಪಾನ ಸಪ್ತಾಹದ ಮಹತ್ವವನ್ನು ಸಾರುವ ಕರಪತ್ರವನ್ನು ವಿತರಿಸಲಾಯಿತು. ಕಿರು ಚಿತ್ರದ ಮೂಲಕ ಎದೆಹಾಲಿನ ಮಹತ್ವವನ್ನು ಬಿತ್ತರಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್1 ಎನ್1 ರೋಗನಿಯಂತ್ರಣ ಮುಂಜಾಗ್ರತೆ ಬಗ್ಗೆ ತಿಳಿಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap