ತುಮಕೂರು
ಜನವರಿ 19ರಿಂದ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ಪಾದಯಾತ್ರೆಯನ್ನು ಆರಂಭಿಸಿ, 130 ಕಿಮೀ ಕ್ರಮಿಸಿ ತುಮಕೂರಿಗೆ ಆಗಮಿಸಿದ್ದು ಜ.26ರಂದು ಸಾಣೆಹಳ್ಳಿ ಶ್ರೀಗಳ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಆದರೆ ಯಾವೊಬ್ಬ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ತಮ್ಮ ನಿಲುವನ್ನು ವ್ಯಕ್ತಪಡಿಸದೇ ಇರುವುದು ವಿಷಾದನೀಯ ಎಂದು ಮಧ್ಯ ನಿಷೇಧ ಆಂದೋಲನದ ಸ್ವರ್ಣ ಭಟ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಧ್ಯ ಮಾರಾಟದಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬರುತ್ತಿವೆ. ನಿತ್ಯ ಒಂದು ಕುಟುಂಬ ಅನಾಥವಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆಯೇ ರಾಯಚೂರಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಮಹಿಳೆಯರಿಂದ ಮಧ್ಯ ನಿಷೇದಕ್ಕಾಗಿ ಪ್ರತಿಭಟನೆ ನಡೆದಿತ್ತು.
ದರೆ ಅದಕ್ಕೆ ಸರ್ಕಾರವು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಈ ನಿಟ್ಟಿನಲ್ಲ ರಾಜ್ಯಾದ್ಯಂತ ನೊಂದ ಮಹಿಳೆಯರು ಸೇರಿಕೊಂಡು ಆಂದೋಲನವನ್ನು ಪ್ರಾರಂಭ ಮಾಡಿ, ಜ.19ರಂದು ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲು ತೀರ್ಮಾನ ಮಾಡಿ ಪಾದಯಾತ್ರೆ ಮಾಡುತ್ತಿದ್ದೇವೆ. ಜ.30ರಂದು ಬೆಂಗಳೂರಿಗೆ ತಲುಪುವ ಈ ಪಾದಯಾತ್ರೆ ಮಲ್ಲೇಶ್ವರಂನ ಕ್ರೀಡಾಂಗಣದಲ್ಲಿ ಬಹಿರಂಗ ಸಭೆ ನಡೆಸಿದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದರು.
ಜ.30ರಂದು ಗಾಂಧೀಜಿಯವರು ಹುತಾತ್ಮರಾದ ದಿನವಾದ್ದರಿಂದ ಅವರ ಆಶಯದಂತೆ ಮಧ್ಯ ನಿಷೇದ ಮಾಡಬೇಕೆಂದು ಒತ್ತಾಯಿಸಲಾಗುವುದು. ಅಂದು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಾರೆ. ಅಕ್ರಮವಾಗಿ ಮಾರಾಟ ಮದ ಬಾಟಲಿಗಳನ್ನು ಒಂದೆಡೆ ಹಾಕಿ ಅದನ್ನು ಸುಟ್ಟು ಹಾಕಲಾಗುವುದು. ಅಂದು ಜೈಲ್ ಭರೋ ಚಳವಳಿ ಮಾಡಲು ಕೂಡ ಸಿದ್ದರಿದ್ದೇವೆ ಎಂದರು.
ಜನಪ್ರತಿನಿಧಿಗಳಿಗೆ ಚುನಾವಣೆಯ ವೇಳೆಯಲ್ಲಿ ಮಾತ್ರ ಮಹಿಳೆಯರು ಬೇಕಾಗಿದ್ದಾರೆ. ನಂತರ ಮಹಿಳೆಯರ ಬಗ್ಗೆ ಗಮನ ಹರಿಸುವುದೇ ಇಲ್ಲ. ಇಂದು ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಯಾವೊಬ್ಬ ರಾಜಕಾರಣಿಗಳು ಮುಂದೆ ಬರುತ್ತಿಲ್ಲ. ಅವರಿಗೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಕನಿಷ್ಠ ಮಾನವೀಯತೆ ಕೂಡ ಇಲ್ಲ. ಅವರಿಗೆ ಸರ್ಕಾರ ನಡೆಸಲು ಆಗದೇ ಹೋದರೆ ಸರ್ಕಾರ ನಡೆಸಲು ಆಗುವುದಿಲ್ಲ ಎಂದು ಬರೆದುಕೊಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ಆಗ್ರಹಿಸಿದರು.
ರಾಯಚೂರಿನ ಮೋಕ್ಷಮ್ಮ ಮಾತನಾಡಿ, ಕಳೆದ ಏಳೆಂಟು ದಿನಗಳಿಂದ ಸಾವಿರಾರು ಮಹಿಳೆಯರು ಮನೆ, ಮಕ್ಕಳನ್ನು ಬಿಟ್ಟು ಬೀದಿಗಳಿದು ಪಾದಯಾತ್ರೆ ಮಾಡುತ್ತಿದ್ದಾರೆ. ಬೆಳಗ್ಗೆ ಬಿಸಿಲು, ರಾತ್ರಿಯಾದರೆ ಮೈಕೊರೆಯುವ ಚಳಿ ಇದೆಲ್ಲವನ್ನು ತಡೆದು ಪಾದಯಾತ್ರೆ ಮುಂದುವರೆಸಿದ್ದಾರೆ. ಕಾಲುಗಳಲ್ಲಿ ಬೊಬ್ಬೆಗಳು ಬಂದಿದ್ದು, ರಕ್ತ ಹರಿಯುತ್ತಿದ್ದರೂ ಅದ್ಯಾವುದನ್ನು ಲೆಕ್ಕಿಸದೆ ಮದ್ಯ ನಿಷೇದ ಆಗಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡಿ ಮದ್ಯ ನಿಷೇದ ಮಾಡದೇ ಹೋದರೆ ನಮ್ಮ ಹೋರಾಟ ಇನ್ನಷ್ಟು ಉಗ್ರವಾಗುತ್ತದೆ. ಜತೆಗೆ ನಮ್ಮನ್ನು ಜೈಲಿಗೆ ಹಾಕಿದರೂ ಅಲ್ಲಿಯೂ ಅನ್ನ ನೀರು ಮುಟ್ಟದೇ ಉಪವಾಸ ಇದ್ದು ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಪ್ರಸನ್ನ. ಬದಾಮಿಯ ಗಂಗಮ್ಮ, ಸುವರ್ಣಮ್ಮ, ಸರ್ವೋದಯ ಮಂಡಲದ ರಾಜ್ಯಾಧ್ಯಕ್ಷ ಎಲ್.ನರಸಿಂಹಯ್ಯ, ಕಾರ್ಯದರ್ಶಿ ಆರ್.ವಿ.ಪುಟ್ಟಕಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.