ಕಾಡು ಪ್ರಾಣಿಗಳಿಂದ ಬೆಳೆ ನಷ್ಟ : ಪರಿಹಾರಕ್ಕೆ ರೈತರ ಒತ್ತಾಯ !!

ಪಾವಗಡ :

       ತಾಲ್ಲೂಕಿನಲ್ಲಿ 20 ವರ್ಷಗಳಿಂದ ಮಳೆ ಬೆಳೆಯಿಲ್ಲದೆ ಕಂಗಾಲಾಗಿದ್ದ ರೈತನಿಗೆ, 2020-2021 ನೇ ಸಾಲಿನಲ್ಲಿ ಉತ್ತಮ ಮಳೆಯಾದರೂ ಸಹ ರೈತರ ಸಂಕಷ್ಟ ತೀರಿಲ್ಲ. ಪ್ರತಿ ವರ್ಷ ತಾಲ್ಲೂಕಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತನ ಬದುಕು ನಶಿಸಿ ಹೋಗುತ್ತಿದೆ ಎಂದು ಕಿಸಾನ್ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ ಆರೋಪಿಸಿದ್ದಾರೆ.

      ವರ್ಷದ ಪ್ರಾರಂಭದಲ್ಲಿ ಭರಣಿ ಮಳೆಯಿಂದ ಹಿಡಿದು ಇದುವರೆಗೂ ಉತ್ತಮ ಮಳೆ ಬಂದರೂ, ಯಾವೊಬ್ಬ ರೈತನಿಗೂ ಬೆಳೆ ಕೈಗೆ ಸಿಗಲಿಲ್ಲ. ಹಿಂದಿನ ವರ್ಷದಲ್ಲಿ ಇಟ್ಟ ಬೆಳೆಯ ಬೀಜದ ಖರ್ಚಾದರೂ ಸಿಗುತ್ತಿತ್ತು. ಪ್ರಸ್ತುತ ವರ್ಷದಲ್ಲಿ ರೈತ ನೆಲ ಕಚ್ಚಿದ್ದಾನೆ. ಇದರ ವರದಿಯನ್ನು ಸರ್ಕಾರ ಗಮನಿಸಿದೆಯೊ ಇಲ್ಲವೊ? ಸಂಬಂಧ ಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ವರದಿ ಮಾಡಿದ್ದಾರೊ ಇಲ್ಲವೊ? ಸ್ಥಳೀಯ ಶಾಸಕ ಮತ್ತು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೋ ಇಲ್ಲವೊ? ರೈತ ಬೆಳೆದ ಅನ್ನ ತಿಂದವರು ಮಾತ್ರ ಮಾನವೀಯತೆಯ ದೃಷ್ಟಿಯಲ್ಲಿ ರೈತನ ಕಷ್ಟಕ್ಕೆ ಸಹಾಯ ಹಸ್ತ ನೀಡಲು ಮುಂದೆ ಬರಬೇಕಾಗಿದೆ.

       ತಾಲ್ಲೂಕಿನಲ್ಲಿ ಮುಂಗಾರು ಬೆಳೆಗಳನ್ನು ಇಟ್ಟ ಕೆಲ ರೈತರಿಗೆ ನಷ್ಟವಾದರೆ, ಕೆಲವು ರೈತರಿಗೆ ನೀರಾವರಿ ಬೆಳೆಗಳಾದ ತರಕಾರಿ ಹಾಗೂ ಕಲ್ಲಂಗಡಿ, ಕರಬೂಜ, ಸೌತೆಕಾಯಿ ಕಾಯಿಗಳಂತಹ ಬೆಳೆಗಳು ಇಟ್ಟು, ಜಡಿ ಮಳೆಯಿಂದ ಟೊಮ್ಯಾಟೊಗೆ ಬೂದಿರೋಗ, ಮಚ್ಚೆರೋಗದಿಂದ ರೈತರು ಕೈ ಸುಟ್ಟು ಕೊಂಡಿದ್ದಾರೆ. ಕೆಲ ರೈತರು ಕಲ್ಲಂಗಡಿ, ಕರಬೂಜ ಹಾಗೂ ಮೆಕ್ಕೆ ಜೋಳ ಬೆಳೆದು ಕಾಡು ಪ್ರಾಣಿಗಳಾದ ಕರಡಿ, ಕಾಡು ಹಂದಿ ಪಾಲಾಗುತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಬೆಳೆಗಳು ಹಾಳಾಗುತ್ತಿವೆ.

      ತಾಲ್ಲೂಕಿನ ಕಡಮಲಕುಂಟೆ ಗ್ರಾಮದ ಈರಲಿಂಗೇಗೌಡರು ಸರ್ವೆ ನಂಬರ್ 32/6 ರ 5 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದು, ಕಟಾವು ಆಗುವ ಹಂತದಲ್ಲಿದ್ದ ಬೆಳೆಯನ್ನು ಸೋಮವಾರ ರಾತ್ರಿ ಕರಡಿಗಳು ಹಾಳು ಮಾಡಿವೆ. ರೈತ ಎರಡೂವರೆ ಲಕ್ಷ ರೂ. ಖರ್ಚು ಮಾಡಿದ್ದು, ಕರಡಿ ಹಾವಳಿಯಿಂದ ಸುಮಾರು 10 ಟನ್‍ನಷ್ಟು ಕಲ್ಲಂಗಡಿ ಬೆಳೆ ನಷ್ಟವಾಗಿದೆ. ಇದನ್ನು ಅರಣ್ಯ ಇಲಾಖೆ ಅಧಿಕಾರಿUಳಿಗೆ ತಿಳಿಸಿದ್ದರೂ ಪ್ರತಿಫಲವಿಲ್ಲದಂತಾಗಿದೆ ಎಂದು ರೈತ ಈರಲಿಂಗೇಗೌಡ ಆರೋಪಿಸಿದ್ದಾರೆ.

      ಇದೇ ಗ್ರಾಮದ ರೈತರಾದ ಲಕ್ಷ್ಮಮ್ಮ ಜಮೀನಿನ ಸರ್ವೆ ನಂಬರ್ 149 ರ 3 ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆ ಇಟ್ಟಿದ್ದು, ಬೆಳೆ ಕಟಾವು ಹಂತದಲ್ಲಿದೆ. ಆದರೆ ಕಾಡು ಹಂದಿಗಳಿಂದ ಬೆಳೆ ನಾಶವಾಗುತ್ತಿದೆ. ರೈತರು ನಿದ್ದೆಗೆಟ್ಟು ಕಾವಲು ಕಾಯ್ದರೂ ಸಹ ಬೆಳೆಯು ಕಾಡು ಪ್ರಾಣಿಗಳಿಂದ ನಷ್ಟವಾಗುತ್ತಿದೆ ಎಂದು ರೈತ ಮಹಿಳೆ ಲಕ್ಷ್ಮಮ್ಮ ಅಲವತ್ತು ಕೊಂಡಿದ್ದಾರೆ.

      ತಾಲ್ಲೂಕಿನಲ್ಲಿ ಒಂದು ಕಡೆ ಕಾಡು ಪ್ರಾಣಿಗಳ ಕಾಟದಿಂದ ರೈತ ಬೆಳೆದ ಬೆಳೆ ನಷ್ಟವಾರೆ, ಇನ್ನೊಂದು ಕಡೆ ಜಡಿ ಮಳೆಯಿಂದ ಬೆಳೆ ನಷ್ಟವಾಗುತ್ತಿದೆ. ಸಂಬಂಧ ಪಟ್ಟ ಕೃಷಿ ಇಲಾಖೆ, ತೋಟಗಾರಿಕೆ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗಾದ ಬೆಳೆ ನಷ್ಟದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ, ಸರ್ಕಾರದ ಗಮನಕ್ಕೆ ತಂದು ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ನೀಡಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ ಒತ್ತಾಯಿಸಿದ್ದಾರೆ.

      ರಾಷ್ಟ್ರೀಯ ಉದೋಗ ಖಾತ್ರಿ ಯೋಜನೆಯಲ್ಲಿ ರೈತರಿಗೆ ದನದಕೊಟ್ಟಿಗೆ, ಕೋಳಿ ಶೆಡ್, ಹಂದಿಶೆಡ್, ಕೊಳವೆ ಬಾವಿ ಮರುಪೂರಣ, ಜಮೀನು ಅಭಿವೃದ್ಧಿ, ಕೃಷಿಹೊಂಡ, ಮೀನು ಸಾಕಾಣಿಕೆ ಹೊಂಡ, ಎರೆಹುಳು ಗೊಬ್ಬರ ತೊಟ್ಟಿ, ಕುರಿ ಶೆಡ್, ಬದು ನಿರ್ಮಾಣ, ತೋಟಗಾರಿಕೆ ಸಸಿ ನೆಡುವುದು, ಈರುಳ್ಳಿ ಶೇಖರಣೆ ಘಟಕ ಯೋಜನೆಗಳನ್ನು ರೂಪಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಇಂತಹ ಯೋಜನೆಗಳ ಜೊತೆಗೆ ಸರ್ಕಾರ ರೈತರ ಬೆಳೆಗಳಿಗೆ ತಕ್ಕಂತೆ ಖರ್ಚು ವೆಚ್ಚವನ್ನು ಉದ್ಯೋಗ ಖಾತ್ರಿ ಯೋಜನೆಯ ಮುಖಾಂತರ ರೈತರಿಗೆ ಕಲ್ಪಿಸಿದರೆ ರೈತನಿಗೆ ಉದ್ಯೋಗವೂ ಸಿಗುತ್ತದೆ ಮತ್ತು ಬೆಳೆ ಇಡಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

      2020-21 ನೇ ಸಾಲಿನಲ್ಲಿ ತಾಲ್ಲೂಕಿನ ರೈತರ ಶೇಂಗಾ ಬೆಳೆ ಸಂಪೂರ್ಣ ನಷ್ಟವಾಗಿದ್ದು, ರೈತರಿಂದ ಬೆಳೆ ನಷ್ಟ ಪರಿಹಾರಕ್ಕೆ ಬೆಳೆ ವಿಮೆ ಕಟ್ಟಿಸಿಕೊಂಡ ವಿಮಾ ಯೋಜನೆ ಯಿಂದ ತುರ್ತಾಗಿ ಬೆಳೆ ಪರಿಹಾರ ಬಿಡುಗಡೆ ಗೊಳಿಸಬೇಕು. 2019-20 ನೇ ಸಾಲಿನಲ್ಲಿ ಬೆಳೆ ವಿಮೆ ಹಣ ಕಟ್ಟಿದ ರೈತರಿಗೆ ಇದುವರೆಗೂ ಕೆಲವು ರೈತರಿಗೆ ಪರಿಹಾರ ನೀಡಿಲ್ಲ. ಇತ್ತೀಚೆಗೆ ಕೃಷಿ ಇಲಾಖೆ ಮತ್ತು ಬ್ಯಾಂಕ್ ಮುಂದೆ ಧರಣಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ. ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ಪರಿಹಾರ ಕಲ್ಪಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link