ಹೊನ್ನಾಳಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ-ಪಾಕಿಸ್ತಾನ ಗಡಿ ಕಾಯುವ ಯೋಧರ ಜೊತೆ ದೀಪಾವಳಿಯ ಆಚರಿಸಿದ್ದು ಯೋಧರಲ್ಲಿ ಸ್ಫೂರ್ತಿ ತುಂಬಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಗುರುವಾರ ತಾಲೂಕಿನ ಘಂಟ್ಯಾಪುರ ಬಂಜಾರ ತಾಂಡಾದಲ್ಲಿ ಜನಾಂಗದ ವಿಶಿಷ್ಟ ಸಂಸ್ಕತಿಯನ್ನು ಪ್ರತಿಬಿಂಬಿಸುವ ವಿಶೇಷ ದೀಪಾವಳಿಯನ್ನು ಗುಡ್ಡಗಾಡು ಪ್ರದೇಶದಲ್ಲಿ ಯುವಕರು, ಮಹಿಳೆಯರು ಮತ್ತು ಜನಾಂಗದ ಮುಖಂಡರೊಂದಿಗೆ ಆಚರಿಸಿ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ದೇಶ ಸಾಂಸ್ಕತಿಕವಾಗಿ ಸಂಪದ್ಭರಿತ ದೇಶ. ವಿಭಿನ್ನ ಭಾಷೆ, ವೇಷ ಭೂಷಣಗಳ ಜೊತೆಗೆ ಆಚಾರ-ವಿಚಾರಗಳಲ್ಲೂ ವೈವಿಧ್ಯತೆ ಹೊಂದಿರುವ ಬಂಜಾರ ಸಂಸ್ಕತಿ ತನ್ನದೇ ಆದ ವಿಶೇಷ ಪರಂಪರೆಯನ್ನು ಹೊಂದಿದೆ. ಹಬ್ಬಗಳ ರಾಜನೆಂದೇ ಹೆಸರು ಪಡೆದಿರುವ ದೀಪಾವಳಿ ಹಬ್ಬವನ್ನು ಅನೇಕ ಕಡೆ ವಿಭಿನ್ನವಾಗಿ ಆಚರಿಸುತ್ತಾರೆ. ಮೂರು ದಿನಗಳ ಕಾಲ ವಿಶೇಷ ಅಡುಗೆಯ ಜೊತೆಗೆ ದೀಪಗಳನ್ನು ಮನೆಯ ಸುತ್ತಲೂ ಹಚ್ಚಿ ಸಂಭ್ರಮಿಸುವುದು, ಸಿಡಿಮದ್ದುಗಳನ್ನು ಉರಿಸಿ ಸಂತೋಷಪಡುವುದು, ಇದರ ಜೊತೆಯಲ್ಲಿ ಲಕ್ಷ್ಮೀ ಪೂಜೆ, ಗೋ ಪೂಜೆ, ಬಲೀಂದ್ರ ಪೂಜೆ ಹೀಗೆ ವಿವಿಧ ಧಾರ್ಮಿಕ ಆಚರಣೆಗಳನ್ನು ಸಂಭ್ರಮದಿಂದ ನಡೆಸುತ್ತಾರೆ. ವಿಶಿಷ್ಟ ಪರಂಪರೆ ಹೊಂದಿರುವ ಬಂಜಾರ ಜನಾಂಗ ತನ್ನದೇ ನೆಲೆಗಟ್ಟಾದ ತಾಂಡಾಗಳಲ್ಲಿ ಸನಾತನ ಧಾರ್ಮಿಕ ಆಚರಣೆಗಳಿಗೆ ಮಹತ್ವ ನೀಡಿ ಇಂದಿನ ಪೀಳಿಗೆಯವರೆಗೂ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಈ ತಾಂಡಾದಲ್ಲಿ ಮದುವೆಯಾಗದ ಅವಿವಾಹಿತ ಮಹಿಳೆಯರು, ಮಕ್ಕಳು ಸಮೀಪದ ಗುಡ್ಡಕ್ಕೆ ತೆರೆಳಿ ತಾವರಿಕೆ ಹೂವು, ಬ್ರಹ್ಮದಂಡೆ ಮುಂತಾದ ಪೂಜಾ ಸಾಮಗ್ರಿಗಳನ್ನು ತಂದು ಇಲ್ಲಿ ತಮ್ಮದೇ ಆದ ಜಾನಪದ ಸಂಸ್ಕøತಿಯ ಹಾಡು, ನೃತ್ಯಗಳನ್ನು ನಡೆಸಿ ನಂತರ ತಾಂಡಾದ ಪ್ರತಿ ಕೇರಿಯ ಮನೆ ಮನೆಗಳಿಗೆ ಗುಡ್ಡದಿಂದ ತಂದ ಪೂಜಾ ಸಾಮಗ್ರಿಗಳನ್ನು ವಿತರಿಸಿ ದೀಪಾವಳಿ ಆಚರಿಸುತ್ತಾರೆ. ಹೀಗೆ ಪ್ರತಿಯೊಂದು ಹಬ್ಬದ ಆಚರಣೆ ತನ್ನದೇ ಆದ ಸಂಸ್ಕತಿಯನ್ನು ಸಮಾಜದ ಸಾಮರಸ್ಯಕ್ಕೆ ಮಾರ್ಗದರ್ಶಿಯಾಗಿದ್ದು, ಸಹಬಾಳ್ವೆ, ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಿದೆ ಎಂದು ವಿವರಿಸಿದರು
ಜಿಪಂ ಸದಸ್ಯ ಸಿ. ಸುರೇಂದ್ರನಾಯ್ಕ ತಾಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮಾರುತಿನಾಯ್ಕ್, ಶಿವಕುಮಾರನಾಯ್ಕ, ಚಂದ್ರನಾಯ್ಕ, ಆರ್.ಟಿ. ರಮೇಶ್, ವೀಟಾನಾಯ್ಕ, ವಾಸು, ಅನಂತನಾಯ್ಕ, ಹನುಮಂತನಾಯ್ಕ, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ತಿಮ್ಮೇನಹಳ್ಳಿ ಟಿ.ಆರ್. ಚಂದಪ್ಪ ಸೇರಿದಂತೆ ಜನಾಂಗದ ಯುವಕರು, ಯುವತಿಯರು, ಅನೇಕ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
