ಕೊಟ್ಟೂರು
ಕೊಟ್ಟೂರಿನಲ್ಲಿನ ಕೂಡ್ಲಿಗಿ ತಾಲೂಕು ಶ್ರೀ ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ (ಪಿಕಾರ್ಡ್) ಬ್ಯಾಂಕಿನ ಹುಡೇಂ ಕ್ಷೇತ್ರ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಟಿ.ಬಸವರಾಜ ಪೂಜಾರಹಳ್ಳಿ 12 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು.
ಕಳೆದ 25 ವರ್ಷಗಳಿಂದ ಈ ಕ್ಷೇತ್ರದಲ್ಲಿ ಗೆಲವು ಸಾಧಿಸಿಕೊಂಡು ಬರುತ್ತಿದ್ದ ಪಿಕಾರ್ಡ್ ಬ್ಯಾಂಕಿನ ಹಾಲಿ ಅಧ್ಯಕ್ಷ ಕೆ.ಮೂರ್ತಿಯವರನ್ನು ಪರಾಭವಗೊಳಿಸುವಲ್ಲಿ ಟಿ. ಬಸವರಾಜ್ ಯಶಸ್ವಿಯಾದರು.
ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಹುಡೇಂ ಕ್ಷೇತ್ರದ ಎಲ್ಲ 19 ಮತದಾರರು ಮತ ಚಲಾಯಿಸಿದರು. ಚುನಾವಣೆ ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡು ಸಂಜೆ 4 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಿತು.
ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಂಡಿದ್ದ ಉಪನ್ಯಾಸಕ ಚಿತ್ತರಂಜನ್, ಶಿಕ್ಷಕ ಹನುಮೇಶ್ ನಂತರ ಎಣಿಕ ಕಾರ್ಯವನ್ನು ಕೈಗೆತ್ತಿಕೊಂಡು ಕೆಲವೇ ನಿಮಿಷಗಳಲ್ಲಿ ಮುಕ್ತಾಯಗೊಳಿಸಿದರು.
ಟಿ.ಬಸವರಾಜ್ ಪೂಜಾರಹಳ್ಳಿಗೆ 12 ಮತಗಳು ಎದುರಾಳಿ ಕೆ.ಮೂರ್ತಿಗೆ 7 ಮತಗಳು ದೊರಕಿತು ಎಂದು ಚುನಾವಣಾ ಕರ್ತವ್ಯ ಅಧಿಕಾರಿ ಚಿತ್ತರಂಜನ್ ಎಣಿಕ ಪ್ರಕ್ರಿಯೆ ನಂತರ ಪತ್ರಿಕೆಗೆ ತಿಳಿಸಿದರು.
ಕೊಟ್ಟೂರು ಪಿಕಾರ್ಡ್ ಬ್ಯಾಂಕಿನ ಒಟ್ಟು 13 ನಿರ್ದೇಶಕರ ಸ್ಥಾನಕ್ಕೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಹುಡೇಂನ ಏಕೈಕ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಭಾನುವಾರ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ