ಹಾವೇರಿ :
ಕಾವ್ಯದ ಆಶಯ ಉಣಬಡಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಕ ವಿದ್ಯಾರ್ಥಿಯಾಗಿ ಸಾಹಿತ್ಯದ ವಿವಿಧ ಮಜಲುಗಳನ್ನು ಅರ್ಥೈಸಿಕೊಂಡು ಬೋಧನೆ ಮಾಡಬೇಕಾಗಿದೆ. ಸಾಹಿತ್ಯದ ಲಯ ಹಿಡಿದು ಬೋಧನೆ ಮಾಡುವುದನ್ನು ಕನ್ನಡ ಬೋಧನೆ ಮಾಡುವ ಶಿಕ್ಷಕ ಕರಗತ ಮಾಡಿಕೊಂಡಾಗ, ಅರ್ಥೈಸುವ ಕಲಿಕೆ ಉಂಟಾಗುವುದು. ಅದು ಫಲಿತಾಂಶಕ್ಕೂ ಮತ್ತು ಉಳಿದ ವಿಷಯಗಳ ಕಲಿಕೆಗೆ ಅನುವು ಮಾಡಿಕೊಡುವುದು ಎಂದು ಸಂಪನ್ಮೂಲ ಶಿಕ್ಷಕ ಎಚ್. ಶಿವಣ್ಣ ಹೇಳಿದರು. ಜಿಲ್ಲೆಯ ಕನ್ನಡಭಾಷೆಯನ್ನು ಬೋಧನೆ ಮಾಡುವ ಶಿಕ್ಷಕರಿಗಾಗಿ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾಶಿಕ್ಷಕರ ವೇದಿಕೆ ಆಯೋಜಿಸಿದ್ದ ಪ್ರೇರಣಾ ಕಾರ್ಯಾಗಾರದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕರಾದ ಅಂದಾನಪ್ಪ ವಡಗೇರಿ ಮಾತನಾಡಿ ಮಾತೃಬಾಷೆ ಕನ್ನಡ ಬೋಧನೆ ಮಾಡುವ ಶಿಕ್ಷಕನ ವ್ಯಕ್ತಿತ್ವ ಮಕ್ಕಳ ಮೇಲೆ ಬೇಗನೆ ಪರಿಣಾಮ ಬೀರುವುದು. ಮೌಲ್ಯಾಧಾರಿತ ಬೋಧನೆ ಭಾಷಾ ಬೋಧಕನಿಂದ ಮಾತ್ರ ಸಾಧಿತವಾಗುವುದು ಎಂದು ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಡಯಟ್ ಪ್ರಾಚಾರ್ಯ ಬಸವಲಿಂಗಪ್ಪ ಜಿ.ಎಂ ಮಾತನಾಡಿ ಶಿಕ್ಷಕರಿಗೆ ಪ್ರೇರಣಾ ಕಾರ್ಯಾಗಾರ ಹಮ್ಮಿಕೊಂಡಿರುವುದು ಅಗತ್ಯವಾಗಿದೆ. ಈ ಪ್ರೇರಣೆ ಶಿಕ್ಷಕನಾದವನೂ ಇನ್ನೊಬ್ಬ ಶಿಕ್ಷಕನ ಬೋಧನೆ ಅವಲೋಕಿಸಿ ತಿಳಿಯವುದರಿಂದ ಮಾತ್ರ ಉಂಟಾಗುವುದು.
ಭಾಷಾ ಪಾಂಡಿತ್ಯ ಶಿಕ್ಷಕನಾದವನಿಗೆ ಅವಶ್ಯವಾಗಿ ಬೇಕು. ಹಾಗಾಗಿ ಅವನು ಸತತ ಅಧ್ಯಯನ ಶೀಲದಲ್ಲಿ ತೊಡಗಿಸಿಕೊಳ್ಳಬೇಕು. ಸಾಂದರ್ಭಿಕ ಉದಾಹರಣೆಗಳನ್ನು ಮಗುವಿಗೆ ತಿಳಿಸುತ್ತ ಹಸನ್ಮುಖಿಯಾಗಿ ಶಾಲಾವಾತಾವರಣವನ್ನು ಆಹ್ಲಾದಕರವಾಗಿರುವಂತೆ ನೋಡಿಕೊಳ್ಳುವಲ್ಲಿ ಕನ್ನಡ ಭಾಷೆ ಬೋಧನೆ ಮಾಡುವ ಶಿಕ್ಷಕನ ಪಾತ್ರ ಅಮೂಲ್ಯವಾದುದು ಎಂದರು.
ಕಾರ್ಯಕ್ರಮದಲ್ಲಿ ಸವಣೂರಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎನ್‍ಎಸ್ ಸುಧಾಕರ ವಿಷಯ ಪರಿವೀಕ್ಷಕ ಕೆ. ಮಂಜಪ್ಪ, ಕಾರ್ಯಾಧ್ಯಕ್ಷ ಎಂ. ಎಸ್. ಕೆಂಚನಗೌಡ್ರ, ಕೋಶಾಧ್ಯಕ್ಷ ಮುದ್ದಳಪ್ಪನವರ, ಸಂಪನ್ಮೂಲ ಶಿಕ್ಷಕರಾದ ಜಗದೀಶ ಹೆಂಡೆಗಾರ, ಚಿದಾನಂದ ಜಡಿಮಠ, ಎಲ್ಲ ತಾಲೂಕುಗಳ ಭಾಷಾಬೋಧನೆಯ ವೇದಿಕೆಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ವಿಷಯ ಪರಿವೀಕ್ಷಕ ಈರಪ್ಪ ಲಮಾಣಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಅಧ್ಯಕ್ಷ ಬಿ. ಎಫ್. ದೊಡ್ಡಮನಿ ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆ ಕಬ್ಬೂರಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಶ್ರೀಧರ ಕೆ. ಎಚ್. ವಂದಿಸಿದರು. ಶಿಕ್ಷಕರಾದ ನಿರಂಜನ ಗುಡಿ, ಎಸ್. ಪಿ. ಮಠದ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ