ರೈತ ಮುಖಂಡರ ಪೂರ್ವಭಾವಿ ಸಭೆ

ಬ್ಯಾಡಗಿ:

         ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪೊಳ್ಳು ಭರವಸೆ ಕೊಡುವುದನ್ನು ನಿಲ್ಲಿಸಿ ಮೊದಲು, ಮೂಲ ನಕ್ಷೆಯಂತೆ ಬ್ಯಾಡಗಿ ತಾಲ್ಲೂಕಿನ ಆಣೂರು ಗುಡ್ಡಕ್ಕೆ ನೀರು ತರುವ ಮೂಲಕ ಬ್ಯಾಡಗಿ ಸೇರಿದಂತೆ ಹಿರೇಕೆರೂರು ಹಾವೇರಿ ತಾಲ್ಲೂಕುಗಳ 36 ಗ್ರಾಮಗಳ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಬರುವ ಬಜೆಟ್‍ನಲ್ಲಿ ರೂ.600 ಕೋಟಿ ಮೀಸಲಿಡಬೇಕು, ಇಲ್ಲದೇ ಹೋದಲ್ಲಿ ಬರುವ ಫೆ.4 ರಿಂದ ಅನಿಧಿಷ್ಟಾವಧಿಯವರೆಗೆ ಬ್ಯಾಡಗಿ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತ ಮುಖಂಡ ಗಂಗಣ್ಣ ಎಲಿ ಎಚ್ಚರಿಸಿದರು.

      ಪಟ್ಟಣದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 36 ಗ್ರಾಮಗಳ ರೈತ ಮುಖಂಡರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ 2010 ರಿಂದಲೇ ಹೋರಾಟ ಮಾಡುತ್ತಾ ಬಂದಿದೆ, ಇವುಗಳ ನಡುವೆ ರೈತ ಸಂಘದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಶಿವಣ್ಣನವರ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿದ್ದೇ ಆದಲ್ಲಿ ನಿಮ್ಮೆಲ್ಲ ಭರವಸೆ ಈಡೇರಿಸುವುದಾಗಿ ಹೇಳಿಕೆ ನೀಡಿದ್ದರು, ಆದರೆ ಶಾಸಕರಾಗಿ 5 ವರ್ಷಗಳ ಅಧಿಕಾರ ಅನುಭವಿಸಿದರೂ ಯೋಜನೆ ಅನುಷ್ಠಾನಗೊಳಿಸದೇ ಹೋಗಿದ್ದು ರೈತರ ಪಾಲಿಗೆ ಖೇದಕರ ಸಂಗತಿ ಎಂದರು.

       ಯೋಜನೆಯ ಗಾತ್ರ ಕಡಿತಗೊಳಿಸಲಾಯಿತು:ಚಿಕ್ಕಪ್ಪ ಛತ್ರದ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಯೋಜನೆಯ ಗಾತ್ರವನ್ನು 91 ಕೋಟಿ ರೂ.ಗಳಿಗೆ ಕಡಿತಗೊಳಿಸಿ ಅಸುಂಡಿ ಸೇರಿದಂತೆ ರಾಣೆಬೆನ್ನೂರ ತಾಲ್ಲೂಕಿನ ಕೆಲ ಗ್ರಾಮಗಳಿಗಷ್ಟೇ ಸೀಮಿತವಾಗುವಂತೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಅವಸರದಲ್ಲಿ ಚಾಲನೆ ನೀಡಿ ಕೈತೊಳೆದುಕೊಂಡರು, ಸದರಿ ಯೋಜನೆಗೆ ನಮ್ಮ ವಿರೋಧವಿಲ್ಲ ಅಲ್ಲಿರುವವರೂ ಸಹ ನಮ್ಮ ಸಹೋದರರೇ, ಆದರೆ ತಾಲೂಕಿನ ರೈತರ ಗತಿ ಏನಾಯಿತು..? ಎಂಬುದನ್ನು ತಿರುಗಿಯೂ ನೋಡದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವರ್ತನೆ ನಿಜಕ್ಕೂ ರೈತ ಸಮುದಾಯಕ್ಕೆ ಬೇಸರ ತರಿಸಿದ್ದು ಇದನ್ನೂ ನಾವು ಮರೆತಿಲ್ಲ ಎಂದರು.

        ಕೆರೆಗಳನ್ನು ತುಂಬಿಸಿ ಪುಣ್ಯಕಟ್ಟಿಕೊಳ್ಳಿ: ಕಿರಣ ಗಡಿಗೋಳ ಮಾತನಾಡಿ, ಪೊಳ್ಳು ಭರವಸೆಗಳನ್ನು ನೀಡುತ್ತಿರುವ ಭ್ರಷ್ಟ ಸರ್ಕಾರಗಳಿಂದ ರೈತ ಸಮುದಾಯ ಏನನ್ನೂ ನಿರೀಕ್ಷಿಸದಂತಾಗಿದೆ, ಈಗಾಗಲೇ ಸಾವಿರ ಅಡಿ ಕೊಳವೆ ಭಾವಿ ಕೊರೆಸಿದರೂ ನೀರು ಸಿಗದಂತಾಗಿದೆ, ಜೀವಜಲವನ್ನು ಉಳಿಸಿಕೊಳ್ಳಲು ಸರ್ಕಾರದ ಬಳಿ ಯಾವುದೇ ಉದಾತ್ತ ಯೋಜನೆಗಳಿಲ್ಲ, ಕೇವಲ 5ಕಿ.ಮೀ.ಅಂತರದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಹಾಯ್ದು ಹೋಗಿದ್ದರೂ ಬ್ಯಾಡಗಿ ತಾಲ್ಲೂಕಿನ ರೈತರಿಗೆ ಹನಿ ನೀರು ಕೊಟ್ಟಿರುವುದಿಲ್ಲ ಎಂದು ಆರೋಪಿಸಿದರು.

        ಯಾವುದೇ ಪ್ರಮುಖ ನದಿಗಳು ತಾಲೂಕಿನಲ್ಲಿಲ್ಲ: ಡಾ.ಕೆ.ವಿ.ದೊಡ್ಡಗೌಡ್ರ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲ, ಅದರಲ್ಲಿಯೂ ಮಳೆಗಾಲಗಳು ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಾ ಸಾಗಿವೆ, ಹೀಗಾಗಿ ರೈತರು ಕಂಗಾಲಾಗಿದ್ದು ಕೃಷಿ ಚಟುವಟಿಕೆಗಳೇ ಸ್ಥಗಿತಗೊಳ್ಳುವ ಹಂತಕ್ಕೆ ಬಂದು ತಲುಪಿವೆ, ಕೂಡಲೇ ಸರ್ಕಾರ ಬ್ಯಾಡಗಿ ತಾಲೂಕಿನ ರೈತರಿಗೆ ಅವಶ್ಯವಿರುವ ಕೆರೆ ತುಂಬಿಸುವ ಕಾರ್ಯಕ್ಕೆ ಪ್ರಸಕ್ತ ಬಜೆಟ್‍ನಲ್ಲಿ ಅನುದಾನ ಮೀಸಲಿಡುವಂತೆ ಆಗ್ರಹಿಸಿದರು.

        ಪ್ರತಿಭಟನೆ ಕೈಬಿಡುವುದಿಲ್ಲ: ಮೌನೇಶ ಬಡಿಗೇರ ಮಾತನಾಡಿ, ಅಹೋರಾತ್ರಿ ಧರಣಿ ನಡೆಸುವ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಕೃಷಿ ಸೇರಿದಂತೆ ರೈತರು ಅಳುವು ಉಳಿವಿನ ಪ್ರಶ್ನೆ ಉದ್ಭವಿಸಿದೆ, ಸರಣಿ ವೈಫಲ್ಯದಿಂದ ಕಂಗಾಲಾಗಿದ್ದೇವೆ ಕೂಡಲೇ ಮೂಲ ನಕ್ಷೆಯಂತೆ ರಾಣೆಬೆನ್ನೂರ ತಾಲೂಕಿನ ಹೊಳೆ ಆನ್ವೇರಿಯಿಂದ ಆಣೂರು ಗುಡ್ಡದಲ್ಲಿರುವ ಕೆರೆಗೆ ನೀರು ತುಂಬಿಸಿ ಅಲ್ಲಿಂದ ಗುರುತ್ವಾಕರ್ಷಣೆ (ಗ್ರ್ಯಾವಿಟಿ ಲೆವೆಲ್) ಆಧಾರದ ಮೇಲೆ 36 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಬೇಕು ಇಲ್ಲದೇ ಹೋದಲ್ಲಿ ರೈತರ ಪ್ರತಿರೋಧವನ್ನು ಎದುರಿಸಲಿ ಎಂದರು.

        ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರ, ಮಹದೇವಪ್ಪ ಶಿಡೇನೂರ, ಮಲ್ಲೇಶ ಕೊಪ್ಪದ, ಬಸವರಾಜ ಬಣಕಾರ, ಶಂಕ್ರಪ್ಪ ಕಾಟೇನಹಳ್ಳಿ, ಬಸಲಿಂಗಪ್ಪ ಬ್ಯಾಡಗಿ, ಚಂದ್ರಪ್ಪ ಕೊಪ್ಪದ, ಚಿದಾನಂದ ಬಡ್ಡಿಯವರ, ಹನುಮಂತಪ್ಪ ಮಲ್ಲಾಡದ, ಗುಡ್ಡಪ್ಪ ಗುದ್ನೂರು, ನಿಂಗಪ್ಪ ಹೆಗ್ಗಣ್ಣನವರ, ಬಸಪ್ಪ ಬನ್ನಿಹಟ್ಟಿ, ನಾಗಪ್ಪ ಬನ್ನಿಹಟ್ಟಿ, ನಾಗಪ್ಪ ಸಪ್ಪಣ್ಣನವರ, ಹನುಮಂತಪ್ಪ ಅರಳೀಕಟ್ಟಿ, ಸಿದ್ದಯ್ಯ ಪಾಟೀಲ, ವಿಜಯ ಎಲಿಗಾರ, ಶಿವಯೋಗಿ ಎಲಿಗಾರ, ಬಸವರಾಜ ಬುಡಪನಹಳ್ಳಿ, ಈರನಗೌಡ ಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link